Wednesday, January 8, 2025

ಸತ್ಯ | ನ್ಯಾಯ |ಧರ್ಮ

ಓದುವ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ – ಗುರುಪ್ರಸಾದ್ ಕಂಟಲಗೆರೆ ಅನುಮಾನ

ಹಾಸನ: ಹೊಸ ತಲೆಮಾರಿನ ಕವಿಗಳು, ಬರಹಗಾರರು ಹಾಗೂ ಕತೆಗಾರರ ಕೃತಿಗಳನ್ನು ಓದುವ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ ಎಂಬ
ಅನುಮಾನ ಇದೆ ಎಂದು ಯುವ ಕಾದಂಬರಿಕಾರ ಗುರುಪ್ರಸಾದ್ ಕಂಟಲಗೆರೆ ಅಭಿಪ್ರಾಯ ಪಟ್ಟರು.ನಗರದ ಕಲಾಭವನದಲ್ಲಿ ನಡೆಯುತ್ತಿರುವ ಹಾಸನ ಸಾಹಿತ್ಯೋತ್ಸವ 2ನೇ ದಿನದ ಗೋಷ್ಠಿ-5: ಹೊಸ ದನಿ-ಹೊಸ ಬನಿ ವಿಚಾರ ಕುರಿತು ಅವರು ಮಾತನಾಡಿದರು. ಮೊನ್ನೆ ಮಂಡ್ಯದಲ್ಲಿ ನಡೆದ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನವೋದಯ ಕಾಲದ ಕುವೆಂಪು, ಪೂರ್ಣಚಂದ್ರ ತೇಜಸ್ವಿ ಮೊದಲಾದವರ ಕೃತಿಗಳೇ ಹೆಚ್ಚು ಮಾರಾಟ ಆದವು ಎಂಬುದು ದೊಡ್ಡ ಸುದಿಯಾಗಿತ್ತು.
ಇದನ್ನು ನೋಡಿದರೆ ಹಳೆಬರ ಕೃತಿಗಳನ್ನು ಹೆಚ್ಚು ಓದುವವರ ಸಂಖ್ಯೆ ಈಗಲೂ ಇದೆ ಅನಿಸುತ್ತಿದೆ. ಹೀಗಾದರೆ ಹೊಸಬರ ಬರಹಗಳನ್ನು ಓದುವವರು ಯಾರು, ಪ್ರೋತ್ಸಾಹ ಹೇಗೆ ಸಿಗುತ್ತದೆ ಎಂದು ಯೋಚಿಸಿದಾಗ ಓದುವ ವಿಚಾರದಲ್ಲೂ ರಾಜಕೀಯ ನಡೆಯುತ್ತಿದೆ ಅನಿಸುತ್ತಿದೆ ಎಂದರು. ಇದಕ್ಕೆ ಯುವ ಬರಹಗಾರ ಸಚಿನ್ ತೀರ್ಥಹಳ್ಳಿ ದನಿಗೂಡಿಸಿ ಬೆಂಬಲಿಸಿದರು.ಹೌದು; ಹೆಚ್ಚು ಪರಿಚಿತರು, ಜನಪ್ರಿಯ ಆದವರ ಸಾಹಿತ್ಯವನ್ನೇ ಓದಬೇಕು ಅನ್ನೋ ಮನಸ್ಥಿತಿ ಇದೆ ಎನಿಸುತ್ತದೆ ಎಂದರು. ಆದರೆ ಅಂಕಣಕಾರ್ತಿ ಕುಸುಮಾ ಆಯರಹಳ್ಳಿ ಅಲ್ಲಗಳೆದರು.


ಕನ್ನಡ ಸಾಹಿತ್ಯದ ಇತಿಹಾಸ ಅವಲೋಕನ ಮಾಡಿದಾಗ, ಆಗಿನ ಕಾಲದಲ್ಲಿ ಗಟ್ಟಿ ಸಾಹಿತ್ಯ ರಚನೆ ಜೊತೆಗೆ ಸಗಣಿ ಸಾಹಿತ್ಯವನ್ನೂ ಬರೆಯುವವರಿದ್ದರು. ಆ ಪರಂಪರೆ ಈಗಲೂ ಇದೆ. ಸದಭಿರುಚಿಯ ಸಾಹಿತ್ಯ ಬರೆದವರು ಹಿರಿಯರಾಗಲಿ, ಕಿರಿಯರಾಗಲಿ ಇಷ್ಟವಾಗುತ್ತಾರೆ. ಸಗಣಿ ಸಾಹಿತ್ಯ ಬರೆದವರು ನಗಣ್ಯ ಆಗುತ್ತಾರೆ. ಹೊಸದನಿ ಆಪ್ಯಾಯಮಾನವಾದರೆ, ಅದರಲ್ಲಿ ಬನಿಯೂ ಇರಲಿದೆ ಎಂದು ಗುರುಪ್ರಸಾದ್ ಹೇಳಿದರು. ಮುಂದುವರಿದು ಈಗಿನ ಕಾಲಘಟ್ಟದಲ್ಲಿ ಸಣ್ಣ ಕತೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಉದಾಹರಣೆಗೆ ಕಥಾ ಸ್ಪರ್ಧೆ ಏರ್ಪಡಿಸಿದರೆ ನೂರಾರು ಕತೆಗಳು ಸ್ಪರ್ಧೆಗೆ ಬರುತ್ತವೆ. ಆದರೆ ಅವುಗಳನ್ನು ಪುಸ್ತಕ ರೂಪದಲ್ಲಿ ಒಂದು ಗೂಡಿಸುವ ಕೆಲಸ ಆಗುತ್ತಿಲ್ಲ ಅನಿಸುತ್ತಿದೆ ಎಂಬ ಅಭಿಪ್ರಾಯವನ್ನು ಕುಸುಮಾ ಆಯರಹಳ್ಳಿ ವ್ಯಕ್ತಪಡಿಸಿದರು. ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವವರು, ಲೈಕ್ ಕೊಡುವವರು ನಿಜವಾದ ಓದುಗಾರರಲ್ಲ. ಉದಾಹರಣೆಗೆ ಎಲ್ಲೋ ನನ್ನ ಕೃತಿಯನ್ನು ಓದಿ, ಕೃತಿ ರಚಿಸಿದ ಹಲವು ತಿಂಗಳ ನಂತರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಈ ಮೇಲ್ ಮಾಡುವವರು ನಿಜವಾದ ಓದುಗರು, ನಾನು ಕೇವಲ ಲೈಕ್ ಕೊಡುವವರಿಗೆ ಬರೆಯಲ್ಲ, ಇಷ್ಟಪಟ್ಟು ಓದಿ ಅಭಿಪ್ರಾಯ ಹಂಚಿಕೊಳ್ಳುವವರ ಬಗ್ಗೆ ಬರೆಯುತ್ತೇನೆ ಎಂದು ಸಚಿನ್ ತೀರ್ಥಹಳ್ಳಿ ಅನಿಸಿಕೆ ಹಂಚಿಕೊAಡರು. ಅಲ್ಲದೆ ನಮ್ಮ ಬರಹಗಳ ಓದಿಗೆ ಹಾಗೂ ಬೇರೊಬ್ಬರ ಸಾಹಿತ್ಯ ಓದಿಕೊಳ್ಳಲು ಗುಂಪು ರಚನೆ ಪೂರಕವಾಗಲಿದೆ ಎಂದೂ ಸಚಿನ್ ಹೇಳಿದರು. ಗೋಷ್ಠಿ ನಿರ್ವಹಣೆ ಮಾಡಿದ ಸಾಹಿತಿ ಚಲಂ ಹಾಡ್ಲಹಳ್ಳಿ, ಹಿರಿಯರು, 70ನೇ ವಯೋಮಾನದವರೂ ವಿಭಿನ್ನವಾದುದನ್ನು ಬರೆದರೆ ಅದೂ ಹೊಸ ದನಿಯಾಗಲಿದೆ. ಅದರಲ್ಲಿ ಬನಿಯೂ ಇರಲಿದೆ ಎಂಬ ಭಾವನೆ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page