ಮಂತ್ರಾಲಯ ಸಮೀಪ ರಸ್ತೆ ಅಪಘಾತ: ಎಂಟು ಭಕ್ತರ ದುರ್ಮರಣ, ಹಲವರಿಗೆ ಗಂಭೀರ ಗಾಯ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ತೆರಳುತ್ತಿದ್ದ ಭಕ್ತರ ವಾಹನಕ್ಕೆ ಹಾರುಬೂದಿ ತುಂಬಿದ್ದ ಟ್ಯಾಂಕರ್ ಡಿಕ್ಕಿಯಾದ ಪರಿಣಾಮ, ಮಗು ಹಾಗೂ ಐವರು ಮಹಿಳೆಯರು ಸೇರಿದಂತೆ ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಗುರುವಾರ ಬೆಳಗಿನ ಜಾವ ಸಂಭವಿಸಿದೆ. ಮಂತ್ರಾಲಯ ಸಮೀಪದ ಚಿಲಕಣಡೋಣ ಎಂಬಲ್ಲಿ ಈ ದುರಂತ ನಡೆದಿದೆ.

ಸುಮಾರು 21 ಭಕ್ತರನ್ನು ಹೊತ್ತು ಮಂತ್ರಾಲಯದತ್ತ ಸಾಗುತ್ತಿದ್ದ ಪಿಕ್‌ಅಪ್ ವಾಹನ ಮತ್ತು ಎದುರಿನಿಂದ ಬಂದ ಹಾರುಬೂದಿ ಟ್ಯಾಂಕರ್ ನಡುವೆ ಮುಂಜಾನೆ 4 ಗಂಟೆ ಸುಮಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಪಿಕ್‌ಅಪ್ ವಾಹನ ನಜ್ಜುಗುಜ್ಜಾಗಿದ್ದು, ಐವರು ಮಹಿಳೆಯರು, ಚಾಲಕ ಸೇರಿ ಇಬ್ಬರು ಪುರುಷರು ಹಾಗೂ ಒಂದು ಮಗು ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಬೇಲೂರು ತಾಲೂಕಿನವರು ಎಂದು ಗುರುತಿಸಲಾಗಿದೆ.

ಮೃತಪಟ್ಟವರಲ್ಲಿ ಚಿಕ್ಕಮಗಳೂರು ಸಮೀಪದ ಕಣನಾಯಕನಹಳ್ಳಿಯ ಕುಮಾರ (50), ದೀಪಿಕಾ (40), ಬೆಳ್ಳಿ (5) ಹಾಗೂ ಬೇಲೂರು ತಾಲೂಕಿನ ಚಟ್ಟನಹಳ್ಳಿ ಗ್ರಾಮದ ಸುನೀಲ್ (40), ಯಶೋದಾ (60), ಲೋಲಾಕ್ಷಿ ಮತ್ತು ಉದ್ದೇವ ಗ್ರಾಮದ ಪುಟ್ಟಮ್ಮ (55), ಮೀನಾಕ್ಷಿ ಸೇರಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತದಲ್ಲಿ ಗಾಯಗೊಂಡ ಒಂಬತ್ತು ಮಂದಿಯನ್ನು ತಕ್ಷಣವೇ ಕರ್ನೂಲ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ನಾಲ್ವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಮಂತ್ರಾಲಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ರಾಯರ ದರ್ಶನಕ್ಕೆಂದು ಹೊರಟಿದ್ದ ಭಕ್ತರ ಕುಟುಂಬಗಳಲ್ಲಿ ಈ ಘಟನೆಯಿಂದಾಗಿ ಶೋಕ ಮಡುಗಟ್ಟಿದೆ.

Related Articles

ಇತ್ತೀಚಿನ ಸುದ್ದಿಗಳು