ಕನ್ನಡಿಗರ ಹೃದಯ ಸಿಂಹಾಸನದ ದೊರೆ : ಬಡವರ ರಾಜಕುಮಾರ

“..ಈ ಪುಸ್ತಕ ಬರೀ ಅಣ್ಣಾವ್ರ ಹುಟ್ಟು, ಬೆಳವಣಿಗೆ, ಬದುಕು, ಕಷ್ಟ ಸುಖಗಳ ಬಗ್ಗೆ ಮಾತ್ರವೇ ಇರಬಹುದು ಎಂದು ಭಾವಿಸಿದರೆ ತಪ್ಪು. ಅಣ್ಣಾವ್ರ ಬೆಳವಣಿಗೆಯ ಜೊತೆಗೆ ಇತಿಹಾಸವನ್ನು ನಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತದೆ..” ಪತ್ರಕರ್ತ ಮುರಳಿ ಮಾಲೂರು ಅವರ ಬರಹದಲ್ಲಿ

ತುಂಬಾ ದಿನಗಳಿಂದ ದಿನಬೆಳಗಾದರೆ ಗುಡ್‌ ಮಾರ್ನಿಂಗ್‌ ಹೇಳ್ತಿದ್ದ ಪುಸ್ತಕ ಎಂದರೆ ಅದು ಡಾ.ಮಂಜುನಾಥ ಅದ್ದೆ ಅವರ ʼಬಡವರ ರಾಜಕುಮಾರʼ. ಈ ಪುಸ್ತಕ ನನ್ನನ್ನು ಡಿಸ್ಟರ್ಬ್‌ ಮಾಡ್ತಿರಲಿ ಎಂದೇ ಅದನ್ನು ನನ್ನ ಕಣ್ಣಿಗೆ ಕಾಣುವಂತೆ ಇಟ್ಟಿದ್ದೆ.

ಆದರೆ ಅದೆಷ್ಟೇ ನನ್ನೆಡೆಗೆ ನೋಡುತ್ತಿದ್ದರೂ ಕೈಗೆತ್ತಿಕೊಳ್ಳುವ ಸಮಯ ಬಂದಿರಲೇ ಇಲ್ಲ. ಏಪ್ರಿಲ್‌ 24 ರಂದು ಅಣ್ಣಾವ್ರ ಹುಟ್ಟುಹಬ್ಬ ಇದೆ, ಅದಕ್ಕಾದರೂ ಈ ಪುಸ್ತಕವನ್ನ ಒಮ್ಮೆ ಓದೋಣ ಎಂದೆನಿಸಿ ಪುಸ್ತಕವನ್ನು ಕೈಗೆತ್ತಿಕೊಂಡೆ.

ಅಣ್ಣಾವ್ರ ಕೋಟ್ಯಾಂತರ ಅಭಿಮಾನಿ ಬಳಗದಲ್ಲಿ ನಾನೂ ಒಬ್ಬ. 9ನೇ ತರಗತಿಯಲ್ಲಿದ್ದಾಗ ಇವರ ಕಂಠಕ್ಕೆ ಸೋತ ನಾನು ಈಗಲೂ ಗಾಡಿಯಲ್ಲಿ ಕೂತು ಹೆಡ್‌ ಫೋನ್‌ ಸಿಕ್ಕಿಸಿಕೊಂಡರೆ ಮೊದಲು ಪ್ಲೇ ಮಾಡುವ ಹಾಡು ಅಣ್ಣಾವ್ರದ್ದೇ ಆಗಿರುತ್ತದೆ. ಮಲಗುವಾಗ ʼಮೇಘ ಬಂತು ಮೇಘʼ ಹಾಡು ಒಂದಷ್ಟು ಕಾಲ ನನಗೆ ಲಾಲಿ ಹಾಡಾಗಿ ನನ್ನನ್ನು ಮಲಗಿಸುತ್ತಿತ್ತು.

ಇವತ್ತಿಗೂ ಅಣ್ಣಾವ್ರ ಅಪ್ಪಟ ಅಭಿಮಾನಿಗಳು ಇವೆಲ್ಲವನ್ನು ಮಾಡುತ್ತಾ ಬಂದಿದ್ದಾರೆ.

ʼಅಣ್ಣಾವ್ರುʼ ಎಂದರೆನೇ ಹಾಗೆ. ರಾಜಕುಮಾರನ ಒಳಗಿದ್ದ ಮುತ್ತುರಾಜ ಅವರ ಕೊನೆಯ ಉಸಿರಿನ ತನಕ ಎಚ್ಚರವಾಗಿ ಇದ್ದಿದ್ದೇ ಇದಕ್ಕೆಲ್ಲ ಕಾರಣವಿರಬೇಕು.

ಬಡವರ ರಾಜಕುಮಾರ ಪುಸ್ತವನ್ನು ಓದುವುದಕ್ಕೂ ಮೊದಲು ಈ ಪುಸ್ತಕದ ಬಗ್ಗೆ ಸಣ್ಣ ವಿಮರ್ಶೆ ಬರಯೋಣ ಎಂದೆನಿಸಿತ್ತು. ಆದರೆ ಹೇಗೆ ಬರೆಯುವುದು? ಎಲ್ಲಾ ಪುಸ್ತಕಗಳಿಗೆ ಬರೆಯುವಂತೆ ಬರೆಯುವುದಾ? ಅಥವಾ ಸಿನಿಮಾ ವಿಮರ್ಶೆಯಂತೆ ಬರೆಯುವುದಾ? ಎಂಬ ಸಣ್ಣ ಗೊಂದಲವೂ ಇತ್ತು. ಆಗಿದ್ದಾಗಲಿ ಸಿನಿಮಾ ವಿರ್ಮರ್ಶೆ ಬರೆಯುವಂತೆಯೇ ಬರೆದುಬಿಡೋಣ ಎಂದೆನಿಸಿ ಪುಸ್ತಕವನ್ನು ಓದುತ್ತಾ ಓದುತ್ತಲೇ ಒಂದಷ್ಟು ಬರೆಯುತ್ತಲೂ ಹೋದೆ. ಮೊದಲು ಬರೆದದ್ದನ್ನ ಅಳಿಸಿ ಮತ್ತೊಮ್ಮೆ ಬರೆಯುವಂತಾಯ್ತು.

ಮೊದಲ ಪುಟದಿಂದ ಶುರುವಾಗಿ ಒಂದೇ ಗುಕ್ಕಿಗೆ 47ನೇ ಪುಟಕ್ಕೆ ಬಂದೆ. ನಿಜಾ ಹೇಳಬೇಕೆಂದರೆ ಒಬ್ಬ ಅಪ್ಪಟ ಅಣ್ಣಾವ್ರ ಅಭಿಮಾನಿ ಸಿನಿಮಾ ಥಿಯೇಟರಲ್ಲಿ ಕೂತು ಅಣ್ಣಾವ್ರು ಈಗ ಬರಬಹುದೇ? ಆಗ ಬರಬಹುದೇ? ಎಂದು ಕಾಯುತ್ತಾ ಕುಳಿತವನಿಗೆ 25 ನಿಮಿಷವಾದರೂ ಹೀರೋ ಬರದಿದ್ದಾಗ ಹೇಗನ್ನಿಸಬೇಡ? ಅದೇ ಫೀಲ್‌ ನನ್ನಲ್ಲಿಯೂ ಮೂಡಿತ್ತು. ಅದರಲ್ಲೂ “ಮತ್ತೆ ಇತಿಹಾಸಕ್ಕೆ ಹಿಂದಿರುಗುವುದಾದರೆ” ಎಂಬ ಸಾಲನ್ನು ಓದಿದ ಮೇಲೆ ಪುಸ್ತಕವನ್ನು ಸೈಡಿಗಿಟ್ಟು ಒಂದು ಟೀ ಕುಡಿದು ಬರೋಣ ಎಂದೆನಿಸಿಬಿಟ್ಟಿತು. ಯಾಕೆಂದರೆ 47ನೇ ಪುಟದವರೆಗೂ ನಾನು ಓದುತ್ತಾ ಬಂದಿದ್ದು ಇತಿಹಾಸವನ್ನೇ…

ಈ ಪುಸ್ತಕ ಬರೀ ಅಣ್ಣಾವ್ರ ಹುಟ್ಟು, ಬೆಳವಣಿಗೆ, ಬದುಕು, ಕಷ್ಟ ಸುಖಗಳ ಬಗ್ಗೆ ಮಾತ್ರವೇ ಇರಬಹುದು ಎಂದು ಭಾವಿಸಿದರೆ ತಪ್ಪು. ಅಣ್ಣಾವ್ರ ಬೆಳವಣಿಗೆಯ ಜೊತೆಗೆ ಇತಿಹಾಸವನ್ನು ನಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತದೆ.

ಜಿದ್ದಿಗೆ ಬಿದ್ದು ಓದಿದ ಏಕೈಕ ಪುಸ್ತಕವಿದು. ಡಾ. ಮಂಜುನಾಥ ಅದ್ದೆಯವರೇ ಹೇಳುವಂತೆ ಸುಮಾರು ಹತ್ತು ಸಾವಿರ ಪುಟಗಳನ್ನು ಮುನ್ನೂರು ಪುಟಕ್ಕೆ ಇಳಿಸಿದ್ದಾರೆ. ನನಗೋ ಹತ್ತು ಸಾವಿರ ಪುಟ ಓದುವಷ್ಟು ತಾಳ್ಳೆಯಂತೂ ಈ ಕ್ಷಣಕ್ಕೆ ಇಲ್ಲ ಹಾಗಾಗಿ ಈ ಮುನ್ನೂರು ಪುಟವನ್ನು ಓದಿ, ಹತ್ತು ಸಾವಿರ ಪುಟಗಳನ್ನು ನನ್ನ ಅಕೌಂಟಿಗೆ ಹಾಕಿಕೊಳ್ಳುವ ದುರುದ್ದೇಶದಿಂದಲೇ ಜಿದ್ದಿಗೆ ಬಿದ್ದು ಓದಿದ್ದು.

ʼಬಡವರ ರಾಜಕುಮಾರʼ ಹೆಸರಿಗೆ ತಕ್ಕಂತ ವ್ಯಕ್ತಿತ್ವ ಅಣ್ಣಾವ್ರದು. ಈ ಪುಸ್ತಕವೂ ಸಹಾ ಅಣ್ಣಾವ್ರು ಹೇಗೆ “ಬಡವರ ಮನೆಯಲ್ಲೊಬ್ಬ ಸದಸ್ಯನಾಗಿ ಬೆಳೆದು ಬಂದ” ಎಂಬುದನ್ನು ಮನಮುಟ್ಟುವಂತೆ ತಿಳಿಸುತ್ತಾ ಹೋಗುತ್ತದೆ. ಮೈಸೂರು ಸಂಸ್ಥಾನ, ಟಿಪ್ಪು ಸುಲ್ತಾನ, ಹೈದರ್‌ ಅಲಿ, ಬ್ರಿಟಿಷರ ವಿರುದ್ಧದ ಹೋರಾಟಗಳು,ವಚನಕಾರರು, ಆಧುನಿಕ ಶಿಕ್ಷಣ, ಆಗಿನ ಭೂ ಒಡೆತನ ಹೀಗೆ ಇತಿಹಾಸವನ್ನು ಕೆದಕಿ ನಿಮ್ಮ ಮುಂದೆ ಇಡುತ್ತದೆ. ಈಗಾಗಲೇ ಕೆಲವು ವಿಚಾರಗಳನ್ನು ಓದಿದವರಿಗೆ ರಿವಿಷನ್‌ ಮಾಡಿದಂತೆ ಅನ್ನಿಸಬಹುದು.

“ಕನ್ನಡದ ಕಣ್ವ”ರ ಬಗ್ಗೆ ಓದಿದಾಗ ʼಅಲೆಲೆ ಆಸಾಮಿʼ ಎನಿಸಿದ್ದುಂಟು. ಹಾಗೆಯೇ ಬರಗೂರರು ಅಣ್ಣಾವ್ರ ಬಗ್ಗೆ ಆಡುವ ಮಾತುಗಳು “ವ್ಹಾ” ಎಂದೆನಿಸುತ್ತದೆ. ನಿಮಗೆ ಅರಿವಿಲ್ಲದಂತೆ ಪುಸ್ತಕದ ಜೊತೆ ಮಾತನಾಡುತ್ತಾ ಸಾಗುತ್ತೀರಿ.

ಅಣ್ಣಾವ್ರ ಸಿನಿಮಾಗಳಿಗೆ ಹಳ್ಳಿ ಜನ ಟ್ರಾಕ್ಟರ್‌, ಲಾರಿ, ಟೆಂಫೋಗಳಲ್ಲಿ ಬಂದು ನೋಡುತ್ತಿದ್ದರು ಎಂಬುದನ್ನ ನನ್ನ ಕಣ್ಣಾರೆ ನೋಡಲಿಕ್ಕೆ ಆಗಲಿಲ್ಲ. ನನಗೆ ಈಗಲೂ ನೆನಪಿರುವಂತೆ ʼಶಬ್ಧವೇದಿʼ ಸಿನಿಮಾ ಸಂದರ್ಭದಲ್ಲಿ ನನ್ನೂರಿನ ಬಾಲಾಜಿ ಟಾಕಿಸ್‌ ತುಂಬಿದ್ದನ್ನು ಕಂಡಿದ್ದೆ. ಜನರ ಆಸ್ತಿಯಾಗಿ ಅಣ್ಣಾವ್ರು ಹೇಗೆ ಬೆಳೆದು ಬಂದರು ಎಂಬುದನ್ನು ಸಂಶೊಧನೆ ಮಾಡಿ ಬಹಳ ವಿಸ್ತಾರವಾಗಿ ಹೇಳಿದ್ದಾರೆ ಡಾ. ಮಂಜುನಾಥ ಅದ್ದೆ ಅವರು.

ಅಣ್ಣಾವ್ರ ಅಭಿಮಾನಿಯಾಗಿ ಕೆಲವು ವಿಚಾರಗಳನ್ನು ತಿಳಿದಿದ್ದೆ. ಮಂತ್ರಾಲಯ ಮಹಾತ್ಮೆ ಸಿನಿಮಾ ಮಾಡುವಾಗ ಅವರ ನಿಷ್ಠೆ, ಗೋಕಾಕ್‌ ಚಳುವಳಿಗೆ ಅಣ್ಣಾವ್ರು ದುಮುಕಿದ್ದು, ಅಭಿಮಾನಿಗಳಲ್ಲೇ ದೇವರನ್ನ ಕಂಡಿದ್ದು, ಜನರಿಗಾಗಿ ಬೀದಿಗಿಳಿದು ಹಣ ಸಂಗ್ರಹಣೆ ಮಾಡಿದ್ದು ಹೀಗೆ ಒಂದಷ್ಟು ಬೆರಳಣಿಕೆಯ ವಿಚಾರಗಳಷ್ಟೇ ಗೊತ್ತಿತ್ತು. ಬಡವರ ರಾಜಕುಮಾರ ಓದಿದ ಮೇಲೆ ಅಣ್ಣಾವ್ರು ಮತ್ತಷ್ಟು ಹತ್ತಿರವಾಗುತ್ತಾ ಹೋದರು.

ʼಬೇಡರ ಕಣ್ಣಪ್ಪʼನಿಂದ ಹಿಡಿದು ʼಶಬ್ಧವೇಧಿʼಯ ತನಕ ಅಣ್ಣಾವ್ರು ನಟಿಸಿದ ಬಹಳಷ್ಟು ಸಿನಿಮಾಗಳ ಬಗ್ಗೆ ಮತ್ತು ಅದರಲ್ಲಿ ಸಾಮಾಜಿಕ ಕಳಕಳಿಯ ಬಗ್ಗೆಯೂ ಈ ಪುಸ್ತಕ ತಿಳಿಸುತ್ತಾ ಹೋಗುತ್ತದೆ. ಮತ್ತೊಮ್ಮೆ ಆ ಎಲ್ಲಾ ಸಿನಿಮಾಗಳನ್ನು ನೋಡುವಂತೆ ಪ್ರೇರೇಪಿಸುತ್ತದೆ.

ಅಣ್ಣಾವ್ರು ನಮ್ಮ ಸಾಂಸ್ಕೃತಿಕ ನಾಯಕ ಎಂದು ನಾವು ಒಪ್ಪಿ, ಅಪ್ಪಿಕೊಂಡಿದ್ದೇವೆ. ಅರವತ್ತರ ದಶಕದಲ್ಲೇ ಒಪ್ಪಿಕೊಂಡಿದ್ದೆವಂತೆ. ಅದಕ್ಕೆ ಕಾರಣ ಏನು ಎಂಬುದನ್ನ ಲೇಖಕರಾದ  ಡಾ. ಮಂಜುನಾಥ ಅದ್ದೆ ಒಂದು ಮಾತನ್ನ ಹೇಳುತ್ತಾರೆ “’ರಾಜಕುಮಾರ್ ಚಿತ್ರಗಳು ಜನರೊಳಗೆ ಅಂತಃಸ್ಥವಾಗಿದ್ದ ಆತ್ಮವಿಶ್ವಾಸವನ್ನು ಹೊರತಂದದ್ದಷ್ಟೇ ಅಲ್ಲ, ಇಲ್ಲಿನ ಸಂಸ್ಕೃತಿಯ ತಂತುಗಳು ಮತ್ತು ಅದರೊಡನಿದ್ದ ಜನಗಳ ಕರುಳುಬಳ್ಳಿ ಸಂಬಂಧವನ್ನು ಹೆಣೆಯುತ್ತಲೇ ಹೋದವು.’ ‘ರಾಜಕುಮಾರ್ ನಟಿಸಿರುವ ಚಿತ್ರಗಳ ನಾಯಕರು ಯಾರೂ ಕೂಡ ತಮ್ಮ ಸ್ಥಳೀಯ ಭೂಗೋಳದಿಂದ ಹೊರಗೆ ಹೋದವರಲ್ಲ. ತಮ್ಮ ನೈಸರ್ಗಿಕವಾದ ಜೀವಪರಿಸರ ಮತ್ತು ವೃತ್ತಿಗಳಿಂದ ಆಚೆಗೆ ಹೋಗಲು ಯತ್ನಿಸಿದವರಲ್ಲ. ಆ ಸ್ಥಳೀಯ ಭೂಗೋಳದಲ್ಲಿ ಸಂಭವಿಸುವ ಎಲ್ಲಾ ರೀತಿಯ ಸವಾಲುಗಳ ಜೊತೆಗೇ ಇದ್ದು ವೈರುಧ್ಯಗಳಿಗೆ ಮುಖಾಮುಖಿಯಾಗಿ ಸಮಾಜವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನಿಭಾಯಿಸಿದವರು. ಹೀಗೆ ಜನರ ಕನಸು, ಆಶೋತ್ತರಗಳು ಮತ್ತು ನಿರಾಶೆಗಳು ಕೂಡ ತೆರೆಯ ಮೇಲೆ ಪಾತ್ರಗಳಲ್ಲಿ ಸಮೀಕರಣಗೊಂಡಿದ್ದರಿಂದಲೇ ಅರವತ್ತರ ದಶಕದಲ್ಲೇ ರಾಜಕುಮಾರ್ ಈ ನೆಲದ ಪ್ರಶ್ನಾತೀತ ಸಾಂಸ್ಕೃತಿಕ ನಾಯಕನಾಗಿ ರೂಪುಗೊಂಡಿದ್ದರು.’

1968 ರಲ್ಲಿ ಒಂದೇ ವರ್ಷದಲ್ಲಿ ಹದಿನಾರು ಸಿನಿಮಾಗಳಲ್ಲಿ ಡಾ. ರಾಜ್‌ ಕುಮಾರ್‌ ಅವರು ನಟಿಸಿದ್ದರು. ಅಣ್ಣಾವ್ರು ಯಾವತ್ತಿಗೂ ಯಾರೊಬ್ಬರನ್ನೂ ಚಾಲೆಂಜಿಂಗ್‌ ಆಗಿ ತೆಗೆದುಕೊಂಡವರಲ್ಲ.. ಇಲ್ಲಿ ಅಣ್ಣಾವ್ರಿಗೆ ಅಣ್ಣಾವ್ರೇ ಎದುರಾಳಿ. ಹೆಜ್ಜೆ ಹೆಜ್ಜೆಗೂ ಅಣ್ಣಾವ್ರನ್ನ ನೋಡಿ ಅಣ್ಣಾವ್ರೇ ತಿದ್ದಿಕೊಳ್ಳಬೇಕಿತ್ತು ತೀಡಿಕೊಳ್ಳಬೇಕಿತ್ತು. ಈ ಬಗ್ಗೆಯೂ ಯೋಚಿಸುವಂತೆ ಮಾಡುತ್ತದೆ ʼಬಡವರ ರಾಜಕುಮಾರʼ.

ಆ ಕಾಲಘಟ್ಟದ ಜಾತಿ ವ್ಯವಸ್ಥೆಯ ಬಗ್ಗೆ ಅಷ್ಟೇ ಅಲ್ಲದೇ ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲಿ ನಡೆದ ಸಾಮಾಜಿಕ ಸುಧಾರಣೆ ಕಾರ್ಯಕ್ರಮಗಳು ನಾಲ್ವಡಿಯವರ ದಿಟ್ಟ ನಿರ್ಧಾರಗಳು, ಇವೆಲ್ಲಾವೂ ನಂತರದ ದಿನಗಳಲ್ಲಿ ಹಾಗೆಯೇ ಇಂದಿಗೂ ಸಹಾ ಪರೋಕ್ಷವಾಗಿʼ ಪ್ರತ್ಯಕ್ಷವಾಗಿ ಹೇಗೆ ನಮ್ಮ ಬದುಕಿನ ಮೇಲೆ ಪ್ರಭಾವಿಸಿವೆ ಎಂಬುದನ್ನು ಅರ್ಥೈಸುತ್ತದೆ.

ಇನ್ನು ಚಲನಚಿತ್ರ ರಂಗದ ಬಗ್ಗೆಯಂತೂ ಬಹಳ ಸ್ಪಷ್ಟವಾಗಿ ಅದರ ಇತಿಹಾಸವನ್ನೇ ನಮ್ಮ ಮುಂದೆ ಇಟ್ಟಿದೆ ಎಂದರೆ ತಪ್ಪಾಗಲಾರದು. ಮೂಕಿ ಚಿತ್ರಗಳಿಂದ ಹಿಡಿದು ಚಿತ್ರರಂಗದಲ್ಲಾದ ಎಲ್ಲಾ ಬಗೆಯ ಸಂಶೋಧನೆಗಳನ್ನು ಓದುವಾಗ ನೀವು ಆ ಕಾಲಘಟ್ಟಕ್ಕೆ ಹೋಗಿರುತ್ತೀರಿ.

ನಾವು ಈಗಲೂ ಹಿಂದಿ ಹೇರಕೆಯ ವಿರುದ್ಧ ಮಾತನಾಡುತ್ತಿದ್ದೇವೆ. ಅಣ್ಣಾವ್ರು ತಮ್ಮ ʼಹಾಲು ಜೇನುʼ ಸಿನಿಮಾ ಬಿಡುಗಡೆಯ ಸಂದರ್ಭದಲ್ಲೇ ಹಿಂದಿ ಹೇರಿಕೆಯ ವಿರುದ್ಧ ಹೋರಾಡಿದ್ದಲ್ಲದೇ ʼಟ್ರೇಡ್‌ ಗೈಡ್‌ʼ ಎಂಬ ಪ್ರತಿಕೆಯಿಂದ ʼಮಿನಿ ಹಿಟ್ಲರ್”‌ ಎಂದು ಕೆರೆಸಿಕೊಂಡಿದ್ದರಂತೆ.. ನಾಡು ನುಡಿ ಭಾಷೆ ವಿಚಾರ ಬಂದಾಗ ಅಣ್ಣಾವ್ರು ಯಾವತ್ತಿಗೂ ಸುಮ್ಮನೆ ಕೂರಲಿಲ್ಲ.

ಫ್ರೋ. ಟಿ.ಎಸ್.‌ ಲೋಹಿತಾಶ್ವ ಅವರ ಒಂದು ಮಾತನ್ನು ಈ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ. ಒಂದು ಸಂದರ್ಭದಲ್ಲಿ ಅಣ್ಣಾವ್ರಿಗೆ ಹಿರಿಯ ಮಹಿಳೆಯೊಬ್ಬರು ಕಾಲಿಗೆ ಬಿದ್ದು ನಮಸ್ಕರಿಸಿದ ವಿಚಾರದ ಬಗ್ಗೆ. ಅಣ್ಣಾವ್ರು ಈ ವಿಚಾರವಾಗಿ ಮಾತನಾಡುತ್ತಾ ʼಅವರು ನಮಸ್ಕರಿಸಿದ್ದು ಮುತ್ತುರಾಜನಿಗಲ್ಲ ಅವರ ರಾಜಕುಮಾರನಿಗೆʼ ಎಂದು ಹೇಳುವುದನ್ನು ಓದಿದಾಗ ಡಾ. ರಾಜ್‌ ಕುಮಾರ್‌ ಕನ್ನಡದ, ಕನ್ನಡಿಗರ ಆಸ್ತಿ ಮುತ್ತುರಾಜನಷ್ಟೇ ಅಣ್ಣವ್ರ ಕುಟುಂಬದ ಆಸ್ತಿ ಎಂಬುದು ಅರ್ಥವಾಗುತ್ತದೆ. ಮತ್ತೆ ಇದನ್ನು ಪಾರ್ವತಮ್ಮನವರೂ ಸಹಾ ಒಪ್ಪಿಕೊಂಡಿದ್ದಾರೆ.

ಅಣ್ಣಾವ್ರ  ಬಗ್ಗೆಯೇ ಹೇಳಿ ಮುಗಿಸುವುದು ಸೂಕ್ತವಲ್ಲ. ಯಾಕೆಂದರೆ ಅಣ್ಣಾವ್ರ ಹಿಂದೆಯಷ್ಟೇ ಅಲ್ಲದೇ ಕನ್ನಡ, ಕನ್ನಡ ಚಿತ್ರರಂಗದ ಬೆನ್ನೆಲುಬಾಗಿ ನಿಂತ ಪಾರ್ವತಮ್ಮ ಅವರ ಬಗ್ಗೆಯೂ ಈ ಪುಸ್ತಕ ತಿಳಿಸಯತ್ತಾ ಹೋಗುತ್ತದೆ. ಹೆಚ್ಚು ಓದಿಲ್ಲದ ಮುತ್ತುರಾಜ ʼಡಾಕ್ಟರ್‌ʼ ಆದಂತೆ ಹೆಚ್ಚು ಓದಿಲ್ಲದ ಪಾರ್ವತಮ್ಮನವರೂ ಸಹಾ ʼಡಾಕ್ಟರ್‌ʼ ಆಗುತ್ತಾರೆ. ಅವರಲ್ಲಿದ್ದ ತಾಳ್ಮೆ, ತಾಯ್ತನ, ಯುಕ್ತಿ, ವಜ್ರೇಶ್ವರಿ ಕಂಬೈನ್ಸ್‌ ಎಂಬ ಸಂಸ್ಥೆಯನ್ನು ಕಟ್ಟಿ ನಿಲ್ಲಿಸಿದ ಧೈರ್ಯ ಎಲ್ಲವೂ ಅಣ್ಣಾವ್ರ ಬೆಳವಣಿಗೆಗೆ ಹೇಗೆ ಜೊತೆಯಾಗಿ ನಿಂತಿತು ಎಂಬುದನ್ನು ಈ ಪುಸ್ತಕವನ್ನು ಓದಿ ತಿಳಿಯಬಹುದು.

ಬಹುಶಃ ಈ ಪುಸ್ತಕದ ಬಗ್ಗೆ ಹೇಳುತ್ತಾ ಹೋದರೆ 15-20 ಪುಟಗಳು ಬರೆಯಬೇಕಾಗಬಹುದು. ಮುಗಿಸುವ ಮೊದಲು ಲೇಖಕರ ಮಾತನ್ನೇ ಹೇಳಿ ಮುಗಿಸುವುದು ಉತ್ತಮ ಎನಿಸುತ್ತದೆ.

“ಡಾ. ರಾಜಕುಮಾರ್’ ಎನ್ನುವ ಈ ಪ್ರಬಂಧ ‘ಮುತ್ತುರಾಜ’ . ಎನ್ನುವ ಹೆಸರಿನ ಅಸಾಧಾರಣ ಕಲಾವಿದ, ‘ರಾಜಕುಮಾರ್’ ನಾಗಿ, ಹೇಗೆ ಕನ್ನಡ ಬದುಕಿನ ಸಾಂಸ್ಕೃತಿಕ ನಾಯಕನಾಗಿ ಪ್ರಜಾತಂತ್ರ ಮೌಲ್ಯಗಳ ಪ್ರತಿನಿಧಿಯಾದರು. ಕಲೆಯ ಆವರಣದಾಚೆಗೂ ಹೇಗೆ ಕನ್ನಡ ಬದುಕುಗಳಲ್ಲಿ ಹಾಸುಹೊಕ್ಕಾಗಿದ್ದರು ಎನ್ನುವುದನ್ನು ಅನ್ವೇಷಿಸುತ್ತಾ, ಅದಕ್ಕಿದ್ದ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಕಾರಣಗಳನ್ನು ಅನ್ವೇಷಿಸಿದೆ. ಇದು ಒಂದು ಪ್ರಶ್ನೆಯನ್ನು ಹಾಕಿಕೊಂಡು ಅದಕ್ಕೆ ಉತ್ತರ ಹುಡುಕಲು ನಡೆದ ಪ್ರಯತ್ನವಲ್ಲ, ಇದೊಂದು ಸಾಂಸ್ಕೃತಿಕ ಸಂಘಟನೆಯ ಸ್ವರೂಪದ ಅಧ್ಯಯನ. ಈ ಅಧ್ಯಯನಕ್ಕೆ ರಾಜಕುಮಾರ್ ಅವರ ಚಿತ್ರಗಳು ಬಹುಮುಖ್ಯವಾದ ಆಕರ. ಅದಕ್ಕೆ ಪೂರಕವಾಗಿ ಸುಮಾರು 1950ರಿಂದ 1980ರವರೆಗಿನ ಕರ್ನಾಟಕದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚರಿತ್ರೆಯನ್ನು ಸಹಾ ಅಧ್ಯಯನ ಮಾಡಾಲಾಗಿದೆʼ ಎನ್ನುತ್ತಾರೆ.

ಕೊನೆಯ ಮಾತು. ಓದಿನ ಅಭ್ಯಾಸ ನಿಂತವರು ಬಡವರ ರಾಜಕುಮಾರ ಓದುವ ಮುನ್ನ ಯಾವುದಾದರು ಕಥೆ, ಕಾದಂಬರಿಯನ್ನು ಓದಿ ನಂತರ ಈ ಪುಸ್ತಕಕ್ಕೆ ಕೈ ಹಾಕಿ. ಇಲ್ಲದಿದ್ದರೆ ಕಷ್ಟವಾಗಬಹುದು. ಪುಸ್ತಕದಲ್ಲಿ ಬಳಸಿರುವ ಫೋಟೊಗಳು ಮಿಸ್ ಮ್ಯಾಚ್‌ ಆಗುತ್ತಿವೆ ಎಂದೆನಿಸಬಹುದು. ಆದರೆ ಮುಂದಿನ ಸಾಲುಗಳಲ್ಲಿ ಈ ಹಿಂದೆ ಬಳಸಲಾಗಿರುವ ಫೋಟೊಗಳಿಗೆ ಸಂಬಂಧಿಸಿದ ವಿಚಾರಗಳು ಇವೆ.

ಅಣ್ಣಾವ್ರ ಈ ಹುಟ್ಟುಹಬ್ಬದ ದಿನ ಒಂದೊಳ್ಳೆ ಪುಸ್ತಕ ಓದಿ ಮುಗಿಸಿದ ತೃಪ್ತಿ ಇದೆ. ಪುಸ್ತಕ ನನ್ನ ಹಿಡಿತಕ್ಕೆ ಸಿಗುವ ತನಕ ಬಹಳಷ್ಟು ಗೊಂದಲವಾಗುತ್ತಿದ್ದಾರೂ “ಹತ್ತು ಸಾವಿರು ಪುಟಗಳನ್ನ ಓದುವುದಕ್ಕಿಂತ ಮುನ್ನೂರು ಪುಟ ಓದುವುದು ಲೇಸಲ್ಲವೇ…?”

Related Articles

ಇತ್ತೀಚಿನ ಸುದ್ದಿಗಳು