ಬೊಗಸೆಗೆ ದಕ್ಕಿದ್ದು-77 : ಚುನಾವಣಾ ಬಾಂಡ್ ಎಂಬ ಬಿಜೆಪಿಯ ಲಂಚ ಯೋಜನೆ!

“..ಚುನಾವಣಾ ಬಾಂಡ್ ಯೋಜನೆಯು ಸಾಂಸ್ಥಿಕ ಭ್ರಷ್ಟಾಚಾರದಲ್ಲಿ ಒಂದು ಅಗಾಧವಾದ ಸರಕಾರಿ ಪ್ರಾಯೋಜಿತ ವಂಚನೆ. ಅದು ಭೂಗತ ಗುಪ್ತ ದೇಣಿಗೆಗಳನ್ನು ಪಡೆದುಕೊಂಡು ಲಂಚಕ್ಕೆ ಕಾನೂನಿನ ರಕ್ಷಣೆ ನೀಡಲು ಪ್ರಯತ್ನಿಸಿತು..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿಯೇ, 2017ರ ವರ್ಷದಲ್ಲಿ ಒಂದು ಸಾಮೂಹಿಕ ವಂಚನೆ ಮತ್ತು ಭ್ರಷ್ಟಾಚಾರದ ಸಾಂಸ್ಥೀಕರಣದ ಕಳ್ಳ ಹೆಜ್ಜೆಯನ್ನು ಚೌಕೀದಾರರ ನೇತೃತ್ವದಲ್ಲಿ ಇರಿಸಿತು. ರಾಜಕೀಯ ಪಕ್ಷಗಳು ದೇಣಿಗೆಯನ್ನು ಅಥವಾ ಸಂಪತ್ತನ್ನು ಸಂಗ್ರಹಿಸುವ ವಿಧಾನದಲ್ಲಿಯೇ ಒಂದು “ಕ್ರಾಂತಿಕಾರಿ”, ಅದಕ್ಕಿಂತ ಹೆಚ್ಚಾಗಿ, ಒಂದು ಕಣ್ಕಟ್ಟಿನ ಹಗಲುದರೋಡೆ ಯೋಜನೆಯನ್ನು ರೂಪಿಸಲಾಯಿತು. ಚುನಾವಣಾ ಬಾಂಡ್ ಎಂಬ ವಂಚನಾ ಸ್ಕೀಮ್ ಪರಿಚಯಿಸುವುದರೊಂದಿಗೆ, ಸರಕಾರವು “ಬ್ರೀಫ್‌ಕೇಸ್ ಅಥವಾ ಹುಂಡಿ ರಾಜಕೀಯ”ದಿಂದ ಡಿಜಿಟಲ್, ಬ್ಯಾಂಕಿಂಗ್ ನೇತೃತ್ವದ “ಪಾರದರ್ಶಕತೆ”ಯತ್ತ ಬದಲಾವಣೆ ತರುವ ಭರವಸೆ ನೀಡಿತು. ಹೀಗಿದ್ದರೂ, ಕಪಿಲ್ ಸಿಬಲ್‌ರಂತಹ ಕಾನೂನು ದಿಗ್ಗಜರು ಸಂವಿಧಾನ ಪೀಠದ ಮುಂದೆ ವಾದಿಸಿದಂತೆ, ಈ ಯೋಜನೆಯು ನೂರಕ್ಕೆ ನೂರು ವಿರುದ್ಧವಾದದ್ದನ್ನೇ ಸಾಧಿಸಿ ಬಿಜೆಪಿಗೆ, ಮತ್ತದರ ಹಿಂದೂ ವೇಷದ ಸರ್ವಾಧಿಕಾರಿ ಮಹತ್ವಾಕಾಂಕ್ಷೆಗೆ ಭಾರಿ ಲಾಟರಿ ಟಿಕೆಟ್ ಹೊಡೆಸಿತು: ಇದು ಕಾರ್ಪೊರೇಟ್ ಗಣ್ಯರು ಮತ್ತು ಆಡಳಿತ ವರ್ಗದ ನಡುವಿನ “ಕೊಡುಕೊಳ್ಳುವ ವ್ಯವಹಾರ” ಅಥವಾ ಸಾರಾಸಗಟು ಲಂಚವನ್ನು- ರಾಜಾರೋಷವಾಗಿ ಕಾನೂನುಬದ್ಧಗೊಳಿಸಿತು; ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅತ್ಯಂತ ದೊಡ್ಡ ದೊಡ್ಡ ಹಣಕಾಸು ವಹಿವಾಟುಗಳನ್ನು ಸಾರ್ವಜನಿಕ ಪರಿಶೀಲನೆಯಿಂದ ಹೊರಗಿರಿಸಿತು. ಅಂದರೆ, ಲಂಚವನ್ನು ಕಾನೂನುಬದ್ಧಗೊಳಿಸಿತು.

ಕಾನೂನು ಮುಖವಾಡ
​ಚುನಾವಣಾ ಬಾಂಡ್‌ಗಳ ಕುರಿತ ಸರಕಾರದ ಪ್ರಾಥಮಿಕ ಸಮರ್ಥನೆಯು ಮೂಲತ: “ಬ್ಯಾಂಕಿಂಗ್ ದಾರಿಗಳು” ಎಂಬ ಕಲ್ಪನೆಯಲ್ಲಿ ಬೇರೂರಿದೆ. ದೇಣಿಗೆಗಳನ್ನು ನಗದು ಹಣದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮೂಲಕ ಖರೀದಿಸಿದ ಬಡ್ಡಿರಹಿತ ಬೇರರ್ ಬಾಂಡ್‌ಗಳಿಗೆ ವರ್ಗಾಯಿಸುವ ಮೂಲಕ, ಪ್ರಭುತ್ವವು ಕಪ್ಪು ಹಣವನ್ನು ನಿವಾರಿಸುತ್ತಿದೆ ಎಂದು ಮೋದಿ ಸರಕಾರವು ವಾದಿಸಿತು. ಯಾಕೆಂದರೆ, ತಾರ್ಕಿಕವಾಗಿ ಬ್ಯಾಂಕ್ ವ್ಯವಹಾರವನ್ನು ಟ್ರ್ಯಾಕ್ ಮಾಡಿ ಕಂಡುಹಿಡಿಯಲು ಸಾಧ್ಯ.

ಹಾಗಿದ್ದರೂ, ವಾಸ್ತವದಲ್ಲಿ ಈ “ಪಾರದರ್ಶಕತೆ”ಯನ್ನು ಉದ್ದೇಶಪೂರ್ವಕವಾಗಿಯೇ ಆಳುವ ಪಕ್ಷದ ಪರವಾದ ಏಕಪಕ್ಷೀಯ ಗುರಿಯೊಂದಿಗೆ ಮಾಡಲಾಗಿತ್ತು. ಯಾಕೆಂದರೆ, ದಾನಿಗಳ ಗುರುತನ್ನು ಸಾರ್ವಜನಿಕರಿಂದ, ಮಾಧ್ಯಮದಿಂದ ಮತ್ತು ವಿರೋಧ ಪಕ್ಷಗಳಿಂದ ಮರೆಮಾಡಲಾಗಿದ್ದರೂ, ಅದನ್ನು ಸರಕಾರದಿಂದ ಮರೆಮಾಡಲಾಗಿಲ್ಲ.  ಎಸ್‌ಬಿಐ ಸರಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವುದರಿಂದ, ಅದರ ಆಡಳಿತದ ಕಾರ್ಯನಿರ್ವಾಹಕ ಅಧಿಕಾರಿಗೆ ಯಾರು ಯಾರಿಗೆ ಹಣಕಾಸು ಒದಗಿಸುತ್ತಿದ್ದಾರೆಂದು ಗುರುತಿಸಲು ಸಾಧ್ಯವಿದೆ. ಸರಕಾರ ಈ ಮಾಹಿತಿ ಪಡೆಯಬಹುದು. ಹಾಗಾಗಿ ಇದು ದೇಣಿಗೆದಾರರಲ್ಲಿ ಭಯವನ್ನು ಉಂಟುಮಾಡಿ, ಒಂದು ಬಲವಂತದ ಪರಿಸ್ಥಿತಿಯನ್ನು ಉಂಟುಮಾಡಿತು. ಯಾವ ಸಂಸ್ಥೆಗಳು ಬಿಜೆಪಿಗೆ ಎಷ್ಟು ಹಣ ಕೊಟ್ಟಿವೆ, ವಿರೋಧ ಪಕ್ಷಗಳಿಗೆ ಎಷ್ಟು ಹಣ ಕೊಟ್ಟಿವೆ ಎಂದು ಸರಕಾರಕ್ಕೆ ಗೊತ್ತಿರುವುದರಿಂದ, ಇದು ಸಿಬಿಐ, ಅನುಷ್ಟಾನ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆ (ಐಟಿ) ಇಲಾಖೆಯ ದಾಳಿಯ ಬೆದರಿಕೆ ಒಡ್ಡಿ ವಸೂಲಿ ಮಾಡಲು ಅವಕಾಶ ಮಾಡಿಕೊಡುತ್ತದೆ. ಇದು “ನಮಗೆ ಇಷ್ಟು ಕೊಡಿ, ಅವರಿಗೆ ಹೆಚ್ಚು ಕೊಡಬೇಡಿ;  ಇಲ್ಲವಾದರೆ, ದಾಳಿಗೆ ಸಿದ್ಧರಾಗಿ!” ಎಂಬ ಪರೋಕ್ಷ ಬೆದರಿಕೆಯನ್ನು ದೇಣಿಗೆದಾರರಿಗೆ ಒಡ್ಡುತ್ತದೆ. ಪ್ರತಿಪಕ್ಷಗಳ ಬೆಂಬಲಿಗರನ್ನೇ ಗುರಿಯಾಗಿಸಿ ಈ ಏಜೆನ್ಸಿಗಳು ಸರಕಾರದ ಸಾಕುನಾಯಿಗಳಂತೆ ದಾಳಿ ನಡೆಸಿರುವುದು ವ್ಯಾಪಕವಾಗಿ ವರದಿಯಾಗಿದೆ. ಈ ಏಜೆನ್ಸಿಗಳು ನ್ಯಾಯಾಲಯಗಳ ಟೀಕೆಗಳಿಗೂ ಗುರಿಯಾಗಿವೆ. ಆದರೆ, ಸಾರ್ವಜನಿಕರು ಮಾತ್ರ ಬಿಜೆಪಿಗೆ ಯಾರು ಹಣಕಾಸು ಒದಗಿಸುತ್ತಿದ್ದಾರೆ ಎಂಬುದರ ವಿವರ ತಿಳಿಯಲು ಸಾಧ್ಯವಿಲ್ಲ!

ಕಪಿಲ್ ಸಿಬಲ್ ವಾದಗಳು
“ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ” ಪ್ರಕರಣದಲ್ಲಿ ನಡೆದ ಮೈಲಿಗಲ್ಲು ವಿಚಾರಣೆಯ ಸಮಯದಲ್ಲಿ, ಪ್ರಸಿದ್ಧ ನ್ಯಾಯವಾದಿ ಕಪಿಲ್ ಸಿಬಲ್ ಅವರು ಈ ಯೋಜನೆಯ ವಿನಾಶಕಾರಿ ಸ್ವರೂಪವನ್ನು ಎಳೆಎಳೆಯಾಗಿ ಬಯಲಿಗೆಳೆದರು. ಅವರ ವಾದಗಳು ಮೂರು ಪ್ರಮುಖ ಆಧಾರಗಳ ಮೇಲೆ ನಿಂತಿದ್ದವು.

ತಿಳಿಯುವ ಹಕ್ಕು: ಸಂವಿಧಾನದ ವಿಧಿ 19(1)(ಎ) ಅಡಿಯಲ್ಲಿ, ಪಕ್ಷಕ್ಕೆ ಹಣಕಾಸು ಒದಗಿಸುವ ಮೂಲವನ್ನು ತಿಳಿದುಕೊಳ್ಳುವ ಮೂಲಭೂತ ಹಕ್ಕು ಮತದಾರರಿಗಿದೆ ಎಂದು ಸಿಬಲ್ ವಾದಿಸಿದರು. ಒಬ್ಬ ಅಭ್ಯರ್ಥಿಗೆ ಯಾರು ಹಣಕಾಸು ಒದಗಿಸುತ್ತಿದ್ದಾರೆಂದು ಮತದಾರರಿಗೆ ತಿಳಿದಿಲ್ಲದಿದ್ದರೆ, ಅವರು ಚುನಾವಣೆಯಲ್ಲಿ ತಿಳುವಳಿಕೆಯುಳ್ಳ ಆಯ್ಕೆ ಮಾಡಲು ಸಾಧ್ಯವಿಲ್ಲ. “ಅನಾಮಧೇಯತೆಯು ಪ್ರಜಾಪ್ರಭುತ್ವದ ಶತ್ರು” ಎಂಬ ಅವರ ವಾದ ಈಗ ಪ್ರಸಿದ್ಧವಾಗಿದೆ.

ಅನಿಯಂತ್ರಿತ ದೇಣಿಗೆ: ಈ ಯೋಜನೆಯು ಕಾರ್ಪೊರೇಟ್ ದೇಣಿಗೆಗಳ ಮೇಲಿನ ಮಿತಿಯನ್ನು ತೆಗೆದುಹಾಕಿದೆ ಎಂದು ಸಿಬಲ್ ಎತ್ತಿತೋರಿಸಿದರು. ಹಿಂದೆ, ಒಂದು ಕಂಪನಿಯು ತನ್ನ ಹಿಂದಿನ ಮೂರು ವರ್ಷಗಳ ಸರಾಸರಿ ನಿವ್ವಳ ಲಾಭದ 7.5 ಶೇಕಡಾದಷ್ಟನ್ನು ಮಾತ್ರವೇ ದಾನ ರೂಪದಲ್ಲಿ ಕೊಡಬಹುದಾಗಿತ್ತು. ಆದರೆ, ಇಲೆಕ್ಟೋರಲ್ ಬಾಂಡ್ ಯೋಜನೆಯು ಈ ಮಿತಿಯನ್ನು ರದ್ದುಗೊಳಿಸಿತು. ಕಂಪನಿಗಳು ತಮ್ಮ ಲಾಭದ 100 ಶೇಕಡಾ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ದಾನ ಮಾಡಲು ಅದು ಅವಕಾಶ ಮಾಡಿಕೊಟ್ಟಿತು.

ಕೊಡುಕೊಳ್ಳುವ ವ್ಯವಹಾರ: ಸಿಬಲ್ ಅವರು ಈ ಯೋಜನೆಯು ಲಂಚಕ್ಕೆ ಪರದೆಯಾಗಿದೆ ಎಂದು ವಾದಿಸಿದರು. ದಾನಿಗಳ ಅನಾಮಧೇಯತೆಯನ್ನು ಖಾತರಿಗೊಳಿಸುವ ಮೂಲಕ, ಸರಕಾರವು ಒಂದು ದುಷ್ಟ ವ್ಯವಸ್ಥೆಯನ್ನು ಸೃಷ್ಟಿಸಿತು. ಅದುವೇ ಲಂಚಕ್ಕೆ ಮುಕ್ತ ಅವಕಾಶ! ಅಂದರೆ, ಒಂದು ಕಂಪೆನಿಯು ಸೋಮವಾರ 100 ಕೋಟಿಗಳ ಬಾಂಡ್ ಖರೀದಿಸಿ ಬಿಜೆಪಿಗೆ ನೀಡಬಹುದು ಮತ್ತು ಮಂಗಳವಾರ ಹಲವಾರು ಸಾವಿರ ಕೋಟಿಗಳ ರೂಪಾಯಿಗಳ ಮೂಲಸೌಕರ್ಯ ಗುತ್ತಿಗೆಯನ್ನು ಪಡೆಯಬಹುದು. ಯಾರು ಹೀಗೆ ಆಳುವ ಪಕ್ಷಕ್ಕೆ ಹಣ ನೀಡಿ ಗುತ್ತಿಗೆ ಪಡೆದಿದ್ದಾರೆ ಎಂದು ಸಾರ್ವಜನಿಕರಿಗೆ ತಿಳಿಯಲು ಸಾಧ್ಯವಿಲ್ಲ. ದೇಣಿಗೆ ಹಣಕ್ಕೂ, ಗುತ್ತಿಗೆ ನೀಡಿಕೆಗೂ ಸಂಬಂಧ ಹುಡುಕಲು ಯಾವ ಕಾನೂನು ಮಾರ್ಗಗಳೂ ಇಲ್ಲ! ಇದು ಲಂಚದ ಸರಳೀಕರಣ ಮತ್ತು ಸಾಂಸ್ಥೀಕರಣವಲ್ಲದಿದ್ದರೆ ಮತ್ತಿನ್ನೇನು!?

ಶೆಲ್ ಕಂಪನಿಗಳ ಅಪಾಯ
​ಚುನಾವಣಾ ಬಾಂಡ್ ಯೋಜನೆಯ ಅತ್ಯಂತ ಹಾನಿಕಾರಕ ಅಂಶವೆಂದರೆ ಕಂಪನಿಗಳ ಕಾಯ್ದೆ, 2013ರ ತಿದ್ದುಪಡಿ. ರಾಜಕೀಯ ಕೊಡುಗೆಗಳನ್ನು ನೀಡಲು ಕಂಪನಿಯು ಕನಿಷ್ಟ ಮೂರು ವರ್ಷಗಳ ಕಾಲ ಅಸ್ತಿತ್ವದಲ್ಲಿರಬೇಕು ಎಂಬ ಅವಶ್ಯಕತೆಯನ್ನು ತೆಗೆದುಹಾಕುವ ಮೂಲಕ, ಸರಕಾರವು ಶೆಲ್ ಕಂಪನಿಗಳಿಗೆ ಬಾಗಿಲು ತೆರೆದಿದೆ. ಶೆಲ್ ಕಂಪೆನಿಗಳು ಎಂದರೆ, ಹೆಸರಿಗೆ ಮಾತ್ರ ಅಸ್ತಿತ್ವದಲ್ಲಿರುವ ಬೋಗಸ್ ಕಂಪೆನಿಗಳು. ಪ್ರತಿಯೊಂದು ದೊಡ್ಡ ದೊಡ್ಡ ಉದ್ಯಮ ಗುಂಪುಗಳು ತೆರಿಗೆ ತಪ್ಪಿಸಲು ಇಂತಾ ನೂರಾರು ಒಳವ್ಯವಹಾರಗಳ ಶೆಲ್ ಕಂಪೆನಿಗಳ ಚಕ್ರವ್ಯೂಹವನ್ನೇ ದೇಶ ವಿದೇಶಗಳಲ್ಲಿ ಹೊಂದಿವೆ. ಈ ​ಶೆಲ್ ಕಂಪನಿಗಳು ಸಕ್ರಿಯ ವ್ಯಾಪಾರ ಕಾರ್ಯಾಚರಣೆಗಳು ಅಥವಾ ಗಮನಾರ್ಹ ಸ್ವತ್ತುಗಳಿಲ್ಲದ ಕಾರ್ಪೊರೇಟ್ ಘಟಕಗಳಾಗಿವೆ. ಚುನಾವಣಾ ಬಾಂಡ್ ಯೋಜನೆಯ ಅಡಿಯಲ್ಲಿ, ಈ ಸಂಸ್ಥೆಗಳು ರಾಜಕೀಯ ನಿಧಿಗಾಗಿ ಕಪ್ಪು ಹಣ ಬಿಳಿ ಮಾಡುವ ವಾಷಿಂಗ್ ಮೆಷಿನ್‌ಗಳಾದವು.

​ಕಾರ್ಯವಿಧಾನ: ಲೆಕ್ಕವಿಲ್ಲದ ಸಂಪತ್ತನ್ನು ಹೊಂದಿರುವ ವ್ಯಕ್ತಿಯು ಒಂದು ಡಜನ್ ಕಾಗದದ ಮೇಲೆ ಮಾತ್ರವೇ ಅಸ್ತಿತ್ವದಲ್ಲಿರುವ ಕಂಪನಿಗಳನ್ನು ಸ್ಥಾಪಿಸಬಹುದು, ಕಪ್ಪು ಹಣವನ್ನು ಅವುಗಳಿಗೆ “ಬಂಡವಾಳ”ವಾಗಿ ತುಂಬಿಸಬಹುದು ಮತ್ತು ನಂತರ ಆ ಕಂಪನಿಗಳನ್ನು ಚುನಾವಣಾ ಬಾಂಡ್‌ಗಳನ್ನು ಖರೀದಿಸಲು ಬಳಸಬಹುದು.

ಪರಿಣಾಮ: ಇದು ಎಲ್ಲಾ ಹಣ ವರ್ಗಾವಣೆ ವಿರೋಧಿ ಅಡೆತಡೆಗಳನ್ನು, ನಿಯಂತ್ರಣಗಳನ್ನು, ಪರಿಶೀಲನೆಗಳನ್ನು ಇಲ್ಲದಂತೆ ಮಾಡಿತು. ಇದು ಹಿಂದೆ ಭಾರತೀಯ ಚುನಾವಣೆಗಳಿಂದ ನಿಷೇಧಿಸಲಾಗಿದ್ದ ವಿದೇಶಿ ಸಂಸ್ಥೆಗಳಿಗೆ – ಸ್ಥಳೀಯವಾಗಿ ಶೆಲ್ ಕಂಪೆನಿಗಳನ್ನು ಸ್ಥಾಪಿಸುವ ಮೂಲಕ ಭಾರತೀಯ ನೀತಿಗಳ, ಧೋರಣೆಗಳ ಮೇಲೆ ಪ್ರಭಾವ ಬೀರಲು ಅವಕಾಶ ಮಾಡಿಕೊಟ್ಟಿತು. ಇದು ಭಾರತೀಯ ಚುನಾವಣಾ ಪ್ರಕ್ರಿಯೆಯನ್ನು “ಮುಂಗಡ-ಪಾವತಿಯ ಹರಾಜು” ಆಗಿ ಪರಿವರ್ತಿಸಿತು ಎಂದು ಸಿಬಲ್ ವಾದಿಸಿದರು. ಅಂದರೆ, ಕಾರ್ಪೊರೇಟ್ ಮುಸುಕಿನ ಹಿಂದೆ ಅಡಗಿರುವ ಶ್ರೀಮಂತ “ಆನಿ”ಗಳು ಆಳುವ ಪಕ್ಷಕ್ಕೆ ಭಾರೀ ದೇಣಿಗೆ ನೀಡಿ ತಮಗೆ ಬೇಕಾದಂತೆ ಸರಕಾರದ ನೀತಿಗಳನ್ನು ನಿರ್ದೇಶಿಸಬಹುದು.

2024ರ ಸುಪ್ರೀಂ ಕೋರ್ಟ್ ತೀರ್ಪು
ಫೆಬ್ರವರಿ 2024ರಲ್ಲಿ, ಆಗಿನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಈ ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿತು. ನ್ಯಾಯಾಲಯದ ತೀರ್ಪು ಸಿಬಲ್ ಮತ್ತು ಅರ್ಜಿದಾರರು ಎತ್ತಿದ ಹಲವು ಕಳವಳಗಳನ್ನು ಪ್ರತಿಧ್ವನಿಸಿತು. ಅವುಗಳೆಂದರೆ,
ಮಾಹಿತಿ ಹಕ್ಕುಗಳ ಉಲ್ಲಂಘನೆ: ಹಣವು ಸರಕಾರದ ನೀತಿಗಳ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರುವುದರಿಂದ ಜನತೆಯ “ತಿಳಿದುಕೊಳ್ಳುವ ಹಕ್ಕು” ರಾಜಕೀಯ ನಿಧಿಗೂ ವಿಸ್ತರಿಸುತ್ತದೆ ಎಂದು ನ್ಯಾಯಾಲಯ ತೀರ್ಪು ನೀಡಿತು.

ಕಾರ್ಪೊರೇಟ್ ಪ್ರಭಾವ vs. ವೈಯಕ್ತಿಕ ಧ್ವನಿ: ಇಲ್ಲಿ ನ್ಯಾಯಾಲಯವು ಒಂದು ಪ್ರಮುಖ ವ್ಯತ್ಯಾಸವನ್ನು ಗುರುತಿಸಿತು: ಕಾರ್ಪೊರೇಟ್ ದೇಣಿಗೆಗಳು ಒಬ್ಬ ವ್ಯಕ್ತಿಯ ಮತದಂತೆ “ಬೆಂಬಲದ ಅಭಿವ್ಯಕ್ತಿಗಳು” ಅಲ್ಲ; ಅವು ಅನುಕೂಲಗಳನ್ನು ಪಡೆಯುವ ಗುರಿಯನ್ನು ಹೊಂದಿರುವ ವ್ಯಾಪಾರ ವಹಿವಾಟುಗಳಾಗಿವೆ. ಅನಿಯಂತ್ರಿತ ಕಾರ್ಪೊರೇಟ್ ದೇಣಿಗೆಗಳಿಗೆ ಅವಕಾಶ ನೀಡುವುದು- ಸಾಮಾನ್ಯ ನಾಗರಿಕರ ಧ್ವನಿಗಳನ್ನು ಅಡಗಿಸುತ್ತದೆ. ನೀವೇ ಯೋಚಿಸಿ: ಒಂದು ಕಂಪೆನಿಯು ನೂರಾರು ಕೋಟಿ ರೂ.ಗಳನ್ನು ಒಂದು ಪಕ್ಷಕ್ಕೆ ಭಾರೀ ಲಾಭ ಅಥವಾ ಉಪಕಾರದ ನಿರೀಕ್ಷೆ ಇಲ್ಲದೇ ನೀಡಲು ಸಾಧ್ಯವೇ?
“ಕಪ್ಪು ಹಣ” ವಾದದ ವೈಫಲ್ಯ: ಕಪ್ಪು ಹಣವನ್ನು ನಿಗ್ರಹಿಸುವುದು ಈ ಯೋಜನೆಯ ಉದ್ದೇಶವೆಂದು ಹೇಳಲಾಗಿದ್ದರೂ, ಅದನ್ನು  ಮಾಡುವ ಸಲುವಾಗಿ ಚುನಾವಣೆಗಳ ಪಾರದರ್ಶಕತೆಯನ್ನು ನಾಶಪಡಿಸುವುದಕ್ಕಿಂತ ಬೇರೆ ನ್ಯಾಯಬದ್ಧ ಮಾರ್ಗಗಳಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು..

ಲಂಚದಿಂದ ಕೊಬ್ಬಿದ ಬಿಜೆಪಿ
ಸುಪ್ರೀಂ ಕೋರ್ಟ್ ಎಸ್‌ಬಿಐಗೆ ಚುನಾವಣಾ ಬಾಂಡ್‌ಗಳ ದತ್ತಾಂಶವನ್ನು ಬಿಡುಗಡೆ ಮಾಡಲು ಆದೇಶಿಸಿದಾಗ, ನಿಧಿಯ “ಮಾಫಿಯಾ ವ್ಯವಸ್ಥೆ” ಬಯಲಾಯಿತು. ಬೇರೆಬೇರೆ ಕಂಪೆನಿಗಳ ಮೇಲಿನ ಇಡಿ/ಸಿಬಿಐ ದಾಳಿಗಳು ಮತ್ತು ಅದೇ ಕಂಪನಿಗಳ ಚುನಾವಣಾ ಬಾಂಡ್‌ಗಳ ಖರೀದಿ ಮತ್ತು ದೇಣಿಗೆಗಳಿಗೆ ಸಂಬಂಧವಿರುವುದನ್ನು ದತ್ತಾಂಶವು ಬಹಿರಂಗಪಡಿಸಿತು. ಇದು ಸರಕಾರವು ಬಿಜೆಪಿಗಾಗಿ ಭೂಗತ ದೊರೆಗಳಂತೆ “ರಕ್ಷಣೆ”ಗಾಗಿ “ಹಫ್ತಾ” ವಸೂಲಿ ಮಾಡುತ್ತಿದೆ ಎಂಬ ಸಿದ್ಧಾಂತವನ್ನು ದೃಢಪಡಿಸಿತು. ಕಂಪೆನಿಗಳು ಸೈದ್ಧಾಂತಿಕ ಒಲವಿನಿಂದ ದೇಣಿಗೆ ನೀಡುತ್ತಿರಲಿಲ್ಲ. ಬದಲಾಗಿ ಸರಕಾರಿ ಸಂಸ್ಥೆಗಳಿಂದ ಕಿರುಕುಳವನ್ನು ತಪ್ಪಿಸಲು “ಕಪ್ಪ”ವಾಗಿ ಅಥವಾ ಗಣಿಗಾರಿಕೆ, ದೂರಸಂಪರ್ಕ ಮತ್ತು ಮೂಲಸೌಕರ್ಯದಂತಹ ವಲಯಗಳಲ್ಲಿ ಲಾಭದಾಯಕ ಗುತ್ತಿಗೆಗಳನ್ನು ಪಡೆಯಲು “ಕಾನೂನುಬದ್ಧ” ಲಂಚವಾಗಿ ನೀಡುತ್ತಿದ್ದವು.

ಪಾರದರ್ಶಕ ಭವಿಷ್ಯಕ್ಕಾಗಿ ಹೋರಾಟ
​ಚುನಾವಣಾ ಬಾಂಡ್ ಯೋಜನೆಯು ಸಾಂಸ್ಥಿಕ ಭ್ರಷ್ಟಾಚಾರದಲ್ಲಿ ಒಂದು ಅಗಾಧವಾದ ಸರಕಾರಿ ಪ್ರಾಯೋಜಿತ ವಂಚನೆ. ಅದು ಭೂಗತ ಗುಪ್ತ ದೇಣಿಗೆಗಳನ್ನು ಪಡೆದುಕೊಂಡು ಲಂಚಕ್ಕೆ ಕಾನೂನಿನ ರಕ್ಷಣೆ ನೀಡಲು ಪ್ರಯತ್ನಿಸಿತು. ಸುಪ್ರೀಂ ಕೋರ್ಟ್ ಈ ರಚನೆಯನ್ನು ಕೆಡವಿದ್ದರೂ, ಅಪಾರದರ್ಶಕವಾದ ರಾಜಕೀಯ ನಿಧಿಯ ಲಾಭವನ್ನು ರಾಜಕೀಯ ಪಕ್ಷಗಳಿಗೆ, ಸಾಟಿಯೇ ಇಲ್ಲದಷ್ಟು ಭಾರೀ ಪ್ರಮಾಣದಲ್ಲಿ ಬಿಜೆಪಿಗೆ ದೊರಕಿಸಿಕೊಡುತ್ತಲೇ ಇದೆ. ಇದರ ವಿವರಗಳನ್ನು ಮುಂದೆ ನೋಡೋಣ.

Related Articles

ಇತ್ತೀಚಿನ ಸುದ್ದಿಗಳು