Thursday, April 3, 2025

ಸತ್ಯ | ನ್ಯಾಯ |ಧರ್ಮ

ಆಶಾ ಕಿರಣ ಯೋಜನೆ: 40 ವರ್ಷ ದಾಟಿದ ದೃಷ್ಟಿ ದೋಷವಿರುವ ನಾಗರೀಕರಿಗೆ ಉಚಿತ ಕನ್ನಡಕ ವಿತರಣೆ

ಆಶಾ ಕಿರಣ ಯೋಜನೆ ಅಡಿಯಲ್ಲಿ 40 ವರ್ಷ ದಾಟಿದ ದೃಷ್ಟಿ ದೋಷವಿರುವ ನಾಗರೀಕರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಮಟ್ಟದ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಆಶಾ ಕಿರಣ ದೃಷ್ಟಿ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಿ.ಓ.ನಾಗರಾಜ್ ಹೇಳಿದರು.

ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದ ಆಶಾ ಕಿರಣ ಯೋಜನೆಯಡಿ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಶಾ ಕಿರಣ ಯೋಜನೆಯಡಿ ಮೊದಲ ಹಂತದಲ್ಲಿ ಮನೆ ಮನೆ ಭೇಟಿ, ಅಂಧತ್ವ ದೃಷ್ಟಿ ದೋಷ ತಪಾಸಣೆ ನಡೆಸಿ, ಜಿಲ್ಲೆಯಲ್ಲಿ 40ವರ್ಷ ಮೇಲ್ಪಟ್ಟ ಒಟ್ಟು 55000 ಫಲಾನುಭವಿಗಳನ್ನು ಮತ್ತು ಶಾಲಾ ವಿದ್ಯಾರ್ಥಿಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 3600 ಫಲಾನುಭವಿಗಳು ಪತ್ತೆ ಹಚ್ಚಿ, ಗುರುತಿಸಿ ಗಣಕೀಕೃತ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು. ಈಗ ಆಶಾ ಕಿರಣ ಎರಡನೇಯ ಹಂತದಲ್ಲಿ ಉಚಿತ ಕನ್ನಡಕ ವಿತರಿಸುವ ಕಾರ್ಯಕ್ರಮ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳು, ಎಲ್ಲಾ ತಾಲ್ಲೂಕು ಮಟ್ಟದ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಆಶಾ ಕಿರಣ ದೃಷ್ಟಿ ಕೇಂದ್ರಗಳನ್ನು ತೆರೆಯಲಾಗುತ್ತದೆ. ಎಲ್ಲಾ ರೀತಿಯ ಕಣ್ಣಿನ ತೊಂದರೆಗಳ ತಪಾಸಣೆ, ಉಚಿತ ಚಿಕಿತ್ಸೆ ಅಗತ್ಯವಿದ್ದಲ್ಲಿ ಕನ್ನಡಕ ವಿತರಣೆ ಮಾಡಲಾಗುತ್ತದೆ. ನೇತ್ರ ಅಧಿಕಾರಿಗಳು ಎಲ್ಲಾ ಹಂತಗಳಲ್ಲಿ ನಿಮ್ಮೊಡನೆ ಇದ್ದು ಸಹಕರಿಸಲಿದ್ದಾರೆ ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ಸಿರಿಗೆರೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಈಗಾಗಲೇ ಗುರುತಿಸಲಾದ 78 ಫಲಾನುಭವಿಗಳು (40 ವರ್ಷ ಮೇಲ್ಪಟ್ಟ) ಉಚಿತವಾಗಿ ಕನ್ನಡಕಗಳನ್ನು ವಿತರಿಸಿ, ಆಶಾ ಕಾರ್ಯಕರ್ತೆಯರು ತಮ್ಮ ದೈನಂದಿನ ಮನೆ ಭೇಟಿ ನಡೆಸಿದಾಗ ದೃಷ್ಟಿ ದೋಷ ಕಂಡುಬರುವ ಪ್ರಕರಣಗಳನ್ನು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿ, ಉನ್ನತ ಮಟ್ಟದ ತಪಾಸಣಾ ಯಂತ್ರೋಪಕರಣಗಳು ಲಭ್ಯವಿದೆ. ನೇತ್ರಾಧಿಕಾರಿ ನಿಮ್ಮ ಕಣ್ಣುಗಳ ಪರೀಕ್ಷೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಾರೆ ಎಂದರು.

ಸಿರಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಪ್ರದೀಪ್ ಅವರು ಸಾಂಕೇತಿಕವಾಗಿ ಕನ್ನಡಕ ವಿತರಿಸಿ, ಇಂತಹ ಜನಪರ ಯೋಜನೆಗಳ ಸದುಪಯೋಗ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ.ತುಳಸಿರಂಗನಾಥ್, ಡಾ.ಪವಿತ್ರಾ, ಡಾ.ಶಿಲ್ಪಾ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ನೇತ್ರಾಧಿಕಾರಿ ಬರ್ಕತ್ ಆಲಿ, ಫಾರ್ಮಸಿ ಅಧಿಕಾರಿ ಮೋಹನ್ ಕುಮಾರ್, ಆರೋಗ್ಯ ಸುರಕ್ಷತಾಧಿಕಾರಿ ಶಾರದ, ಶೋಭಾ, ಮಂಜುಳಾ, ಪಿ.ಡಿ.ಒ. ಅನ್ಸೀರಾ ಬಾನು, ಮಾಜಿ ಅಧ್ಯಕ್ಷ ನಾಗರಾಜ್ ಹಾಗೂ ಫಲಾನುಭವಿಗಳು ಇದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page