Monday, August 18, 2025

ಸತ್ಯ | ನ್ಯಾಯ |ಧರ್ಮ

ವಿಭಜನೆಯ ಕಲ್ಪನೆಯನ್ನು ಮೊದಲು ಪ್ರತಿಪಾದಿಸಿದ್ದು ಸಾವರ್ಕರ್‌; ಕಾಂಗ್ರೆಸ್‌ ಅಲ್ಲ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ದೇಶದ ವಿಭಜನೆಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿರುವ ಎನ್‌ಸಿಇಆರ್‌ಟಿ ಹೊಸ ಪಠ್ಯಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ವಿಭಜನೆಯ ಕಲ್ಪನೆಯನ್ನು ಮೊದಲು ಪ್ರತಿಪಾದಿಸಿದ್ದು ಮುಹಮ್ಮದ್ ಅಲಿ ಜಿನ್ನಾ ಅಲ್ಲ, ವಿನಾಯಕ ದಾಮೋದರ್ ಸಾವರ್ಕರ್ ಎಂದು ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಪೋಸ್ಟ್ ಮಾಡಿದ್ದಾರೆ.

ಖರ್ಗೆಯವರ ಈ ಪೋಸ್ಟ್‌ ಬಿಜೆಪಿಯ ರಾಷ್ಟ್ರೀಯತೆಯ ವ್ಯಾಖ್ಯಾನವನ್ನು ಟಾರ್ಗೆಟ್‌ ಮಾಡಿದ್ದು, ಸಂಘ ಪರಿವಾರದ ಸಿದ್ಧಾಂತವೇ ದೇಶ ವಿಭಜನೆಗೆ ಕಾರಣ ಎಂದು ಆರೋಪಿಸಿದ್ದಾರೆ.

“ಎರಡು ರಾಷ್ಟ್ರಗಳ ಕಲ್ಪನೆಯನ್ನು ಮೊದಲು ‘ವೀರ’ ಸಾವರ್ಕರ್ ಮಂಡಿಸಿದ್ದು, ಅದನ್ನು ಅವರ ‘ತುಕ್ಡೆ ತುಕ್ಡೆ ಗ್ಯಾಂಗ್’ ಬೆಂಬಲಿಸಿತು” ಎಂದು ಅವರು ಬರೆದಿದ್ದಾರೆ.

ತಮ್ಮ ಅನುಯಾಯಿಗಳಿಗೆ “ಕ್ರೋನೊಲಜಿಯನ್ನು ಅರ್ಥಮಾಡಿಕೊಳ್ಳಿ” ಎಂದು ಕರೆ ನೀಡಿದ ಖರ್ಗೆ, ಸಾವರ್ಕರ್ ಅವರ 1922ರ ಪುಸ್ತಕ ‘ಎಸೆನ್ಷಿಯಲ್ಸ್ ಆಫ್ ಹಿಂದೂತ್ವ’ (Essentials of Hindutva) ಉಲ್ಲೇಖಿಸಿದ್ದಾರೆ. ಈ ಪುಸ್ತಕದಲ್ಲಿ, ಹಿಂದೂತ್ವವನ್ನು ಧರ್ಮದ ಬದಲಿಗೆ ಭಾರತವನ್ನು “ಪಿತೃಭೂಮಿ ಮತ್ತು ಪುಣ್ಯಭೂಮಿ” ಎಂದು ಪರಿಗಣಿಸುವ ಕಲ್ಪನೆಯಿಂದ ವ್ಯಾಖ್ಯಾನಿಸಲಾಗಿದೆ ಎಂದು ಹೇಳಿದರು.

ಅವರು ಸಾವರ್ಕರ್ ಅವರ 1937ರ ಅಹಮದಾಬಾದ್‌ನಲ್ಲಿ ನಡೆದ ಹಿಂದೂ ಮಹಾಸಭಾದ 19ನೇ ಅಧಿವೇಶನದ ಭಾಷಣವನ್ನು ಸಹ ಉಲ್ಲೇಖಿಸಿದ್ದಾರೆ. ಈ ಭಾಷಣದಲ್ಲಿ, “ಭಾರತದಲ್ಲಿ ಎರಡು ವಿರೋಧಿ ರಾಷ್ಟ್ರಗಳು ಅಕ್ಕಪಕ್ಕದಲ್ಲಿ ವಾಸಿಸುತ್ತಿವೆ. ಮುಖ್ಯವಾಗಿ ಭಾರತದಲ್ಲಿ ಎರಡು ರಾಷ್ಟ್ರಗಳಿವೆ: ಹಿಂದೂಗಳು ಮತ್ತು ಮುಸ್ಲಿಮರು” ಎಂದು ಸಾವರ್ಕರ್ ಘೋಷಿಸಿದ್ದರು.

ಇದಾದ ಕೇವಲ ಮೂರು ವರ್ಷಗಳ ನಂತರ, 1940ರಲ್ಲಿ ಜಿನ್ನಾ ಮತ್ತು ಅಖಿಲ ಭಾರತ ಮುಸ್ಲಿಂ ಲೀಗ್ ಲಾಹೋರ್ ನಿರ್ಣಯದ ಮೂಲಕ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಔಪಚಾರಿಕವಾಗಿ ಅಳವಡಿಸಿಕೊಂಡರು ಎಂದು ಖರ್ಗೆ ವಾದಿಸಿದ್ದಾರೆ.

ಅವರು ಸಾವರ್ಕರ್ ಅವರ 1943ರ ನಾಗಪುರ ಭಾಷಣವನ್ನು ಉಲ್ಲೇಖಿಸಿ, “ನನಗೆ ಶ್ರೀ ಜಿನ್ನಾ ಅವರ ಎರಡು ರಾಷ್ಟ್ರಗಳ ಸಿದ್ಧಾಂತದ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ” ಎಂದಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ

ತಮ್ಮ ವಾದವನ್ನು ಸಮರ್ಥಿಸಲು, ಖರ್ಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತುಗಳನ್ನು ಉಲ್ಲೇಖಿಸಿದ್ದಾರೆ: “ಇದು ವಿಚಿತ್ರವಾಗಿ ಕಂಡರೂ, ಶ್ರೀ ಸಾವರ್ಕರ್ ಮತ್ತು ಶ್ರೀ ಜಿನ್ನಾ… ಪೂರ್ಣ ಒಪ್ಪಂದದಲ್ಲಿದ್ದಾರೆ… ಅವರು ಕೇವಲ ನಿಯಮಗಳ ಬಗ್ಗೆ ಮಾತ್ರ ಭಿನ್ನಾಭಿಪ್ರಾಯ ಹೊಂದಿದ್ದಾರೆ.”

Related Articles

ಇತ್ತೀಚಿನ ಸುದ್ದಿಗಳು

You cannot copy content of this page