Friday, April 4, 2025

ಸತ್ಯ | ನ್ಯಾಯ |ಧರ್ಮ

ಹಾಸನ | ಸಾಮಾಜಿಕ ಜವಬ್ಧಾರಿ, ಸಮುದಾಯ-ವರ್ಗಕ್ಕೆ ಸಾಂತ್ವನ ಕೊಡುವ ಸಾಹಿತ್ಯ ಕಾರಣವಾಗಲಿ: ಸಾಹಿತಿ ಮೇಟಿಕೆರೆ ಹಿರಿಯಣ್ಣ

ಸಾಮಾಜಿಕ ಜವಬ್ಧಾರಿ, ಸಮುದಾಯ-ವರ್ಗಕ್ಕೆ ಸಾಂತ್ವಾನ ಕೊಡುವ ಸಾಹಿತ್ಯ ಕಾರಣವಾಗಲಿ – ಸಾಹಿತಿ ಮೇಟಿಕೆರೆ ಹಿರಿಯ ಕೃತಿ ಎಂಬುದು ಮಾರ್ಗದರ್ಶನ ನೀಡುತ್ತದೆ. ತಿರುವು ಎಂಬುದು ಕಥೆ ಕಾದಂಬರಿಯ ಲಕ್ಷಣ, ಕಥೆ ಬರೆಯಬಹುದು. ಆದರೆ ಕಾದಂಬರಿ ಬರೆಯುವುದು ಸುಲಭವಲ್ಲ. ಹಿಂದಿನ ಹಾಡುಗಳೆಲ್ಲ ಸಾಹಿತ್ಯಿಕವಾಗಿದ್ದವು ಹಾಗೂ ಅರ್ಥಪೂರ್ಣವಾಗಿದ್ದವು ಎಂದು ಸಾಹಿತಿ ಮೇಟಿಕೆರೆ ಹಿರಿಯಣ್ಣ ಹೇಳಿದರು.

ಹಾಸನ ನಗರದ ಎ.ವಿ. ಕಾಂತಮ್ಮ ಮಹಿಳಾ ಕಾಲೇಜು, ಕನ್ನಡ ಸಂಘ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಗುರುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ದೊಡ್ಡಮನೆ ಆನಂದ್ ಅವರ ನಾಲ್ಕು ಗ್ರಂಥಗಳಾದ ಆನೆ ನಡೆದಿದ್ದೆ ಹಾದಿ, ಮಿನುಗುತಾರೆ, ಚಿಕ್ಕಮಗಳೂರಿನಲ್ಲಿ ಬಂಗಾರದ ಮನುಷ್ಯ ಡಾ. ರಾಜ್ ಕೃತಿ ಪರಿಚಯ ಹಾಗೂ ದೊಡ್ಮನೆ ಆನಂದ್ ಅವರ ಸಮಗ್ರ ಪರಿಚಯ ಕುರಿತು ಪುಸ್ತಕ ಲೋಕಾರ್ಪಣೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಆಸಕ್ತಿ ಇದ್ದರೆ ವಿದ್ಯಾರ್ಥಿಗಳ ವಯಸ್ಸಿನಲ್ಲಿ ಹಲವಾರು ಭಾಷೆ ಕಲಿಯಬಹುದು. ಇಂದು ಕೃಷಿಯಲ್ಲಿ ವಿಮುಕ್ತರಾಗುವ ವೇಳೆ ಆನಂದ್ ತಮ್ಮ ಬರಹದಲ್ಲಿ ಕೃಷಿ ಬಗ್ಗೆ ಬರೆದಿದ್ದಾರೆ. ಸರಕಾರದಿಂದ ಕೃಷಿಗೆ ಇಲ್ಲಿ ಪ್ರೋತ್ಸಹವಿಲ್ಲ. ರೈತರ ಬವಣೆಯನ್ನು ಈ ಪುಸ್ತಕದಲ್ಲಿ ತಿಳಿಸಲಾಗಿದೆ. ಆನೆ ನಡೆದಿದ್ದೆ ದಾರಿ ಬರಹ ಅದ್ಭುತವಾಗಿ ಮೂಡಿಬಂದಿದೆ. ಬರಹಗಾರರಿಗೆ ಯಾವಾಗಲೂ ಸಾಮಾಜಿಕ ಕಳಕಳಿ ಇರುತ್ತದೆ. ಪ್ರಕೃತಿ ಬಗ್ಗೆ, ಡಾ. ರಾಜ್ ಬಗ್ಗೆ ದೊಡ್ಡಮನೆ ಆನಂದ್ ಅವರ ಸಾಹಿತ್ಯದಲ್ಲಿ ಉತ್ತಮವಾಗಿ ರಚನೆಯಾಗಿದೆ” ಎಂದು ಹೇಳಿದರು.

“ಸಾಹಿತ್ಯವೆಂದರೆ ಸಾಮಾಜಿಕ ಜವಾಬ್ಧಾರಿ ಇರಬೇಕು, ಎಲ್ಲ ಸಮುದಾಯ ಮತ್ತು ವರ್ಗಕ್ಕೆ ಸಾಂತ್ವನ ಕೊಡಬೇಕು. ಜತೆಗೆ ಸಂತೋಷವಾಗಿರಲು ಈ ಪುಸ್ತಕ ಕಾರಣವಾಗಬೇಕು” ಎಂದು ಶಿಕ್ಷಕಿ ಮತ್ತು ಲೇಖಕಿ ಮಮತ ಪ್ರಭು ಅಭಿಪ್ರಾಯಪಟ್ಟರು.

“ಮಾತೃ ಭಾಷೆಯಾದ ಕನ್ನಡದಲ್ಲೇ ಓದಿ ಅದರಲ್ಲೇ ಉದ್ಯೋಗ ಮಾಡಬೇಕೆಂದು ಆಸೆ ಇಟ್ಟುಕೊಂಡಿರುವ ವಿದ್ಯಾರ್ಥಿಗಳನ್ನು ನೋಡುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತದೆ. ಪುಸ್ತಕ ಬಿಡುಗಡೆಗೊಂಡ ಮಿನುಗುತಾರೆ ಬಗ್ಗೆ ಹೇಳುವುದಾದರೇ ಇದೊಂದು ಸಿನಿಮಾ ಗುಣವನ್ನು ಇಟ್ಟುಕೊಂಡಿರುವ ಕಾದಂಬರಿಯಾಗಿದೆ. ಸಾಹಿತ್ಯ ಪ್ರಕಾರದಲ್ಲಿ ಹಲವಾರು ರೀತಿ ಇದ್ದು, ಅದರಲ್ಲಿ ಸಾಮಾಜಿಕ ಕಾದಂಬರಿ, ಐತಿಹಾಸಿಕ, ಸಾಮಾಜಿಕ ಕಾದಂಬರಿಗಳು, ಪತ್ತೆದಾರಿ ಕಾದಂಬರಿಗಳು, ಕೃಷಿ ಕಾದಂಬರಿಗಳು ಸೇರಿದಂತೆ ಹಲವಾರು ರೀತಿಯಲ್ಲಿ ಕಾದಂಬರಿ ಇರುತ್ತದೆ. ಆದರೆ ದೊಡ್ಮನೆ ಆನಂದ್ ಅವರ ಕಾದಂಬರಿಗೆ ಒಂದು ಸಿನಿಮಾ ಮಾಡಬಹುದಾದ ಗುಣಗಳಿವೆ” ಎಂದರು.

“ಇವತ್ತಿನ ವ್ಯಕ್ತಿತ್ವ ಗುಣಗಳಲ್ಲಿ ಅಂದು ನಾವು ನೋಡಿರುವ ಸಿನಿಮಾದಲ್ಲಿ ಪಾತ್ರಗಳು ಬಹಳಷ್ಟಿವೆ. ಹಿಂದಿನ ಸಿನಿಮಾಗಳೆಲ್ಲಾ ಸಾಮಾಜಿಕ ಕಾದಂಬರಿಯನ್ನಿಟ್ಟುಕೊಂಡಿರುವುದು ಹಾಗೂ ಕೌಟುಂಬಿಕ ಸಿನಿಮಾಗಳು ಹೆಚ್ಚು ಕಾಣಿಸುತ್ತಿದ್ದವು. ಹಿಂದಿನ ಹಲವು ಸಿನಿಮಾದಲ್ಲಿ ಒಂದು ಸಂದೇಶ ಇರುತಿತ್ತು. ಅನೇಕರು ಒಳ್ಳೆಯ ಸಂದೇಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗುತ್ತಿರುವುದು ಕಾಣಿಸುತಿತ್ತು” ಎಂದು ಕರ್ಣ ಸಿನಿಮಾದ ಬಗ್ಗೆ ಇದೇ ವೇಳೆ ನೆನಪಿಸಿಕೊಳ್ಳುತ್ತ ಕಿವಿಮಾತು ಹೇಳಿದರು.

“ಪ್ರಸ್ತುತದ ಸಿನಿಮಾದ ಬಗೆ ಮಾತನಾಡುವುದಿಲ್ಲ. ಹಿಂದಿನ, ಇಂದಿನ ಅಭಿರುಚಿಗಳು ಬೇರೆ ಬೇರೆಯಾಗಿವೆ. ಕಾಲದಿಂದ ಕಾಲಕ್ಕೆ ಬದಲಾವಣೆ ಕಾಣಬಹುದು. ಮುಂದೇನೂ ಕೂಡ ಇದಕ್ಕಿಂತ ಬದಲಾವಣೆ ಕಾಣಬಹುದು. ಸಾಹಿತ್ಯಕ್ಕೆ ಒಂದು ಸಾಮಾಜಿಕ ಜವಾಬ್ಧಾರಿ ಇರಬೇಕು. ಯಾವುದಾದರೂ ಒಂದು ಸಮುದಾಯಕ್ಕೆ, ಯಾವುದಾದರೂ ಒಂದು ವರ್ಗಕ್ಕೆ ಸಾಂತ್ವನ ಕೊಡುವಂತಿರಬೇಕು. ನ್ಯಾಯವನ್ನು ಕೊಡಲು ಸಾಧ್ಯವಾಗದೆ ಇರುವಾಗ ಒಂದು ಕಾದಂಬರಿ ಇಲ್ಲವೇ ಒಂದು ಕಥೆ, ಕವನ, ನಮ್ಮ ಸಾಹಿತ್ಯ ಪ್ರಯತ್ನ ಯಾವುದಾದರೂ ಒಂದು ವರ್ಗಕ್ಕೆ ಸಾಂತ್ವನವಾದರೂ ಕೊಡಬೇಕು ಮತ್ತು ಸಂತೋಷವನ್ನಾದರೂ ಕೊಡಬೇಕು. ಅಂತಹ ಉದ್ದೇಶವನ್ನಿಟ್ಟುಕೊಂಡು ಸಾಹಿತ್ಯ ಮಾಡುವುದು ಬಹಳ ಮುಖ್ಯ” ಎಂದು ಸಲಹೆ ನೀಡಿದರು.

“ಮಿನುಗುತಾರೆ ಕಾದಂಬರಿಯಲ್ಲಿ ಬಹಳ ವರ್ಗದವರಿಗೆ ಸಾಂತ್ವನ ಮತ್ತು ಸಂದೇಶ ಕೊಡುವ ಪ್ರಯತ್ನ ಮಾಡಿದ್ದಾರೆ. ಓದಿ ಅರ್ಥಮಾಡಿಕೊಳ್ಳಲು ಭಾಷೆ ಸರಳವಾಗಿರಬೇಕು. ಈ ನಿಟ್ಟಿನಲ್ಲಿ ಮಿನುಗುತಾರೆಯಲ್ಲಿ ಸರಳ ಕನ್ನಡ ಬರಹ ಕಾಣಬಹುದು. ಯಾವುದೇ ಸಾಹಿತ್ಯವನ್ನು ಒಂದು ಜಾತಿ ಪಂಗಡದಲ್ಲಿ ಓದುವುದು ಬಿಟ್ಟು ಓದಿದರೆ ಮಾತ್ರ ಸಾಹಿತ್ಯಕ್ಕೆ ಮಹತ್ವ ಸಿಗುತ್ತದೆ. ಮಹಿಳೆಯರಲ್ಲಿ ಮತ್ತು ಪುರುಷರಲ್ಲಿ ಒಳ್ಳೆಯ ಮತ್ತು ಕೆಟ್ಟ ಗುಣ ಇರುವರು ಇದ್ದಾರೆ. ಪಾತ್ರಗಳಲ್ಲಿ ಜೀವಂತಿಕೆ ತನ್ನ ದೊಡ್ಡಮನೆ ಆನಂದ್ ತಂದಿದ್ದಾರೆ. ಸಿನಿಮಾ ರಂಗ ಎಂಬುದರ ಬಗ್ಗೆ ಈ ಪುಸ್ತಕದಲ್ಲಿ ತಿಳಿಸಿದ್ದಾರೆ. ಹೆಚ್ಚೆಚ್ಚು ಕನ್ನಡ ಸಾಹಿತ್ಯ ಓದಿದರೇ ಅದರಲ್ಲಿ ಸಿಗುವ ಆನಂದ ಪಡೆಯಬಹುದು. ಮಿನುಗುತಾರೆ ಈ ಪುಸ್ತಕ ಓದಿದರೆ ಮನಸ್ಸಿಗೆ ತೃಪ್ತಿ ಸಿಗುತ್ತದೆ” ಎಂದು ಇದೆ ವೇಳೆ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಎ ವಿ ಕಾಂತಮ್ಮ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ ಸೀಚ ಯತೀಶ್ವರ್, ಪುಸ್ತಕದ ಕೃತಿಗಾರ ಡೊಡ್ಡಮನೆ ಆನಂದ್, ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೋ. ಎಸ್ ಆರ್ ಹೇಮಾವತಿ, ವಿಶ್ವಪಥ ವಿಭಾಗದ ಆರ್ ಪಿ ವೆಂಕಟೇಶ್ ಮೂರ್ತಿ, ಸಾಹಿತಿ ತಿರುಪತಿಹಳ್ಳಿ ಟಿ ಎನ್ ಶಿವಶಂಕರಪ್ಪ, ಸಾಹಿತಿ ಅಪ್ಪಾಜಿಗೌಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page