ಟಿಸಿಎಸ್ ನಾಸಿಕ್ ಪ್ರಕರಣ: ಮತ್ತಿಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

ನಾಸಿಕ್, ಮಹಾರಾಷ್ಟ್ರ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನಾಸಿಕ್ ಘಟಕದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಮತ್ತು ಬಲವಂತದ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಥಳೀಯ ನ್ಯಾಯಾಲಯವು ಗುರುವಾರ ಇಬ್ಬರು ಆರೋಪಿಗಳನ್ನು ಏಪ್ರಿಲ್ 18 ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ.

ರಜಾ ರಫೀಕ್ ಮೆಮನ್ (35) ಮತ್ತು ಶಫಿ ಬಿಖಾನ್ ಶೇಖ್ (36) ಎನ್ನುವ ಇಬ್ಬರು ಆರೋಪಿಗಳನ್ನು ಬುಧವಾರ ಹೊಸದಾಗಿ ಬಂಧಿಸಲಾಗಿದ್ದು, ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಇಬ್ಬರನ್ನೂ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ಇವರ ಮೇಲೆ ಭಾರತೀಯ ನ್ಯಾಯ ಸಂಹಿತೆಯ ಮಹಿಳೆಯರ ಮರ್ಯಾದೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳದ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ.

ಈವರೆಗೆ ದಾಖಲಾಗಿರುವ ಒಟ್ಟು ಒಂಬತ್ತು ಪ್ರಕರಣಗಳಲ್ಲಿ ಆರು ಪುರುಷ ಉದ್ಯೋಗಿಗಳು ಮತ್ತು ಒಬ್ಬ ಮಹಿಳಾ ಎಚ್‌ಆರ್ ಮ್ಯಾನೇಜರ್ ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದೆ. ಹಿರಿಯ ಸಹೋದ್ಯೋಗಿಗಳು ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಹಾಗೂ ಎಚ್‌ಆರ್ ಇಲಾಖೆಯು ಈ ದೂರುಗಳನ್ನು ನಿರ್ಲಕ್ಷಿಸಿದೆ ಎಂಬ ಎಂಟು ಮಹಿಳಾ ಉದ್ಯೋಗಿಗಳ ದೂರಿನ ತನಿಖೆಗಾಗಿ ಪೊಲೀಸರು ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದಾರೆ.

ಕೆಲವು ದೂರುದಾರರು ಆರೋಪಿಗಳು ತಮ್ಮನ್ನು ಬಲವಂತವಾಗಿ ಮತಾಂತರ ಮಾಡಲು ಪ್ರಯತ್ನಿಸಿದ್ದಾರೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ನಡುವೆ, ಮಹಿಳಾ ಎಚ್‌ಆರ್ ಮ್ಯಾನೇಜರ್ ಅವರ ಪೊಲೀಸ್ ಕಸ್ಟಡಿಯನ್ನು ಏಪ್ರಿಲ್ 15 ರವರೆಗೆ ವಿಸ್ತರಿಸಲಾಗಿತ್ತು.

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್, ನಾಸಿಕ್ ಕಚೇರಿಯಿಂದ ಬರುತ್ತಿರುವ ಆರೋಪಗಳು “ಅತ್ಯಂತ ಕಳವಳಕಾರಿ ಮತ್ತು ಆಘಾತಕಾರಿ” ಎಂದು ಹೇಳಿದ್ದಾರೆ. ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಸುಬ್ರಮಣಿಯನ್ ಅವರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಯುತ್ತಿದ್ದು, ಕಿರುಕುಳದ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯಡಿ ಆರೋಪಿಗಳನ್ನು ಅಮಾನತುಗೊಳಿಸಲಾಗಿದೆ.

ರಾಷ್ಟ್ರೀಯ ಮಹಿಳಾ ಆಯೋಗವು ಕೂಡ ಈ ಆರೋಪಗಳ ತನಿಖೆಗಾಗಿ ಸತ್ಯಶೋಧನಾ ಸಮಿತಿಯನ್ನು ರಚಿಸಿದೆ. ಇದೆ ವೇಳೆ, ಕೆಲವು ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಂತ್ರಸ್ತ ಮಹಿಳೆಯರ ಗುರುತು ಬಹಿರಂಗಪಡಿಸುವ ವಿಡಿಯೋಗಳನ್ನು ಪ್ರಸಾರ ಮಾಡುತ್ತಿರುವುದಕ್ಕೆ ನಗರ ಪೊಲೀಸರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಂತ್ರಸ್ತೆಯರ ಗುರುತನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬಹಿರಂಗಪಡಿಸುವುದು ಕಾನೂನುಬಾಹಿರ ಅಪರಾಧವಾಗಿದೆ. ಇದು ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಅಪಾರ ನೋವುಂಟು ಮಾಡುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು