Friday, January 24, 2025

ಸತ್ಯ | ನ್ಯಾಯ |ಧರ್ಮ

“ಹೆಣ್ಣೆಂದರೆ ಸೂತಕವಲ್ಲ ನೋಡಾ”

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ವಿಶೇಷವಾಗಿ ಕವಯಿತ್ರಿ ಗೀತಾ ನಾರಾಯಣ್ ಅವರ ಕವಿತೆ

ಹುಣ್ಣಿಮೆ ಅರಳುವಾಗ
ಒಳಕೋಣೆಯಲ್ಲಿ ನರಳಾಟ
ಅಪ್ಪನ ಅಮ್ಮನಿಗೆ ಗೆಜ್ಜೆಯ ದನಿ ಬೇಡ..ಅಪ್ಪನಿಗೂ!
ಅಮ್ಮನನ್ನು ಹಾಗೆಯೇ ಮುರಿದು ಕಟ್ಟಿ ಗಂಡುಡುಗನ ಕನಸ ತುಂಬಿದ್ದಾರೆ……
ಹೆಣ್ಣಿದ್ದ ಮನೆಗೆ ಕನ್ನಡಿ ಯಾತಕ್ಕ ಎಂದ ಜನಪದರು
ಕನ್ನಡಿಯಾಂಗ ಹೊಳೆವ ಹೆಣ್ಣನೇಕೆ ನಲುಗಿಸಿದರು????
ಅಡುಗೆ ಮನೆಯ ಚಿಮಣಿಯ ಹೊಗೆಯಲ್ಲಿ ಅಮ್ಮ ಅಕ್ಕ ತಂಗಿ ಅಜ್ಜಿ ಅತ್ತೆಯರೆಲ್ಲರೆಲ್ಲರ ಕಣ್ಣೀರು ಹಿಂಗಿವೆ…..
ಕುಂಕುಮ ಹಣತೆಯ ಹೆಸರಲ್ಲಿ ಎಷ್ಟು ಹೆಣ್ಣುಗಳನ್ನು ಕೊಂದಿಲ್ಲ ಇಲ್ಲಿ..ಬಳೆಗಳು ಬಲಿಪಡೆದ ಹೆಣ್ಣುಗಳ ಲೆಕ್ಕ ಯಾರಿಗೂ ಬೇಡ….ಗಂಡಿನ ಯಜಮಾನಿಕೆಯ ಒಳಮನೆಯಲ್ಲಿ ಅಮ್ಮನಿಗೆ ಉಸಿರಾಟ ನಿಂತದ್ದು ಮಗಳ ಕಣ್ಣಲ್ಲಿ ಬಿಂಬವಾಯ್ತು….
ತಬ್ಬಲಿಯಾದ ಮಗಳ ಯಾತನೆ
ಗಂಡುಗಳ ಕಣ್ಣಲ್ಲಿ ಶೋಷಣೆ
ಮಗಳು ಅಳುವಂತೆ ಗದರುವ ಅಪ್ಪ ಮಗ ಅಳದಂತೆ ಎಚ್ಚರಿಕೆಯಿಂದಿರುತ್ತಾನೆ….
ಒಲೆ ಉರಿಯುವಾಗ ಬೆಂದದ್ದೆಲ್ಲ ಗಂಡಿನ ಬಲಕ್ಕಾಗಿ
ಉಪವಾಸವೆಂದರೆ ಅಮ್ಮನ ಅಶಕ್ತತೆಯ ವ್ರತ… ಮಗಳಿಗೆ ಹೊರಿಸಲ್ಪಟ್ಟ ಸೂತಕದ ಭಾರಗಳನ್ನು ಅಮ್ಮ ಹೊರುವಾಗ ಜಗದೆಲ್ಲ ಗಂಡುಗಳು ನಕ್ಕದ್ದಕ್ಕೆ ನನ್ನ ಧಿಕ್ಕಾರ..ಮಗಳಾಗಿ ಬೆಳಕಾದ ನನಗೆ ವಿಧವೆ ಎಂದ ನಿಮ್ಮ ನಾಲಿಗೆಯ ಪಾಚಿ ತಿಕ್ಕಿ ತೊಳೆಯಿರಿ….ಗಂಡನ ನಾನೊಲ್ಲೆ ಎಂದರೆ ಕಳಂಕಿತಳನ್ನಾಗಿಸಿದ ನಿಮ್ಮ ಕೀಳುತನಕ್ಕೆ ನನ್ನ ನಿಲುವು ಅಪಾಯವಲ್ಲ….ಗೆಳೆಯನಾಗದ ಗಂಡ,ಮಗಳ ನಗುವಲ್ಲಿ ಕಡಲ ಕಾಣದ ಅಪ್ಪ
ಹೆಣ್ಣೆಂದು ಬೇಲಿ ಬಿಗಿವ ಲೋಕಗಂಡುಗಳೆಲ್ಲ ಒಲೆಯೊಳಗಿನ ಸುಡುವ ಕೇಡು ನೋಡಾ…….
ಹೆಣ್ಣು ಉಳಿದು ಲೋಕವೇ ನಿತ್ಯ ಪೌರ್ಣಮಿಯಾಗಿ ತಣ್ಣನೆಯ ಬದುಕುಗಳು ಅರಳಲಿ……
ಹೆಣ್ಣಿನ ಕಣ್ಗಳಲಿ ಅರಳಿದ ಹೂಗಂಧವೇ ಜಗದ ಚೆಲುವಾಗಲಿ…

Related Articles

ಇತ್ತೀಚಿನ ಸುದ್ದಿಗಳು

You cannot copy content of this page