ಮೈಸೂರು: ಸೆಪ್ಟಂಬರ್ 30 ರಂದು ಕರ್ನಾಟಕದಲ್ಲಿ ಪ್ರಾರಂಭಗೊಳ್ಳುವ ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿಗೊಳಿಸುವಂತೆ ಕರ್ನಾಟಕದ ಜನತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕಮಾರ್ ಮನವಿ ಮಾಡಿಕೊಂಡಿದ್ದಾರೆ.
ಯಾತ್ರೆಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಐತಿಹಾಸಿಕ ಯಾತ್ರೆಯ ಮೂಲಕ ದೇಶದ ಜನರ ಧ್ವನಿಯಾಗಲು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕಟಿಬದ್ಧರಾಗಿದ್ದು, ಬೆಲೆಏರಿಕೆ, ನಿರುದ್ಯೋಗ, ರೈತರ ಸಂಕಷ್ಟ ಮೊದಲಾದ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ ಎಂದು ಹೇಳಿದರು.
ಈ ಯಾತ್ರೆಯು ಮೈಸೂರಿನ ಮಾರ್ಗವಾಗಿ ಬರುತ್ತಿದ್ದು, ರಾಹುಲ್ ಅವರು ತಮಗೆ ಇದೇ ಮಾರ್ಗ ಬೇಕು ಎಂದು ಆಯ್ಕೆ ಮಾಡಿಕೊಂಡಿದ್ದಾರೆ. ವಿಶೇಷವಾಗಿ ನಿರುದ್ಯೋಗಿ ಯುವಕರು, ಮಹಿಳೆಯರನ್ನು ರಾಹುಲ್ ಗಾಂಧಿ ಅವರು ಯಾತ್ರೆ ವೇಳೆ ಭೇಟಿ ಮಾಡಲು ಉದ್ದೇಶಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ಪ್ರತೀ ಮನೆ ಮನೆಗೆ ಹೋಗಿ ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ಡಿ.ಕೆ.ಶಿ ಸೂಚನೆ ನೀಡಿದರು.

ಈಗಾಗಲೇ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು 40,000 ನಿರುದ್ಯೋಗಿ ಯುವಕರು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಈ ಹಿನ್ನಲೆ ನಾಯಕರು ಪ್ರತೀ ಗ್ರಾಮ ಪಂಚಾಯಿತಿಗಳಲ್ಲೂ ಸಭೆ ನಡೆಸಬೇಕು. ರಾಜ್ಯದಲ್ಲಿ ನಡೆಯಲಿರುವ ಈ ಯಾತ್ರೆಯನ್ನು ದೇಶಕ್ಕೆ ಮಾದರಿಯನ್ನಾಗಿಸಬೇಕು . ಮೇಕೆದಾಟು ಯಾತ್ರೆ, ಸ್ವಾತಂತ್ರ್ಯ ನಡಿಗೆಯಂತೆ ಈ ಯಾತ್ರೆಯನ್ನೂ ಯಶಸ್ವಿಗೊಳಿಸಿ ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.