Friday, August 22, 2025

ಸತ್ಯ | ನ್ಯಾಯ |ಧರ್ಮ

ನಿರ್ಬಂಧದ ನಡುವೆಯೂ ಕೊಡಗು ಪ್ರವೇಶಿಸಿದ ಪುನೀತ್ ಕೆರೆಹಳ್ಳಿಯನ್ನು ಹೊರಗೆ ಓಡಿಸಿದ ಪೊಲೀಸರು

ಮಡಿಕೇರಿ: ಕೊಡಗು ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧವಿದ್ದರೂ, ಕುಶಾಲನಗರಕ್ಕೆ ಆಗಮಿಸಿದ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದು ಜಿಲ್ಲೆಯಿಂದ ಹೊರ ಕಳುಹಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ “ನಿರಾಧಾರ ಆರೋಪ” ಮಾಡುತ್ತಿರುವವರನ್ನು ಬಂಧಿಸುವಂತೆ ಆಗ್ರಹಿಸಿ ಕುಶಾಲನಗರದಲ್ಲಿ ಜನಜಾಗೃತಿ ವೇದಿಕೆ ಮತ್ತು ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪುನೀತ್ ಕೆರೆಹಳ್ಳಿ ಬಂದಿದ್ದರು. ಆದರೆ, ಅವರ ಆಗಮನದ ಮುನ್ಸೂಚನೆ ಪಡೆದ ಪೊಲೀಸರು ಅವರನ್ನು ತಡೆಯಲು ಗಡಿಯಲ್ಲಿ ಕಣ್ಗಾವಲು ಇರಿಸಿದ್ದರು. ಪುನೀತ್ ಕೆರೆಹಳ್ಳಿ ಮೈಸೂರು ಜಿಲ್ಲೆಯ ಬೈಲುಕುಪ್ಪೆಯವರೆಗೆ ಕಾರಿನಲ್ಲಿ ಬಂದು, ನಂತರ ಪೊಲೀಸರ ಕಣ್ತಪ್ಪಿಸಿ ಆಟೋದಲ್ಲಿ ಕುಶಾಲನಗರ ಪ್ರವೇಶಿಸಿದ್ದರು ಎನ್ನಲಾಗಿದೆ.

ಪ್ರತಿಭಟನೆಯ ಸ್ಥಳದಲ್ಲಿ ವೇದಿಕೆ ಏರುತ್ತಿದ್ದಂತೆ ಪೊಲೀಸರು ಅಲ್ಲಿಗೆ ತೆರಳಿ ಜಿಲ್ಲೆಗೆ ಪ್ರವೇಶಿಸದಂತೆ ಇರುವ ನಿರ್ಬಂಧದ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟರು. ಆದರೆ, ಹಿಂದೂ ಸಂಘಟನೆಗಳ ಪ್ರಮುಖರು ಮತ್ತು ಕಾರ್ಯಕರ್ತರು ಪುನೀತ್ ಕೆರೆಹಳ್ಳಿಯನ್ನು ಹೊರ ಕಳುಹಿಸುವುದನ್ನು ತೀವ್ರವಾಗಿ ವಿರೋಧಿಸಿದರು.

ಈ ಹಂತದಲ್ಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಮತ್ತು ಕುಶಾಲನಗರದ ಡಿವೈಎಸ್‌ಪಿ ಚಂದ್ರಶೇಖರ್ ಸೇರಿದಂತೆ ಇತರ ಅಧಿಕಾರಿಗಳು ಮಧ್ಯಪ್ರವೇಶಿಸಿ, ಜಿಲ್ಲಾಧಿಕಾರಿಗಳ ನಿರ್ಬಂಧದ ಆದೇಶವನ್ನು ವಿವರಿಸಿದರು ಮತ್ತು ವೇದಿಕೆಯಿಂದ ಇಳಿಯುವಂತೆ ಸೂಚಿಸಿದರು.

ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದವೂ ನಡೆಯಿತು. ಅಂತಿಮವಾಗಿ, ಪೊಲೀಸರು ಪುನೀತ್ ಕೆರೆಹಳ್ಳಿಯವರ ಮನವೊಲಿಸುವಲ್ಲಿ ಯಶಸ್ವಿಯಾಗಿ, ಅವರನ್ನು ಖಾಸಗಿ ವಾಹನದಲ್ಲಿ ಕುಶಾಲನಗರದಿಂದ ಪಿರಿಯಾಪಟ್ಟಣದ ಕಡೆಗೆ ಕಳುಹಿಸಿಕೊಟ್ಟರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page