Tuesday, August 12, 2025

ಸತ್ಯ | ನ್ಯಾಯ |ಧರ್ಮ

ಆಶಾ ಕಾರ್ಯಕರ್ತೆಯರ ರಾಜ್ಯಾದ್ಯಂತ ಅಹೋರಾತ್ರಿ ಸತ್ಯಾಗ್ರಹ

ಬೆಂಗಳೂರು : ಆಶಾ ಕಾರ್ಯಕರ್ತೆಯರ (Asha Workers) ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಹಾಗೂ ಆಲ್‌ ಇಂಡಿಯಾ ಯುನೈಟೆಡ್‌ ಯೂನಿಯನ್‌ ಸೆಂಟರ್‌ (AIUTUC) ಸಹಯೋಗದಲ್ಲಿ ನಾಳೆಯಿಂದ ಆಗಸ್ಟ್ 14ರ ವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ.

ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ಕನಿಷ್ಠ 15 ಸಾವಿರ ರೂಪಾಯಿ ವೇತನ ಕೊಡಬೇಕೆಂದು ಒತ್ತಾಯಿಸಿ, ಕಳೆದ ಜನವರಿ 7 ರಿಂದ 10ನೇ ತಾರೀಖಿನವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್​​​​​​​ನಲ್ಲಿ ನಡೆದ ಅಹೋರಾತ್ರಿ ಧರಣಿ ಸತ್ಯಾಗ್ರಹ ವೇಳೆ ಸಿಎಂ ಸಿದ್ದರಾಮಯ್ಯನವರು ಸಂಧಾನ ಸಭೆ ನಡೆಸಿ, 10,000 ರೂಪಾಯಿ ಹಾಗೂ ಬಜೆಟ್‌ನಲ್ಲಿ ಸಾವಿರ ರೂಪಾಯಿ ಹೆಚ್ಚುವರಿ ವೇತನ ಘೋಷಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಅವರು ಅಸಮಾಧಾನ ಹೊರ ಹಾಕಿದರು. ನೋಟಿಸ್‌ ಹಿಂಪಡೆಯಲು ಪಟ್ಟು: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಮ್ಮ ವೇತನ ಏರಿಕೆ ಮಾಡುವುದನ್ನು ಬಿಟ್ಟು, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಜನಸಂಖ್ಯೆ, ಶಿಕ್ಷಣ, ಮೌಲ್ಯ ಮಾಪನ ಹೆಸರಿನಲ್ಲಿ ಕೈ ಬಿಡುವ ನಿರ್ಧಾರದಿಂದ ನೋಟಿಸ್‌ ನೀಡಲಾಗಿದೆ. ಇದರಿಂದ ಆಶಾ ಕಾರ್ಯಕರ್ತೆಯರು ಆತಂಕದಲ್ಲಿದ್ದಾರೆ. ಹೀಗಾಗಿ ನೋಟಿಸ್‌ ನೀಡಿದ ಕಾರ್ಯಕರ್ತೆಯರ ಸೇವೆ ಮುಂದುವರಿಸಬೇಕು. ಸರ್ಕಾರ ನೀಡಿದ ಭರವಸೆಯಂತೆ 10 ಸಾವಿರ ರೂಪಾಯಿ ಗ್ಯಾರಂಟಿ ಹಾಗೂ ಒಂದು ಸಾವಿರ ರೂಪಾಯಿ ಹೆಚ್ಚುವರಿ ವೇತನ ಸೇರಿ 11 ಸಾವಿರ ರೂಪಾಯಿ ವೇತನ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಆಶಾ ಕಾರ್ಯಕರ್ತರ ಬೇಡಿಕೆಗಳೇನು?:

* ನಗರ ಪ್ರದೇಶದ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ವೆಚ್ಚಗಳಿಗೆ ಅನುಗುಣವಾಗಿ ಗೌರವಧನವನ್ನು ಮಾಸಿಕ 20 ಸಾವಿರ ರೂಪಾಯಿಗೆ ಹೆಚ್ಚಿಸಬೇಕು.

* 8 ವರ್ಷಗಳಿಂದ ಆಶಾನಿಧಿ ಪೋರ್ಟಲ್‌ನಲ್ಲಿ ಆಶಾ ಕಾರ್ಯಕರ್ತೆಯರು ಮಾಡಿದ ಕೆಲಸಗಳು ದಾಖಲಾಗದೇ, ಪ್ರೋತ್ಸಾಹಧನವೂ ಬಂದಿಲ್ಲ. ರಾಜ್ಯದಾದ್ಯಂತ ಬಾಕಿ ಇರುವ 3 ತಿಂಗಳ ಪ್ರೋತ್ಸಾಹಧನ ಕೂಡಲೇ ಬಿಡುಗಡೆಗೊಳಿಸಬೇಕು

* ಮೊಬೈಲ್ ಆಧಾರಿತ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ಮಾಡಿಸಿಕೊಳ್ಳಬಾರದು. ಇಲ್ಲದಿದ್ದರೆ ಮೊಬೈಲ್‌ ಆಧಾರಿತ ಕೆಲಸಗಳಿಗೆ ಪ್ರೋತ್ಸಾಹಧನ ನಿಗದಿಪಡಿಸಬೇಕು.

* ಪಶ್ಚಿಮ ಬಂಗಾಳದ ಮಾದರಿಯಲ್ಲಿ ಸೇವಾ ನಿವೃತ್ತಿ ಪಡೆಯುವ ಆಶಾ ಕಾರ್ಯಕರ್ತೆಯರಿಗೆ ವರ್ಷಕ್ಕೆ 5 ಲಕ್ಷ ರೂಪಾಯಿ ನೀಡಬೇಕು.

* ಪ್ರತಿವರ್ಷ ಆಶಾ ಕಾರ್ಯಕರ್ತೆಯರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ಸೌಲಭ್ಯ ಕಲ್ಪಿಸಬೇಕು. ನಮ್ಮನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ, ಗ್ರಾಚ್ಯುಟಿ, ಭವಿಷ್ಯ ನಿಧಿ, ಕಾರ್ಮಿಕರ ರಾಜ್ಯ ವಿಮೆ ಸೌಲಭ್ಯ ಒದಗಿಸಬೇಕು

Related Articles

ಇತ್ತೀಚಿನ ಸುದ್ದಿಗಳು

You cannot copy content of this page