ಅಡುಗೆ ಮನೆ ಆಯ್ತು, ಈಗ ಬೆಡ್ ರೂಮಿಗೂ ತಟ್ಟಿದ ಯುದ್ಧದ ಬಿಸಿ; ಕಾಂಡೋಮ್ ಉತ್ಪಾದನೆ ಮೇಲೆ ನೇರ ಪರಿಣಾಮ

ಗಲ್ಫ್ ಪ್ರದೇಶದಲ್ಲಿ ತೀವ್ರಗೊಂಡಿರುವ ಜಿಯೋಪಾಲಿಟಿಕಲ್ ಉದ್ವಿಗ್ನತೆ ಭಾರತದ ಕಾಂಡೋಮ್ ಉತ್ಪಾದನಾ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರಿದೆ. ಸುಮಾರು ₹8,000 ಕೋಟಿ ಮೌಲ್ಯದ ಈ ಉದ್ಯಮ ಇದೀಗ ಕಚ್ಚಾ ವಸ್ತುಗಳ ಕೊರತೆ, ಬೆಲೆ ಏರಿಕೆ ಹಾಗೂ ಪೂರೈಕೆ ಸರಪಳಿ ವ್ಯತ್ಯಯಗಳಿಂದ ಸಂಕಷ್ಟವನ್ನು ಎದುರಿಸುತ್ತಿದೆ.

ವಾರ್ಷಿಕವಾಗಿ 400 ಕೋಟಿ ಯೂನಿಟ್‌ಗಳ ಉತ್ಪಾದನೆ ಸಾಮರ್ಥ್ಯ ಹೊಂದಿರುವ ಈ ವಲಯದಲ್ಲಿ ಸಿಲಿಕೋನ್ ಎಣ್ಣೆ ಮತ್ತು ಅಮೋನಿಯಾ ಎಂಬ ಎರಡು ಪ್ರಮುಖ ಒಳಹರಿವುಗಳ ಕೊರತೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಲೂಬ್ರಿಕೇಶನ್‌ಗೆ ಬಳಸುವ ಸಿಲಿಕೋನ್ ಎಣ್ಣೆಯ ಪೂರೈಕೆ ತೀವ್ರವಾಗಿ ಕುಂಠಿತವಾಗಿದ್ದು, ಲ್ಯಾಟೆಕ್ಸ್ ಸ್ಥಿರಗೊಳಿಸಲು ಅಗತ್ಯವಾದ ಅಮೋನಿಯಾದ ಬೆಲೆಗಳು ಶೇಕಡಾ 40ರಿಂದ 50ರವರೆಗೆ ಏರಿಕೆಯಾಗುವ ಸಾಧ್ಯತೆ ವ್ಯಕ್ತವಾಗಿದೆ.

ಇದರ ಜೊತೆಗೆ ಪ್ಯಾಕೇಜಿಂಗ್‌ಗೆ ಅಗತ್ಯವಾದ ಪಿವಿಸಿ ಮತ್ತು ಅಲ್ಯೂಮಿನಿಯಂ ಫಾಯಿಲ್‌ನ ಬೆಲೆಗಳೂ ಏರಿಕೆಯಾಗುತ್ತಿದ್ದು, ಉತ್ಪಾದನಾ ವೆಚ್ಚದಲ್ಲಿ ಭಾರೀ ಹೆಚ್ಚಳ ಕಂಡುಬರುತ್ತಿದೆ. ಪರಿಣಾಮವಾಗಿ ತಯಾರಕರು ಆರ್ಥಿಕ ಒತ್ತಡಕ್ಕೆ ಸಿಲುಕಿದ್ದಾರೆ.

ಈ ಪರಿಸ್ಥಿತಿ ಪ್ರಮುಖ ಕಂಪನಿಗಳಾದ HLL ಲೈಫ್‌ಕೇರ್ ಲಿಮಿಟೆಡ್, ಮ್ಯಾನ್‌ಕೈಂಡ್ ಫಾರ್ಮಾ ಹಾಗೂ ಕ್ಯುಪಿಡ್ ಲಿಮಿಟೆಡ್ ಸಂಸ್ಥೆಗಳ ಮೇಲೂ ಪರಿಣಾಮ ಬೀರಿದೆ. ಪೂರೈಕೆ ವ್ಯತ್ಯಯ ಮತ್ತು ಲಾಜಿಸ್ಟಿಕ್ಸ್ ಸಮಸ್ಯೆಗಳ ಕಾರಣದಿಂದ ಉತ್ಪಾದನೆ ಹಾಗೂ ಆರ್ಡರ್‌ಗಳ ಪೂರ್ಣಗೊಳಿಸುವಿಕೆಯಲ್ಲಿ ಅಡಚಣೆಗಳು ಎದುರಾಗುತ್ತಿವೆ.

ಉದ್ಯಮ ವಲಯದ ಮೂಲಗಳ ಪ್ರಕಾರ, ಪೆಟ್ರೋಕೆಮಿಕಲ್ ಸಂಪನ್ಮೂಲಗಳ ಹಂಚಿಕೆಯಲ್ಲಿ ಶೇ.35ರಷ್ಟು ಕಡಿತ ಸಾಧ್ಯತೆ ಇರುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಿಯಾಗುವ ಸಾಧ್ಯತೆ ಇದೆ. ಸರ್ಕಾರವು ಅಗತ್ಯ ವಲಯಗಳಿಗೆ ಆದ್ಯತೆ ನೀಡುತ್ತಿರುವ ಹಿನ್ನೆಲೆ, ಕಾಂಡೋಮ್ ತಯಾರಿಕಾ ವಲಯಕ್ಕೆ ಪೂರೈಕೆ ಕಡಿಮೆಯಾಗುವ ಭೀತಿ ಹೆಚ್ಚಾಗಿದೆ.

ತಜ್ಞರ ಅಭಿಪ್ರಾಯದಲ್ಲಿ, ಈ ಬೆಳವಣಿಗೆಗಳು ಕೇವಲ ಕೈಗಾರಿಕಾ ಸಮಸ್ಯೆಯಲ್ಲ, ಸಾರ್ವಜನಿಕ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಕಡಿಮೆ ಬೆಲೆಯ ಕಾಂಡೋಮ್‌ಗಳ ಲಭ್ಯತೆ ಕಡಿಮೆಯಾದರೆ ಬಳಕೆ ಕುಸಿತವಾಗಿ, ಅದರ ಸಾಮಾಜಿಕ ಪರಿಣಾಮಗಳು ಗಂಭೀರವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

Related Articles

ಇತ್ತೀಚಿನ ಸುದ್ದಿಗಳು