Wednesday, November 27, 2024

ಸತ್ಯ | ನ್ಯಾಯ |ಧರ್ಮ

ಸಂಭಾಲ್‌ ಸುತ್ತ ಕಟ್ಟಿದ ಸುಳ್ಳುಗಳು!

ಸಂಭಾಲ್‌ ಮಸೀದಿಯ ಮುಂದೆ ನಾಲ್ವರು ಸಾವನ್ನಪ್ಪಿದ್ದಾರೆ. ನಾಲ್ವರೂ ಭಾರತೀಯರು, ಆದರೆ ನಾಲ್ಕು ಮುಸ್ಲಿಮರು. ಬಹುಶಃ ಪೊಲೀಸರು ಅವರನ್ನೂ ಹಿಂದೂಗಳನ್ನು ನಡೆಸಿಕೊಂಡಂತೆ ನಡೆಸಿಕೊಂಡಿದ್ದರೆ ಬದುಕಿರುತ್ತಿದ್ದರೋ ಏನೋ!

ಹಿಂದೂಗಳು ಕೋಮುದ್ರಿಕ್ತರಾಗಿ ನಡೆದುಕೊಂಡರೆ ಪೊಲೀಸರ ಗುಂಡು ಕೆಲಸ ಮಾಡುವುದಿಲ್ಲ, ಮಾಡಿದರೂ ಪಟಾಕಿ ಬೆಂಕಿಕೊಟ್ಟು ಎಸೆದಂತೆ ಗಾಳಿಯಲ್ಲಿ ಹಾರುತ್ತವೆ. ಹಿಂದೂವಿನ ಎದೆಯನ್ನು ಅದು ಸೀಳುವುದಿಲ್ಲ. ಹಿಂದೂಗಳು ಇತರರ ಮನೆಗಳು , ವಾಹನಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಬೆಂಕಿ ಹಚ್ಚುವ ಮತ್ತು ದಾಳಿ ಮಾಡುವ ಸುದ್ದಿಯನ್ನು ನೀವು ಓದಿರುತ್ತೀರಿ. ಅನೇಕ ಕಡೆ ಹಿಂದುತ್ವದವರು ದಲಿತ-ಮುಸಲ್ಮಾನರ ಮೇಲೆ ಗುಂಪುದಾಳಿ ನಡೆಸಿದ್ದಾರೆ. ಆದರೆ ಅವರ್ಯಾರ ಮೇಲೂ ಪೊಲೀಸರು ಸಂಭಾಲ್‌ನಲ್ಲಿ ಮಾಡಿದಂತೆ ಪೊಲೀಸರು ನಡೆದುಕೊಂಡ ಸುದ್ದಿ ಇಲ್ಲ.  

ಹಿಂದೂ ಕನ್ವಾರಿಯಾಗಳು ಜನರನ್ನು ಮಾತ್ರವಲ್ಲದೆ ಪೊಲೀಸರ ಮೇಲೂ ಹಲ್ಲೆ ನಡೆಸಿರುವ ವೀಡಿಯೊಗಳನ್ನು ನೀವು ನೋಡಿರುತ್ತೀರಿ , ಆದರೂ ಪೊಲೀಸರು ಮೂಕರಾಗಿ ನೋಡುತ್ತಿದ್ದರು. ಪ್ರಶ್ನೆ ಎಂದರೆ, ಪ್ರಕ್ಷುಬ್ಧ ಹಿಂದುತ್ವವಾದಿ ಗುಂಪು ಕಲ್ಲು ತೂರಾಟದ ಮಾಡಿದರೆ ಅವರ ಜೊತೆಗೂ ಪೊಲೀಸರು ಹೀಗೆ ನಡೆದುಕೊಳ್ಳುತ್ತಾರಾ?

ಪೊಲೀಸರು ಹೇಳುತ್ತಾರೆ, ತಾವು ಯಾವುದೇ ಮುಸ್ಲಿಮರನ್ನು ಕೊಂದಿಲ್ಲ ಎಂದು. ಅವರ ಪ್ರಕಾರ, ಮುಸ್ಲಿಮರೇ ಗುಂಡು ಹಾರಿಸಿಕೊಂಡು ನಾಲ್ವರನ್ನು ಕೊಂದರು. ಇದೊಂದು ಹೊಸ ಬದಲಾವಣೆ: ಮುಸ್ಲೀಮರ ಸಾವಿಗೆ ಅವರನ್ನೇ ದೂಷಿಸುವುದು. ಡಿಸೆಂಬರ್ 2019 ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ 21 ಮುಸ್ಲಿಮರು ಕೊಲ್ಲಲ್ಪಟ್ಟಾಗ ಪೊಲೀಸರು ಇದೇ ಮಾತನ್ನು ಹೇಳಿದ್ದರು. ಮುಸ್ಲಿಮರನ್ನು ಕೊಂದ ಆ ಗುಂಡುಗಳು ಅವರ ಅಧಿಕೃತ ಬಂದೂಕುಗಳಿಗೆ ಸೇರಿದ್ದಲ್ಲ ಎಂದು ಪೊಲೀಸರು ಹೇಳಿದ್ದರು. ದೆಹಲಿ ಹಿಂಸಾಚಾರವನ್ನು ಮುಸ್ಲಿಂ ಕಾರ್ಯಕರ್ತರ ಮೇಲೆ ಆರೋಪಿಸಲಾಗಿದೆ ಮತ್ತು ಎಲ್ಗರ್ ಪರಿಷತ್ ಹಿಂಸಾಚಾರದಲ್ಲೂ ಮುಸಲ್ಮಾನರ ಮೇಲೆ ಗೂಬೆ ಕೂರಿಸಲಾಗಿದೆ.

ಮುಸ್ಲಿಮರನ್ನು ಪ್ರಚೋದಿಸಿ, ಹಿಂಸಾಚಾರಕ್ಕೆ ಕಾರಣನಾಗಿದ್ದಾನೆ ಎಂದು ಸಂಭಾಲ್ ಸಂಸದ ಮತ್ತು ಸ್ಥಳೀಯ ಶಾಸಕರ ಪುತ್ರನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮುಸ್ಲಿಮರ ಹಿಂಸಾಚಾರ ಮತ್ತು ಹತ್ಯೆಯ ನಂತರ ಪೊಲೀಸರು ಧ್ವಜ ಮೆರವಣಿಗೆಗಳನ್ನು ನಡೆಸುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ!

ಮುಸ್ಲಿಮರ ಸಾವಿಗೆ ಪೊಲೀಸ್ ಅಧಿಕಾರಿಗಳು ವಿಷಾದ ಕೂಡ ವ್ಯಕ್ತಪಡಿಸಲಿಲ್ಲ. ಬದಲಾಗಿ, ಮೃತರಾದವರ ಕುಟುಂಬದವರಿಗೆ, “ಆಪಾದನೆಗಳನ್ನು ಮಾಡುವ ಮೊದಲು, ಅವರು [ಮೃತರ ಕುಟುಂಬ] ತಮ್ಮ ಮಕ್ಕಳು ಕಲ್ಲೆಸೆಯಲು ಏಕೆ ಅಲ್ಲಿಗೆ ಬಂದರು ಎಂದು ಕೇಳಬೇಕು. ಅವರು ಯಾವುದೇ ಧಾರ್ಮಿಕ ಕೆಲಸ, ಪವಿತ್ರ ಕಾರ್ಯ ಅಥವಾ ಉದ್ಯೀಗ ಮಾಡಲು ಹೋಗಿದ್ದಲ್ಲ,” ಎಂದು ಹೇಳುತ್ತಾರೆ. ಜನಸಮೂಹ ನಡೆಸಿದ ಈ ಕಲ್ಲು ತೂರಾಟ ಮತ್ತು ಗುಂಪುಗೂಡುವಿಕೆಯು ‘ಪ್ರಚೋದಿತ’ ಕೃತ್ಯವಾಗಿ ಕಂಡುಬಂದಿದೆ ಎಂದು ಪೊಲೀಸರು ಹೇಳುತ್ತಾರೆ.

ಸ್ಥಳೀಯ ಸಂಸದ ಮತ್ತು ಶಾಸಕನ ಪುತ್ರನ ವಿರುದ್ಧದ ಎಫ್‌ಐಆರ್‌ ದಾಖಲಾಗಿದೆ. ಮುಸಲ್ಮಾನರ ಮೇಲೆ ಪೊಲೀಸರು ಹೇಳುತ್ತಿರುವ ಮಾತುಗಳನ್ನು ಸಾಬೀತು ಮಾಡಲು- ಸಮೀಕ್ಷಾ ತಂಡವು ಮಸೀದಿಯನ್ನು ತಲುಪಿದ ನಂತರ ನೆರೆದಿದ್ದ ಮುಸ್ಲಿಮರು ಹಿಂಸಾಚಾರಕ್ಕೆ ಸಂಚುಕೋರರಿಂದ ಸನ್ನದ್ಧರಾಗಿದ್ದರು ಮತ್ತು ಪ್ರಚೋದಿತರಾಗಿದ್ದರು ಎಂದು ಹೇಳುತ್ತಿದ್ದಾರೆ. ಮಸೀದಿ ಬಳಿ ಹಿಂಸಾಚಾರ ನಡೆಸಲು ಸ್ವಯಂಪ್ರೇರಿತವಾಗಿ ಜನರು ಬರುತ್ತಾರೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಇವರು ಜೈಶ್ರೀರಾಮ್‌ ಘೋಷಣೆಯ ಕೂಗುವುದನ್ನು ಕೇಳಿ ಆಕ್ರೋಶಿತರಾಗಿದ್ದರು ಎಂದು ಪೊಲೀಸರು ಹೇಳುತ್ತಾರೆ.

ಅಂದರೆ, ಜೈ ಶ್ರೀರಾಮ್‌ ಎಂದು ಘೋಷಣೆ ಕೂಗುತ್ತಾ ಗಲಭೆ ಎಬ್ಬಿಸಲು ಪ್ರಚೋದನೆ ಮಾಡಿದ್ದು ಮುಸಲ್ಮಾನರೇ?

ನ್ಯಾಯಾಲಯದಿಂದ ನೇಮಿಸಲ್ಪಟ್ಟ ವ್ಯಕ್ತಿಯೊಂದಿಗೆ ಜನಸಂದಣಿಯನ್ನು ಮಸೀದಿಗೆ ಬರದಂತೆ ತಡೆಯುವುದು ಮತ್ತು ಪ್ರಚೋದನಕಾರಿ ಘೋಷಣೆಗಳನ್ನು ನಿಲ್ಲಿಸುವುದು ಆಡಳಿತ ಮತ್ತು ಪೊಲೀಸರ ಕರ್ತವ್ಯವಲ್ಲವೇ? ಸರ್ವೆ ಮುಗಿಸಿ ಅಧಿಕಾರಿಗಳು ತೆರಳುವಾಗ ಜೈ ಶ್ರೀರಾಮ್ ಘೋಷಣೆಗಳು ಕೇಳಿ ಬಂದವು. ಸಮೀಕ್ಷೆ ಆಗಬೇಕಿದ್ದರೆ ಅಲ್ಲಿ ಜನಜಂಗುಳಿ ಏಕೆ ಬೇಕು? ‘ಜೈ ಶ್ರೀರಾಮ್’ ಘೋಷಣೆಗಳು ಹೇಗೆ ಬಂದವು? ಈ ರೀತಿ ಪ್ರಚೋದನೆ ನೀಡಲು ಅಧಿಕಾರಿಗಳು ಹೇಗೆ ಬಿಟ್ಟರು?

ಈ ಇಡೀ ಕೇಸ್‌ ನ್ಯಾಯಾಲಯಕ್ಕೆ ಸಂಬಂಧಿಸಿದ್ದು. ಒಂದು ನಿರ್ದಿಷ್ಟ ದೇವಾಲಯವು ಮೊದಲು ಮಸೀದಿಯಾಗಿತ್ತು ಎಂದು ಮುಸ್ಲಿಂ ಫಿರ್ಯಾದಿ ಕೋರ್ಟ್‌ಗೆ ಹೋಗುವ ಸನ್ನಿವೇಶವನ್ನು ಊಹಿಸಿ ಅಥವಾ ಬೌದ್ಧರು ನಿರ್ದಿಷ್ಟ ದೇವಾಲಯವು ಮೊದಲು ಬೌದ್ಧ ದೇವಾಲಯವಾಗಿತ್ತು ಎಂದು ಪ್ರತಿಪಾದಿಸಿ ಕೋರ್ಟ್‌ನ ಸಹಾಯ ಕೇಳುವ ಸನ್ನಿವೇಶವನ್ನು ಯೋಚಿಸಿ. ಈ ಅರ್ಜಿಗಳಿಗೆ ಆದ್ಯತೆ ನೀಡಿ ನ್ಯಾಯಾಲಯ ಪರಿಗಣಿಸುತ್ತದೆಯೇ? ದೇವಾಲಯ ಬರುವ ಮೊದಲು ಅಲ್ಲಿ ಬೌದ್ಧ ಚೈತ್ಯ ಅಥವಾ ಸ್ತೂಫ ಇತ್ತೇ ಎಂಬುದನ್ನು ಪತ್ತೆ ಮಾಡಲು ಸಮೀಕ್ಷೆಗೆ ಕೋರ್ಟ್‌ ಅನುಮತಿ ನೀಡುತ್ತದೆಯೇ? ಎಲ್ಲರಿಗೂ ಉತ್ತರ ಗೊತ್ತೇ ಇದೆ. ಒಂದೋ ಆ ಅರ್ಜಿಗಳು ವಜಾ ಆಗುತ್ತವೆ, ಇಲ್ಲವೇ ಅರ್ಜಿ ಹಾಕಿದವನಿಗೆ ದಂಡ ವಿಧಿಸುತ್ತಾರೆ.

ಸಂಭಾಲ್‌ನಲ್ಲಿ ಮಾಡಿದ ರೀತಿಯಲ್ಲಿಯೇ ನ್ಯಾಯಾಲಯಗಳು ಇಂತಹ ಪ್ರಕರಣಗಳಲ್ಲಿ ಸಮೀಕ್ಷೆಗಳನ್ನು ನಡೆಸಲು ಬಿಡುತ್ತವೆಯೇ ಎಂದು ನಾವು ಕೇಳಬೇಕಾಗಿದೆ. ಅರ್ಜಿ ಸಲ್ಲಿಕೆಯಾದ ತಕ್ಷಣ ಕ್ರಮಕ್ಕೆ ಆದೇಶ ನೀಡುವಷ್ಟು ನಮ್ಮ ನ್ಯಾಯಾಲಯಗಳು ಯಾವಾಗಿನಿಂದ ದಕ್ಷವಾಗಿ ಕೆಲಸ ಮಾಡಲು ಆರಂಭ ಮಾಡಿದವು? ಈ ಆದೇಶವನ್ನು ತಕ್ಷಣವೇ ಕಾರ್ಯಗತಗೊಳಿಸಲು ತನ್ನ ಎಲ್ಲಾ ಸಂಪನ್ಮೂಲಗಳನ್ನು ನೀಡುವ ಆಡಳಿತ ವ್ಯವಸ್ಥೆ ಇಷ್ಟು ಚುರುಕಾಗಿದ್ದು ಯಾವಾಗ?

ಸಂಭಾಲ್‌ನಲ್ಲಿ ನಡೆದಿರುವುದು ಇದೇ.

ಮಸೀದಿಯ ಮೊದಲು ದೇವಸ್ಥಾನವಿತ್ತು ಎಂಬುದಾಗಿ ಅದರ ಸ್ವರೂಪವನ್ನು ಖಚಿತಪಡಿಸಿಕೊಳ್ಳಲು ಅರ್ಜಿಯನ್ನು ಸಲ್ಲಿಸಲಾಯಿತು. ನ್ಯಾಯಾಧೀಶರು ತಕ್ಷಣವೇ ಆಡಳಿತ ಮತ್ತು ಮಸೀದಿ ಸಮಿತಿಗೆ ನೋಟಿಸ್ ಜಾರಿ ಮಾಡದೆ, ಸಮೀಕ್ಷೆಗೆ ಆದೇಶಿಸಿದರು ಮತ್ತು ಇದಕ್ಕಾಗಿ ಒಬ್ಬ ವ್ಯಕ್ತಿಯನ್ನು ನೇಮಿಸಿದರು. ಆದೇಶ ಬಂದ ಕೆಲವೇ ಗಂಟೆಗಳಲ್ಲಿ ಸ್ಥಳೀಯ ಆಡಳಿತವು ಸರ್ವೆಗೆ ಬೇಕಾದ ವ್ಯವಸ್ಥೆ ನೀಡಿತು. ಇದು ಸ್ಥಳೀಯ ಮುಸ್ಲಿಂ ಜನರಲ್ಲಿ ಅಸಮಾಧಾನ ಮೂಡಿಸಿತು.

ಆದರೆ ಅದಾದ ಎರಡು ದಿನಗಳ ನಂತರ ಯಾವುದೇ ಪೂರ್ವ ಮಾಹಿತಿ ಇಲ್ಲದೆ ತಂಡ ಮತ್ತೆ ದೇವಸ್ಥಾನಕ್ಕೆ ಬಂತು. ಆಡಳಿತವು ಜನರ ಗುಂಪಿನ ಜೊತೆಗೂಡಿ ಮಸೀದಿಯನ್ನು ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿತು. ಸಮೀಕ್ಷೆ ನಡೆಸಲು ಬಂದಿದ್ದ ತಂಡದ ಜೊತೆಗಿದ್ದ ಕೆಲವರು ಹೊರಹೋಗುವಾಗ ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗಿದರು. ಇದು ಸ್ಥಳೀಯ ಮುಸ್ಲಿಮರನ್ನು ಕೆರಳಿಸಿತು. ಅವರು ಕಲ್ಲುಗಳನ್ನು ಎಸೆದರು. ಧರಣಿ ನಿರತ ಜನರ ಮೇಲೆ ನೇರವಾಗಿ ಗುಂಡು ಹಾರಿಸುತ್ತಿರುವುದನ್ನು ಪೊಲೀಸರು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ನಾಲ್ವರು ಕೊಲ್ಲಲ್ಪಟ್ಟರು.

ಈಗ ಪೊಲೀಸರು ಈ ಹತ್ಯೆಯ ಹೊಣೆಯನ್ನು ಹೊತ್ತುಕೊಳ್ಳಲು ನಿರಾಕರಿಸುತ್ತಿದ್ದಾರೆ. ಈ ಹತ್ಯೆಗಳಿಗೆ ಮುಸ್ಲಿಮರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಇಡೀ ಪ್ರತಿಭಟನೆಯನ್ನು ಪಿತೂರಿ ಎಂದು ಕರೆದರು. ಮುಸ್ಲಿಂ ಮುಖಂಡರ ಮೇಲೆ ಕೇಸು ಹಾಕಿದರು.

ಮುಸ್ಲಿಮರು ಸದ್ಯ ಸರ್ಕಾರ ತಮ್ಮ ವಿರುದ್ಧವಾಗಿದೆ ಎಂದು ನಂಬಿದ್ದಾರೆ. ನ್ಯಾಯಾಂಗವೂ ಅವರನ್ನು ಮೂಲೆಗೆ ತಳ್ಳುವ ಪ್ರಕ್ರಿಯೆಗಳನ್ನು ತಣ್ಣಗಾಗಿಸುತ್ತಿದೆ. ಎಲ್ಲವನ್ನೂ ಕಾನೂನುಬದ್ಧವಾಗಿ ಮಾಡಲಾಗುತ್ತಿದೆ. ಮುಸ್ಲಿಮರು ಪ್ರತಿಭಟಿಸಲು ಸಾಧ್ಯವಿಲ್ಲ, ಮಾಡಿದರೆ ಅವರು ದೇಶದ ಕಾನೂನನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸುತ್ತಾರೆ.

ಈ ನೆಲದ ಕಾನೂನಿಗೆ ಏನಾಯಿತು?- 1991 ರ ಪೂಜಾ ಸ್ಥಳಗಳ ಕಾಯಿದೆಗೆ ಏನಾಯಿತು? ಈ ಪ್ರಶ್ನೆಯನ್ನು ಬದಿಗಿಟ್ಟು ಒಂದು ರಚನೆಯ ಬಗ್ಗೆ ತಮ್ಮ ಕುತೂಹಲವನ್ನು ತಣಸಿಕೊಳ್ಳಲು ಹಿಂದೂಗಳಿಗೆ ಎಲ್ಲ ಹಕ್ಕಿದೆ ಎಂದು ಹೇಳಿದ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮಾತುಗಳನ್ನು ನೆನಪು ಮಾಡಿಕೊಳ್ಳಬೇಕು. ಇದರ ಅರ್ಥ, ಒಬ್ಬ ಹಿಂದು ತಾನು ಕಂಡ ಮಸೀದಿಯ ಅಡಿಯಲ್ಲಿ ದೇವಾಲಯ ಇದ್ಯಾ ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕನ್ನು ಹೊಂದಿದ್ದಾನೆ, ಕಂಡ ಕಂಡ ಅನ್ಯರ ಧಾರ್ಮಿಕ ಕೇಂದ್ರಗಳಿಗೆ ಕನ್ನ ಹಾಕಬಹುದು ಎಂದೆ? ಇದಾದ ನಂತರ, ಹಿಂದುತ್ವದವರು ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಭಾರತದಾದ್ಯಂತ ಮಸೀದಿಗಳು, ದರ್ಗಾಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ಬಗ್ಗೆ ಕುತೂಹಲವನ್ನು ಬೆಳೆಸಲು ಪ್ರಾರಂಭಿಸಿದರು. ಚಂದ್ರಚೂಡ್ ತೋರಿದ ಉದಾಸೀನವನ್ನು, ನಿರಾಳತೆಯನ್ನು ಈಗ ಎಲ್ಲ ಪ್ರಾಥಮಿಕ ನ್ಯಾಯಾಲಯಗಳು ತೋರಿಸುತ್ತಿವೆ. ಮುಸ್ಲಿಮರು ಪ್ರತಿಭಟಿಸಲು ಮತ್ತು ವಿರೋಧಿಸಲು ಹೋದರೆ ಬಲಿಕೊಡಬೇಕಾಗಿ ಬರುವುದು ಅರ ಜೀವವನ್ನು ಮಾತ್ರ.

ಲೇಖನ: ಚರಣ್‌ ಐವರ್ನಾಡು

Related Articles

ಇತ್ತೀಚಿನ ಸುದ್ದಿಗಳು

You cannot copy content of this page