Monday, June 17, 2024

ಸತ್ಯ | ನ್ಯಾಯ |ಧರ್ಮ

“ಕಬ್ಜ”ದ ಟೀಸರ್ ಬಿಡುಗಡೆಗೆ ದಿನಾಂಕ ಫಿಕ್ಸ್

ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿರುವ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ”ದ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್ 17 ರ ಸಂಜೆ 5 ಗಂಟೆಗೆ ಆನಂದ್ ಆಡಿಯೋ ಮೂಲಕ ಬಹು ನಿರೀಕ್ಷಿತ ಈ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಈ ಚಿತ್ರ ಆರಂಭದಿಂದಲೂ ಸುದ್ದಿಯಲ್ಲಿದೆ.

ಈ ಚಿತ್ರದ ಟೀಸರ್ ಯಾವಾಗ ಬರಬಹುದೆಂದು ಉಪ್ಪಿ ಅಭಿಮಾನಿ ಸಮೂಹ ಕಾತುರದಿಂದ ಕಾಯುತ್ತಿತ್ತು. ಈಗ ಆ ಸಮಯ ನಿಗದಿಯಾಗಿದೆ. ಚಿತ್ರದ ನಾಯಕ ಉಪೇಂದ್ರ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ “ಕಬ್ಜ” ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ.

ಕನ್ನಡಿಗರ ಹೆಮ್ಮೆಯ “ಕೆ.ಜಿ.ಎಫ್ 2” ಚಿತ್ರ ಈಗಾಗಲೇ ವಿಶ್ವದಾದ್ಯಂತ ವಿಜಯ ಪತಾಕೆ ಹಾರಿಸಿದೆ‌.  ಅಪಾರ ವೆಚ್ಚದಲ್ಲಿ ನಿರ್ಮಾಣವಾಗಿರುವ “ಕಬ್ಜ” ಚಿತ್ರ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದೆ. ಈ ಚಿತ್ರ ಗೆದ್ದರೆ ಮತ್ತೊಮ್ಮೆ ಬಾಲಿವುಡ್ ನಲ್ಲಿ ಕನ್ನಡಿಗರು ಸದ್ದು ಮಾಡಲಿದ್ದಾರೆ ಎನ್ನುತ್ತಿರುವ ಕನ್ನಡ ಕಲಾಭಿಮಾನಿಗಳು, “ಕಬ್ಜ”  ಪ್ಯಾನ್ ಇಂಡಿಯಾ ಚಿತ್ರ ಪ್ರಪಂಚದಾದ್ಯಂತ ಪ್ರಚಂಡ ಯಶಸ್ಸು ಸಾಧಿಸುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ.

ಆರ್ ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸೆಪ್ಟೆಂಬರ್ ಹದಿನೇಳರಂದು ಟೀಸರ್ ಬಿಡುಗಡೆಯಾಗಲಿದ್ದು, ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುವುದಾಗಿ ಆರ್ ಚಂದ್ರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು