Monday, February 10, 2025

ಸತ್ಯ | ನ್ಯಾಯ |ಧರ್ಮ

ಮಣಿಪುರ: ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಬಿರೇನ್ ಸಿಂಗ್ ರಾಜೀನಾಮೆ ‘ವಿಳಂಬವಾಯಿತು’ ಎಂದ ಕಾಂಗ್ರೆಸ್

ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ತಡವಾಗಿ ರಾಜೀನಾಮೆ ನೀಡಿದ್ದು, “ಕುದುರೆ ಓಡಿ ಹೋದ ನಂತರ ಲಾಯದ ಬಾಗಿಲು ಮುಚ್ಚುವಂತಿದೆ,” ಎಂದು ಕಾಂಗ್ರೆಸ್ ಭಾನುವಾರ ಹೇಳಿದೆ.

“21 ತಿಂಗಳ ಕಾಲ ಭಾರತೀಯ ಜನತಾ ಪಕ್ಷವು ಮಣಿಪುರದಲ್ಲಿ ಬೆಂಕಿ ಹಚ್ಚಿ, ಜನರನ್ನು, ಎಲ್ಲಾ ಸಮುದಾಯಗಳನ್ನು ಅವರವರೇ ರಕ್ಷಿಸಿಕೊಳ್ಳುವಂತೆ ಬಿಟ್ಟಿರುವುದು,” ಎಂದು ಹೇಳುವುದು ನೋವಿನ ಸಂಗತಿ ಎಂದು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

“ಈ ತಿರಸ್ಕಾರ ಮತ್ತು ನಿರಾಸಕ್ತಿಗೆ ನಿಜವಾದ ಕಾರಣ ಪ್ರಧಾನಿ ನರೇಂದ್ರ ಮೋದಿ. ಮಣಿಪುರ ಭಾರತದ ಒಂದು ಭಾಗ ಎಂಬುದನ್ನು ಅವರು ಮರೆತಿದ್ದಾರೆ. ಅವರು ತಮ್ಮ ಸ್ಮರಣೆಯನ್ನು ಪುನರ್ನಿರ್ಮಿಸಿಕೊಂಡು ಭಾರತದ ನಕ್ಷೆಯಲ್ಲಿ ಮಣಿಪುರ ರಾಜ್ಯವನ್ನು ಗುರುತಿಸುವ ಸಮಯ ಬಂದಿದೆ!” ಎಂದು ಖರ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.

ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರಕ್ಕೆ ಬಿರೇನ್ ಸಿಂಗ್ ಅವರ ಪ್ರತಿಕ್ರಿಯೆ ಪಕ್ಷಪಾತದಿಂದ ಕೂಡಿತ್ತು ಮತ್ತು ಅವರು ಬಹುಸಂಖ್ಯಾತವಾದವನ್ನು ಅವರು ಪ್ರಚೋದಿಸಿದರು ಎಂಬ ಕುಕಿ-ಜೋಮಿ-ಹ್ಮಾರ್ ಗುಂಪುಗಳ ಆರೋಪಗಳ ನಡುವೆ ಭಾನುವಾರ ಸಂಜೆ ಬಿರೇನ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಮೇ 2023 ರಿಂದ ಮೈತೈ ಮತ್ತು ಕುಕಿ-ಜೋಮಿ-ಹ್ಮಾರ್ ಸಮುದಾಯಗಳ ನಡುವಿನ ಹಿಂಸಾಚಾರದಲ್ಲಿ ಕನಿಷ್ಠ 258 ಜನರು ಸಾವನ್ನಪ್ಪಿದ್ದಾರೆ ಮತ್ತು 59,000 ಕ್ಕೂ ಹೆಚ್ಚು ಜನರು ಮನೆಮಠ ಕಳೆದುಕೊಂಡಿದ್ದಾರೆ.

ರಾಜ್ಯದಲ್ಲಿ ಹಿಂಸಾಚಾರಕ್ಕೆ ಸಿಂಗ್ ಪ್ರಚೋದನೆ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿ, “ಹೆಚ್ಚುತ್ತಿರುವ ಸಾರ್ವಜನಿಕ ಒತ್ತಡ, ಸುಪ್ರೀಂ ಕೋರ್ಟ್ ತನಿಖೆ ಮತ್ತು ಕಾಂಗ್ರೆಸ್‌ನ ಅವಿಶ್ವಾಸ ನಿರ್ಣಯ,” ದ ಪರಿಣಾಮವಾಗಿ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಾಯಿತು ಎಂದು ಹೇಳಿದರು.

ಮಣಿಪುರದಲ್ಲಿ ಶಾಂತಿ ಪುನಃಸ್ಥಾಪಿಸುವುದು ಆದ್ಯತೆಯಾಗಿರಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹೇಳಿದ ಅವರು, “ಸಾಮಾನ್ಯ ಸ್ಥಿತಿಗೆ ಮರಳಲು ತಮ್ಮ ಯೋಜನೆಯನ್ನು ವಿವರಿಸಲು” ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.

ಸೋಮವಾರ ಮಣಿಪುರ ವಿಧಾನಸಭೆಯಲ್ಲಿ ಸಿಂಗ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ತಮ್ಮ ಪಕ್ಷ ಸಜ್ಜಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ಸಂಘರ್ಷ ಪೀಡಿತ ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡಬೇಕು ಎಂಬ ವಿರೋಧ ಪಕ್ಷದ ಬೇಡಿಕೆಯನ್ನು ರಮೇಶ್ ಪುನರುಚ್ಚರಿಸಿದರು.

“ಮುಖ್ಯಮಂತ್ರಿಗಳ ರಾಜೀನಾಮೆ ತಡವಾಯಿತು. ಮಣಿಪುರದ ಜನರು ಈಗ ಫ್ರಾನ್ಸ್ ಮತ್ತು ಯುಎಸ್ಎಗೆ ಆಗಾಗ ಹಾರುವ ನಮ್ಮ ಪ್ರಧಾನ ಮಂತ್ರಿಯ ಭೇಟಿಗಾಗಿ ಕಾಯುತ್ತಿದ್ದಾರೆ – ಮತ್ತು ಕಳೆದ ಇಪ್ಪತ್ತು ತಿಂಗಳುಗಳಿಂದ ಮಣಿಪುರಕ್ಕೆ ಹೋಗಲು ಅವರಿಗೆ ಸಮಯ ಅಥವಾ ಒಲವು ಸಿಗಲಿಲ್ಲ,” ಎಂದು ರಮೇಶ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.

21 ತಿಂಗಳ ಹಿಂದೆ ಹಿಂಸಾಚಾರ ಆರಂಭವಾದಾಗಿನಿಂದ, ಕುಕಿ-ಜೋಮಿ-ಹ್ಮಾರ್ ಗುಂಪುಗಳು ಸಂಘರ್ಷಕ್ಕೆ ಪಕ್ಷಪಾತದ ಧೋರಣೆ ಮತ್ತು ಬಹುಸಂಖ್ಯಾತ ನೀತಿಗಳಿಗಾಗಿ ಸಿಂಗ್ ಅವರನ್ನು ಪದಚ್ಯುತಗೊಳಿಸಬೇಕೆಂದು ಒತ್ತಾಯಿಸುತ್ತಿವೆ.

ಫೆಬ್ರವರಿ 3 ರಂದು, ಸುಪ್ರೀಂ ಕೋರ್ಟ್ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸಿಂಗ್ ಅವರನ್ನು ರಾಜ್ಯದಲ್ಲಿ ನಡೆದ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದ ಆಡಿಯೋ ತುಣುಕುಗಳ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಆದೇಶಿಸಿತು.

ಕುಕಿ ಆರ್ಗನೈಸೇಶನ್ ಫಾರ್ ಹ್ಯೂಮನ್ ರೈಟ್ಸ್ ಟ್ರಸ್ಟ್ ಸಲ್ಲಿಸಿದ ಅರ್ಜಿಯ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. “ಸಂಘರ್ಷ ಹೇಗೆ ಮತ್ತು ಏಕೆ ಪ್ರಾರಂಭವಾಯಿತು” ಎಂಬುದಕ್ಕೆ ಮುಖ್ಯಮಂತ್ರಿಗಳೇ ಕಾರಣ ಎಂದು ಧ್ವನಿಮುದ್ರಿಕೆಗಳು ಹೇಳುತ್ತಿವೆ ಎಂದು ಆರೋಪಿಸಿ ಸಂಘಟನೆಯು ಆಡಿಯೋ ರೆಕಾರ್ಡಿಂಗ್‌ಗಳ ಬಗ್ಗೆ ಸ್ವತಂತ್ರ ತನಿಖೆಯನ್ನು ನಡೆಸಲು ಕೋರಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ಸ್ವತಂತ್ರ ವಿಧಿವಿಜ್ಞಾನ ಪ್ರಯೋಗಾಲಯ ಟ್ರುತ್‌ ಲ್ಯಾಬ್ಸ್ ಟೇಪ್‌ಗಳನ್ನು ಪರಿಶೀಲಿಸಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಧ್ವನಿಮುದ್ರಣಗಳಲ್ಲಿ ಕೇಳಿಬಂದ ಧ್ವನಿ ಮುಖ್ಯಮಂತ್ರಿಯವರದ್ದೇ ಎಂದು ಪ್ರಯೋಗಾಲಯವು 93% ಖಚಿತತೆಯೊಂದಿಗೆ ದೃಢಪಡಿಸಿದೆ ಎಂದು ಭೂಷಣ್ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page