ಯತ್ನಾಳ್ ಶೀಘ್ರವೇ ಬಿಜೆಪಿಗೆ ವಾಪಸ್ ಬರಲಿದ್ದಾರೆ: ರಮೇಶ್ ಜಾರಕಿಹೊಳಿ

ಅಥಣಿ (ಬೆಳಗಾವಿ): ಪಕ್ಷದಿಂದ ಉಚ್ಚಾಟಿತರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರ ನಡೆಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಅವರು ಶೀಘ್ರದಲ್ಲೇ ಪಕ್ಷಕ್ಕೆ ಮರಳಲಿದ್ದಾರೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ.

ಬುಧವಾರ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳಿ, “ಯತ್ನಾಳ್ ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವ ವಿಶ್ವಾಸ ನಮಗಿದೆ. ಅವರು ಉಚ್ಚಾಟನೆಯಾದ ದಿನದಿಂದಲೂ ನಾವು ಅವರನ್ನು ಮರಳಿ ಕರೆತರಲು ಪ್ರಯತ್ನಿಸುತ್ತಿದ್ದೇವೆ. ಈಗ ಅವರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವುದು ಅವರ ಮರುಪ್ರವೇಶಕ್ಕೆ ವೇದಿಕೆ ಸಿದ್ಧವಾಗಿರುವುದನ್ನು ಸೂಚಿಸುತ್ತದೆ. ಯತ್ನಾಳ್ ಅವರ ಆಗಮನದಿಂದ ಬಿಜೆಪಿಗೆ ಹಿಂದೂ ಮತಗಳ ಬೆಂಬಲ ಮತ್ತಷ್ಟು ಬಲಗೊಳ್ಳಲಿದೆ,” ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರ ಬಿಜೆಪಿ ಮರುಪ್ರವೇಶದ ಕುರಿತಾದ ಚರ್ಚೆಗಳಿಗೆ ಜಾರಕಿಹೊಳಿ ಬ್ರೇಕ್ ಹಾಕಿದರು. “ಸವದಿ ಬೆಂಬಲಿಗರು ಅವರು ಬಿಜೆಪಿಗೆ ಮರಳುತ್ತಾರೆ ಎಂಬ ವಾತಾವರಣ ಸೃಷ್ಟಿಸುತ್ತಿದ್ದಾರೆ. ಆದರೆ, ಅವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳಲು ನಾವು ಬಿಡುವುದಿಲ್ಲ. ಒಂದು ವೇಳೆ ಅವರು ಮರಳಲು ಪ್ರಯತ್ನಿಸಿದರೆ, ಅವರು ಬಿಜೆಪಿ ತೊರೆಯುವಾಗ ನಮ್ಮ ನಾಯಕರ ವಿರುದ್ಧ ಮಾಡಿದ ಭಾಷಣಗಳನ್ನು ಅಥಣಿಯಾದ್ಯಂತ ಎಲ್‌ಇಡಿ ಪರದೆಗಳ ಮೂಲಕ ಜನರಿಗೆ ತೋರಿಸುತ್ತೇವೆ,” ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಲಕ್ಷ್ಮಣ ಸವದಿ ಅವರ ಮರುಪ್ರವೇಶವನ್ನು ತಾವು ಬಲವಾಗಿ ವಿರೋಧಿಸುವುದಾಗಿ ಸ್ಪಷ್ಟಪಡಿಸಿದ ಜಾರಕಿಹೊಳಿ, ಬೆಳಗಾವಿ ರಾಜಕಾರಣದಲ್ಲಿ ಸವದಿ ಮತ್ತು ತಮ್ಮ ನಡುವಿನ ಸಮರ ಮುಂದುವರಿಯುವ ಸುಳಿವು ನೀಡಿದ್ದಾರೆ. ಯತ್ನಾಳ್ ಅವರ ಉಚ್ಚಾಟನೆಯ ನಂತರವೂ ಅವರು ಪಕ್ಷದ ಪರ ನಿಂತಿರುವುದು ಹೈಕಮಾಂಡ್ ಗಮನ ಸೆಳೆದಿದ್ದು, ಅವರ ಮರುಪ್ರವೇಶದ ಪ್ರಕ್ರಿಯೆ ಚುರುಕುಗೊಂಡಿದೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು