Friday, January 31, 2025

ಸತ್ಯ | ನ್ಯಾಯ |ಧರ್ಮ

ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆ: 5 ಪ್ರಶ್ನೆಗಳಿಗೆ 10 ಕೃಪಾಂಕ

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ಡಿ. 29ರಂದು ನಡೆದಿದ್ದ ಪೂರ್ವಭಾವಿ ಮರು ಪರೀಕ್ಷೆಯ ಪರಿಷ್ಕೃತ ಸರಿ (ಕೀ) ಉತ್ತರಗಳನ್ನು ಕೆಪಿಎಸ್‌ಸಿ ಗುರುವಾರ ಪ್ರಕಟಿಸಿದ್ದು, ಒಟ್ಟು 5 ಪ್ರಶ್ನೆಗಳಿಗೆ ಕೃಪಾಂಕ (ಒಟ್ಟು 10 ಅಂಕ) ನೀಡಲು ನಿರ್ಧರಿಸಿದೆ. ಪ್ರಶ್ನೆಪತ್ರಿಕೆ 1 ಮತ್ತು 2 ಸೇರಿ ಒಟ್ಟು 13 ಪ್ರಶ್ನೆಗಳ ಸರಿ ಉತ್ತರಗಳಲ್ಲಿ ಬದಲಾವಣೆ ಆಗಿದೆ.

ಪತ್ರಿಕೆ 1ರಲ್ಲಿ ಒಟ್ಟು ಏಳು ಪ್ರಶ್ನೆಗಳಿಗೆ ಸರಿ ಉತ್ತರ ಬದಲಾವಣೆಯಾಗಿದ್ದು, ಈ ಪೈಕಿ ನಾಲ್ಕು ಉತ್ತರಗಳನ್ನು ಪರಿಷ್ಕೃರಿಸಿದೆ. ಮೂರು ಪ್ರಶ್ನೆಗಳಿಗೆ ನೀಡಿದ್ದ ನಾಲ್ಕೂ ಆಯ್ಕೆಗಳು ಸರಿ ಇಲ್ಲದೇ ಇದ್ದ ಕಾರಣ ಆ ಪ್ರಶ್ನೆಗಳಿಗೆ ಕೃಪಾಂಕ ನೀಡಲು ಕೆಪಿಎಸ್‌ಸಿ ನಿರ್ಧರಿಸಿದೆ.

ಇನ್ನು ಪತ್ರಿಕೆ 2ರಲ್ಲಿ ಆರು ಪ್ರಶ್ನೆಗಳ ಸರಿ ಉತ್ತರ ಬದಲಾಗಿದ್ದು, ಈ ಪೈಕಿ ನಾಲ್ಕು ಸರಿ ಉತ್ತರಗಳನ್ನು ಪರಿಷ್ಕರಿಸಲಾಗಿದೆ. ಎರಡು ಪ್ರಶ್ನೆಗಳಿಗೆ ನೀಡಿದ್ದ ನಾಲ್ಕೂ ಆಯ್ಕೆಗಳು ಸರಿ ಇಲ್ಲದೇ ಇದ್ದ ಕಾರಣ ಆ ಪ್ರಶ್ನೆಗಳಿಗೆ ಕೃಪಾಂಕ ನೀಡಲು ತೀರ್ಮಾನಿಸಿದೆ.

ಪರಿಷ್ಕೃತ ಸರಿ ಉತ್ತರಗಳನ್ನು ಪ್ರಕಟಿಸಿದ ನಂತರ ಈ ಉತ್ತರಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಸಲ್ಲಿಸುವ ಯಾವುದೇ ಮನವಿ ಅಥವಾ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕ ತಿಳಿಸಿದ್ದಾರೆ.

ಈ ಹುದ್ದೆಗಳ ನೇಮಕಾತಿಗೆ ಆಗಸ್ಟ್‌ 27ರಂದು ನಡೆದಿದ್ದ ಪೂರ್ವಭಾವಿ ಪರೀಕ್ಷೆಯಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರ ಮಾಡಿದ್ದ ಪ್ರಶ್ನೆ– ಉತ್ತರಗಳಲ್ಲಿ ಭಾಷಾಂತರ ದೋಷ ಕಂಡುಬಂದ ಕಾರಣ ಕೆಪಿಎಸ್‌ಸಿ ಡಿ. 29 ಪೂರ್ವಭಾವಿ ಮರು ಪರೀಕ್ಷೆ ನಡೆಸಿತ್ತು. ಜ. 15ರಂದು ಸರಿ ಉತ್ತರಗಳನ್ನು ಪ್ರಕಟಿಸಿ, 22ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕೊಡಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page