Thursday, May 22, 2025

ಸತ್ಯ | ನ್ಯಾಯ |ಧರ್ಮ

ಸಾಕ್ಷರತೆ, ಕೃಷಿ ಮತ್ತು ತಲಾ ಆದಾಯದ ಮೇಲೆ ಸೂಚ್ಯಂಕದ ನಿರ್ಧಾರ: ಪ್ರೊ.ಎಂ.ಗೋವಿಂದರಾವ್

ಜಿಲ್ಲೆಯಲ್ಲಿನ ಸಾಕ್ಷರತಾ ಪ್ರಮಾಣ, ಕೃಷಿ ಚಟುವಟಿಕೆ ಮತ್ತು ತಲಾ ಆದಾಯದ ಮೇಲೆ ಅಭಿವೃದ್ಧಿ ಸೂಚ್ಯಂಕ ನಿರ್ಧಾರಗೊಳಿಸಿ, ಹಿಂದುಳಿದ ಪ್ರದೇಶವನ್ನು ಗುರುತಿಸಿ, ಅಲ್ಲಿನ ಸರ್ವಾಂಗೀಣ ವಿಕಾಸಕ್ಕಾಗಿ ಹಾಗೂ ಮುಂದುವರೆದ ಜಿಲ್ಲೆಗಳಿಗೆ ಸಮನಾದ ಎಲ್ಲಾ ರೀತಿಯ ಪ್ರಾತಿನಿದ್ಯ ಕಲ್ಪಿಸುವ ನಿಟ್ಟನಲ್ಲಿ ಸೂಕ್ತ ಹಾಗೂ ಸಕಾಲಿಕ ಕ್ರಮಗಳಿಗಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗದ ಅಧ್ಯಕ್ಷ ಹಾಗೂ ಆರ್ಥಿಕ ತಜ್ಞ ಪ್ರೊ.ಎಂ.ಗೋವಿಂದರಾವ್ಅವರು ಹೇಳಿದರು.

ಅವರು ಇಂದು ಜಿಲ್ಲಾ ಪಂಚಾಯಿತಿಯ ಅಬ್ದುಲ್ನಜೀರ್ಸಾಬ್ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಾದೇಶಿಕ ಅಸಮತೋಲನ ನಿವಾರಣ ಸಮಿತಿ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 2002ರಲ್ಲಿ ಡಾ. ಡಿ.ಎಂ.ನಂಜುಂಡಪ್ಪ ವರದಿಯನ್ವಯ ರಾಜ್ಯದ ಹಿಂದುಳಿದ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಶಿಫಾರಸ್ಸು ಮಾಡಿದ ಪ್ರಮಾಣದ ಮೊತ್ತ ಸಕಾಲದಲ್ಲಿ ಬಿಡುಗಡೆಯಾಗಲಿಲ್ಲ. ಅಲ್ಲದೇ ಬಿಡುಗಡೆಯಾದ ಮೊತ್ತದಲ್ಲಿ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿ ಕಾರ್ಯಗಳು ನಡೆಯದಿರುವುದೂ ಕೂಡ ಅಭಿವೃದ್ಧಿ ಸೂಚ್ಯಂಕದಲ್ಲಿ ಏರಿಕೆ ಕಾಣುವುದು ಸಾಧ್ಯವಾಗಿಲ್ಲ ಎಂದವರು ನುಡಿದರು.

ಪ್ರಸ್ತುತ ಸರ್ಕಾರವು 2024ರ ಜನವರಿ ಮಾಹೆಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಆರ್ಥಿಕ ತಜ್ಞರನ್ನೊಳಗೊಂಡ ಐಎಉ ಜನರ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯು ಕೃಷಿ, ಕೈಗಾರಿಕೆ, ಆರ್ಥಿಕ ಮೂಲಸೌಲಭ್ಯಗಳು, ಸಾಮಾಜಿಕ ಸೌಲಭ್ಯಗಳು, ಹಣಕಾಸಿನ ಮತ್ತು ತಾಂತ್ರಿಕ ಮೂಲಸೌಕರ್ಯ ಮುಂತಾದ ವಲಯಗಳ ಅಭಿವೃದ್ಧಿಯನ್ನು ಗುರುತಿಸಿ, ಸೂಚ್ಯಂಕವನ್ನು ನಿಗಧಿಪಡಿಸಲಿದೆ ಎಂದವರು ನುಡಿದರು.

ಇದರೊಂದಿಗೆ ಸ್ಥಳೀಯ ಜನರಲ್ಲಿನ ವಾಸ್ತವ ವಿಷಯಗಳ ಕುರಿತು ವಿಷಯಾಧಾರಿತ ಚರ್ಚೆ ನಡೆಸಿ,ಅವರ ಅನುಭವದ ಮಾತುಗಳನ್ನಾಲಿಸಿ, ಮಾಡಬಹುದಾದ ಅಭಿವೃಧ್ಧಿ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಲಾಗುವುದು ಎಂದ ಅವರು, ಈಗಾಗಲೇ ಸಮಿತಿಯು ಗುರುತಿಸಿರುವ ವಿಷಯಗಳಲ್ಲದೇ ಇನ್ನೂ ಅನೇಕ ವಿಷಯಗಳನ್ನು ಈ ನಿಯೋಗವು ಗಮನಿಸಲಿದೆ ಎಂದರು.

ಪ್ರೊ.ಡಿ.ಎಂ. ನಂಜುಂಡಪ್ಪ ಅವರು ವರದಿ ಸಲ್ಲಿಸಿದ್ದ ಅವಧಿಯ ಅಂದಿನ ಮತ್ತು ಇಂದಿನ ಸ್ಥಿತಿಗತಿಗಳ ಕುರಿತೂ ಸಮಿತಿ ವಿಶೇಷ ಗಮನಹರಿಸಲಿದೆ ಅಲ್ಲದೇ ಆಗಿರಬಹುದಾದ ಲಾಭ-ನಷ್ಟಗಳ ಬಗ್ಗೆಯೂ ಬೆಳಕು ಚೆಲ್ಲಲಿದೆ ಎಂದ ಅವರು, ಈಗಾಗಲೇ ರಾಜ್ಯದಲ್ಲಿ ವಲಯಾಧಾರಿತವಾಗಿ ಅನೇಕ ನಿಗಮ ಮಂಡಳಿಗಳನ್ನು ರಚಿಸಿ, ಕೋಟ್ಯಂತರ ರೂಪಾಯಿಗಳ ಅನುದಾನ ಬಿಡುಗಡೆಗೊಳಿಸಲಾಗಿದೆ. ಇದರಿಂದ ಆಗಿರಬಹುದಾದ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆಯೂ ಗಮನಹರಿಸಲಿದೆ. ಇದರೊಂದಿಗೆ ದೇಶದ ಅಭಿವೃದ್ಧಿ ಸೂಚ್ಯಂಕದಲ್ಲಿ ರಾಜ್ಯದ ಸ್ಥಾನಮಾನ, ವಿವಿಧ ಕ್ಷೇತ್ರಗಳ ಅಭಿವೃದ್ಧಿ ಮುಂತಾದವುಗಳ ಮಾಹಿತಿಯನ್ನು ಕಲೆಹಾಕಲಾಗುವುದು ಎಂದರು.

ಪ್ರಸ್ತುತ ಸಂದರ್ಭದಲ್ಲಿ ಕರ್ನಾಟಕವು ದೇಶದ ಪ್ರಗತಿ ಸೂಚ್ಯಂಕದಲ್ಲಿ ತೆಲಂಗಾಣದ ನಂತರದ ಸ್ಥಾನದಲ್ಲಿದೆ. ಬೆಳೆಯುತ್ತಿರುವ ದೇಶದ ಬೇರೆ-ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಶೇ.67ರಷ್ಟು ಪ್ರಗತಿಯಲ್ಲಿದೆ. ಕೃಷಿಯಲ್ಲಿ ಶೇ.10ರಷ್ಟು ಮತ್ತು ಕೈಗಾರಿಕೆಯಲ್ಲಿ ಶೇ.20.05ರಷ್ಟು ಅಭಿವೃದ್ಧಿ ಹೊಂದಿದೆ. ಎಂದ ಅವರು ಶಿವಮೊಗ್ಗ ಜಿಲ್ಲೆ ತಲಾ ಆದಾಯ ಗಳಿಕೆಯಲ್ಲಿ ತಕ್ಕಮಟ್ಟಿನ ಪ್ರಗತಿಯಲ್ಲಿದೆ. ಆದರೆ, ಆರೋಗ್ಯದ ಕಾಳಜಿ ವಹಿಸುವಲ್ಲಿ ಹಾಗೂ ಶಿಕ್ಷಣ ಕ್ಷೇತ್ರದ ವಿಕಾಸದಲ್ಲಿ ನಿರೀಕ್ಷಿತ ಪ್ರಗತಿ ಆಗಿರುವುದಿಲ್ಲ. ಅಲ್ಲದೇ ಸುಧಾರಣೆಗೊಳ್ಳಬೇಕಾದ ಅಗತ್ಯವಿದೆ ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page