Monday, November 18, 2024

ಸತ್ಯ | ನ್ಯಾಯ |ಧರ್ಮ

ಮಣಿಪುರದಲ್ಲಿ ಮುಂದುವರಿದ ಉದ್ವಿಗ್ನತೆ‌, ಗುಂಡಿನ ದಾಳಿಗೆ ಓರ್ವ ಸಾವು

ಇಂಫಾಲ: ಮಣಿಪುರದಲ್ಲಿ ಉದ್ವಿಗ್ನತೆ ಮುಂದುವರಿದಿದೆ. ಹಿಂಸಾತ್ಮಕ ಜಿರಿಬಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗಳು ನಡೆದವು. ಈ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಪ್ರತಿಭಟನಾಕಾರ ಸಾವನ್ನಪ್ಪಿದ್ದಾನೆ.

ಭಾನುವಾರ ರಾತ್ರಿ ಹಲವು ಮುಖಂಡರ ಆಸ್ತಿ ಹಾಗೂ ಪಕ್ಷದ ಕಚೇರಿಗಳ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ 21 ವರ್ಷದ ಅಥೋಬಾ ಎನ್ನುವಾತ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಆದರೆ ಆತನ ಮೇಲೆ ಗುಂಡು ಹಾರಿಸಿದವರು ಯಾರು ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಿಲ್ಲ.

ಪ್ರತಿಭಟನಾಕಾರರ ಗುಂಪನ್ನು ಚದುರಿಸಲು ಪೊಲೀಸ್ ವಿಶೇಷ ಕಮಾಂಡೋಗಳು ಶಸ್ತ್ರಾಸ್ತ್ರಗಳನ್ನು ಬಳಸಿದರು ಎಂದು ಜನರು ಆರೋಪಿಸಿದರು. ಗುಂಡಿನ ದಾಳಿಯಲ್ಲಿ ಅಥೋಬಾ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಮತ್ತೊಂದೆಡೆ, ಮಣಿಪುರದಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಕುಕಿ ಉಗ್ರಗಾಮಿಗಳು ಕೊಂದಿರುವ ಬಗ್ಗೆ ಪ್ರತಿಭಟನೆಗಳು ಮತ್ತು ಹಿಂಸಾತ್ಮಕ ಘಟನೆಗಳು ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಎರಡು ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇಂಫಾಲ್ ಪಶ್ಚಿಮ ಮತ್ತು ಪೂರ್ವ ಜಿಲ್ಲೆಗಳಲ್ಲಿ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಮಂಗಳವಾರದವರೆಗೆ ಮುಚ್ಚಲಾಗುವುದು ಎಂದು ಸರ್ಕಾರ ಸೋಮವಾರ ಪ್ರಕಟಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page