Saturday, October 19, 2024

ಸತ್ಯ | ನ್ಯಾಯ |ಧರ್ಮ

ಒಂದು ಕಡೆಯವರು ಮಾತ್ರವೇ ಪ್ರೀತಿ ತೋರಿದರೆ ಸಾಕಾಗುವುದಿಲ್ಲ: ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕುಮಾರಸ್ವಾಮಿ ಅಸಮಾಧಾನ

ಮಂಡ್ಯ: ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯ ಟಿಕೆಟ್‌ ಕಗ್ಗಂಟು ಮುಂದುವರೆದಿದೆ. ಬಿಜೆಪಿ ನಾಯಕರ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸುವ ಮೂಲಕ ಕುಮಾರಸ್ವಾಮಿ ಆ ಕ್ಷೇತ್ರದ ಕುತೂಹಲವನ್ನು ರಾಜಕಾರಣದ ಆಸಕ್ತರಲ್ಲಿ ಇನ್ನಷ್ಟು ಹೆಚ್ಚಾಗಿಸಿದ್ದಾರೆ.

ಈ ಕುರಿತು ಮಂಡ್ಯದಲ್ಲಿ ಮಾತನಾಡಿದ ಅವರು “ಎಲ್ಲಾ ಸುಗಮವಾಗಿ ಮಾಡಬೇಕೆಂದಿದೆ. ಯಾರು ಯಾರ ಮೇಲೂ ದಬ್ಬಾಳಿಕೆ ಮಾಡಲಾಗಲ್ಲ. ಪ್ರೀತಿ ವಿಶ್ವಾಸದಿಂದ ಚುನಾವಣೆ ನಡೆಸಬೇಕು. ವಿಶ್ವಾಸಕ್ಕೆ ಧಕ್ಕೆಯಾಗಬಾರದು. ಅದನ್ನು ಎರಡು ಪಕ್ಷದ ನಾಯಕರು ಮನವರಿಕೆ ಮಾಡಿಕೊಳ್ಳಬೇಕು‌. ಒಂದು ಕಡೆ ಪ್ರೀತಿ ವಿಶ್ವಾಸವಿದ್ದರೆ ಸಾಲದು. ಎರಡು ಕಡೆಯೂ ಪರಸ್ಪರ ಸ್ಪಂದನೆ ಇರಬೇಕು” ಎಂದು ಕಟುವಾಗಿ ಹೇಳಿದ್ದಾರೆ.

ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು, ಜೆಡಿಎಸ್‌ ಪಕ್ಷಕ್ಕೆ ಬಿಜೆಪಿ ಮರುಜನ್ಮ ನೀಡಿದೆ ಎನ್ನುವ ಯತ್ನಾಳ್‌ ಹೇಳಿಕೆಯನ್ನು ಟೀಕಿಸಿದರು. ಈ ಕುರಿತು ಮಾತನಾಡಿದ ಅವರು “ಯಾರಿಗೆ ಯಾರು ಮರುಜನ್ಮ ಕೊಟ್ಟಿದ್ದಾರೆ ಎಂದು ಬೀದಿಯಲ್ಲಿ ಚರ್ಚೆ ಮಾಡಲು ಆಗಲ್ಲ. ಯಾವ ರೀತಿ ಶಕ್ತಿ ತುಂಬಿದೆ ಎಂಬ ಚರ್ಚೆ ಈಗ ಉಪಯೋಗವಾಗಲ್ಲ. ದೆಹಲಿ ನಾಯಕರಿಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯಿದೆ. ಅದನ್ನು ನಾನು ಬೀದಿಯಲ್ಲಿ ನಿಂತು ಚರ್ಚೆ ಮಾಡಲೇ? ಅದರ ಅವಶ್ಯಕತೆಯಿಲ್ಲ” ಎಂದರು.

ನಾನು ಈ ಕ್ಷಣದವರೆಗೂ ಜನತಾದಳ ಬಿಜೆಪಿ ಎಂದು ಬೇರ್ಪಡಿಸಿ ಮಾತನಾಡಿಲ್ಲ. ಎನ್‌ಡಿಎ ಅಭ್ಯರ್ಥಿ ಎಂದೆ ಮಾತನಾಡಿದ್ದೇನೆ. ತ್ಯಾಗದ ಬಗ್ಗೆ ಮಾತನಾಡುವವರು ಅವರ ಆತ್ಮಕ್ಕೆ ಪ್ರಶ್ನೆ ಹಾಕಿಕೊಳ್ಳಬೇಕು‌. ನಮ್ಮ ಮೈತ್ರಿಗೆ ಅಡ್ಡಿ ಆಗಬಾರದು ಎಂದು ನಡೆದುಕೊಳ್ಳುತ್ತಿದ್ದೇನೆ ಎಂದು ಹೇಳಿದರು.

ಚನ್ನಪಟ್ಟಣ ಟಿಕೆಟ್‌ ಕುರಿತು ಇಂದು ಸಂಜೆ ಚರ್ಚೆ ನಡೆಯಲಿದ್ದು, ಈ ವಿಷಯವಾಗಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರುವುದಾಗಿ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page