Wednesday, July 2, 2025

ಸತ್ಯ | ನ್ಯಾಯ |ಧರ್ಮ

ಬೈಕ್ ಟ್ಯಾಕ್ಸಿಗೆ ಬಿಗ್ ರಿಲೀಫ್, ಸೇವೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ : ಕೇಂದ್ರ ಸರ್ಕಾರವು ಬೈಕ್ ಟ್ಯಾಕ್ಸಿ ಸೇವೆಗೆ (Bike Taxi Service) ಅನುಮತಿ ನೀಡಿದ್ದು, ವಾಣಿಜ್ಯೇತರ ಖಾಸಗಿ ಬೈಕ್‌ಗಳನ್ನು ಬಳಸಿಕೊಂಡು ಅಗ್ರಿಗೇಟರ್‌ಗಳು ಬೈಕ್ ಟ್ಯಾಕ್ಸಿ ಸೇವೆ ನೀಡಬಹುದು. ಆದರೆ ಇದಕ್ಕೆ ಆಯಾ ರಾಜ್ಯ ಸರ್ಕಾರಗಳ ಅನುಮತಿ ಕಡ್ಡಾಯ ಎಂದು ಹೇಳಿದೆ. ಬೈಕ್ ಟ್ಯಾಕ್ಸಿ ಸೇವೆಗೆ ಕರ್ನಾಟಕ ರಾಜ್ಯ ಸರ್ಕಾರ ನಿಷೇಧ ಹೇರಿದ್ದು, ಅದರ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಇದೇ ಹೊತ್ತಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಕುರಿತು ಅದು ಮಂಗಳವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೇಂದ್ರ ಸಾರಿಗೆ ಸಚಿವಾಲಯ ಮೋಟಾರು ವಾಹನ ಕಾಯ್ದೆ 1988ರ ಅಡಿಯ ಮೋಟಾರ್ ವಾಹನಗಳ ಅಗ್ರಿಗೇಟರ್ ಮಾರ್ಗಸೂಚಿ 2025 ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರಗಳು ಖಾಸಗಿ ಬೈಕುಗಳನ್ನು ಪ್ರಯಾಣಿಕರ ಸಂಚಾರಕ್ಕೆ ಬಳಸಲು ಅಗ್ರಿಗೇಟರುಗಳಿಗೆ ಅನುಮತಿ ಕೊಡಬಹುದು ಎಂದು ಹೇಳಿದೆ. ಆದರೆ ಇದಕ್ಕೆ ಆಯಾ ರಾಜ್ಯ ಸರ್ಕಾರಗಳ ಅನುಮತಿ ಕಡ್ಡಾಯ ಎಂದಿರುವುದರಿಂದ, ಕರ್ನಾಟಕದಲ್ಲಿ ಈಗಾಗಲೇ ಜಾರಿಯಲ್ಲಿರುವ ಬೈಕ್‌ ಟ್ಯಾಕ್ಸಿ ನಿಷೇಧ ಮುಂದುವರಿಯಲಿದೆ.

ಕೇಂದ್ರ ಸರ್ಕಾರ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿರುವುದು ಇದೇ ಮೊದಲು. ಖಾಸಗಿ ವಾಹನ ಬಳಸಿ ಅಗ್ರಿಗೇಟರ್ ಗಳು ಸೇವೆ ನೀಡಬಹುದು. ಇದಕ್ಕೆ ದೈನಂದಿನ, ವಾರ, ಮಾಸಿಕ ಅವಧಿಗೆ ಸರ್ಕಾರ ಶುಲ್ಕ ವಿಧಿಸಬಹುದು. ಇದರಿಂದ ಸಂಚಾರದಟ್ಟಣೆ, ಮಾಲಿನ್ಯ ನಿಯಂತ್ರಣ, ಅಗ್ಗದ ಪ್ರಯಾಣ ಸಾಧ್ಯ. ಸ್ಥಳೀಯ ಸಾರಿಗೆ ಅಭಿವೃದ್ಧಿ, ಜೀವನ ರೂಪಿಸುವ ಅವಕಾಶ ಮಾಡಿಕೊಡಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಅಂತಿಮ ನಿರ್ಣಯ ರಾಜ್ಯ ಸರ್ಕಾರಗಳದ್ದೇ

ಇದೇ ವೇಳೆ ಬೈಕ್ ಟ್ಯಾಕ್ಸಿ ಸೇವೆಗಳ ಅನುಮೋದನೆ ಕುರಿತು ಅಂತಿಮ ನಿರ್ಣಯ ಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇರುತ್ತದೆ ಎಂದೂ ಹೇಳಲಾಗಿದೆ.

ಕರ್ನಾಟಕದಲ್ಲಿ ನಿಷೇಧಕ್ಕೊಳಗಾಗಿರುವ ಸೇವೆ

ಇನ್ನು ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ನಿಷೇಧ ಹೇರಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಮಾರ್ಗಸೂಚಿ ಹೊರಡಿಸಿರುವುದು ಬೈಕ್ ಟ್ಯಾಕ್ಸಿ ಸೇವಾ ಸಂಸ್ಥೆಗಳಿಗೆ ಬಿಗ್ ರಿಲೀಫ್ ನೀಡಿದೆ. ಈ ಪ್ರಕರಣ ಪ್ರಸ್ತುತ ಕೋರ್ಟ್ ನಲ್ಲಿ ವಿಚಾರಣೆಯ ಹಂತದಲ್ಲಿದೆ. ರಾಪಿಡೋ, ಓಲಾ, ಉಬರ್‌ನಂತಹ ಸಂಗ್ರಾಹಕರು ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ. ಇತ್ತ ಬೈಕ್ ಟ್ಯಾಕ್ಸಿ ಚಾಲಕರು ಮತ್ತು ಅಗ್ರಿಗೇಟರ್ ಸಂಸ್ಥೆಗಳು ಈ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಚರ್ಚೆಯಲ್ಲಿ ತೊಡಗಿದ್ದಾರೆ.

Rapido ಸಂತಸ

ಇನ್ನು ಅತ್ತ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆಯಾಗುತ್ತಲೇ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ರ್ಯಾಪಿಡೋ ಸಂಸ್ಥೆ, ‘ಪ್ರಯಾಣಿಕರ ಪ್ರಯಾಣಕ್ಕಾಗಿ ಸಾರಿಗೆಯೇತರ ಮೋಟಾರ್‌ ಸೈಕಲ್‌ಗಳನ್ನು ಒಟ್ಟುಗೂಡಿಸಲು ಅನುಮತಿಸುವ ಹೊಸ ಮೋಟಾರು ವಾಹನಗಳ ಸಂಗ್ರಾಹಕ ಮಾರ್ಗಸೂಚಿಗಳು, 2025 ರ ಷರತ್ತು 23 ಅನ್ನು ಕಾರ್ಯಗತಗೊಳಿಸುವ ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 67(3) ರ ಅಡಿಯಲ್ಲಿ ರಾಜ್ಯದ ಅಧಿಕಾರಗಳಲ್ಲಿ ಬೇರೂರಿರುವ ಈ ಕ್ರಮವು, ಅಭಿವೃದ್ಧಿ ಹೊಂದಿದ, ಸ್ವಾವಲಂಬಿ ಮತ್ತು ಅಂತರ್ಗತ ಭಾರತವಾದ ವಿಕಸಿತ ಭಾರತ ಕಡೆಗೆ ಭಾರತದ ಪ್ರಯಾಣದಲ್ಲಿ ಒಂದು ಮೈಲಿಗಲ್ಲು” ಎಂದು ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page