ನಿರೀಕ್ಷೆಯಂತೆ ಆಪ್ ತೊರೆದು ಬಿಜೆಪಿ ಸೇರಿದ ರಾಘವ್ ಚೆಡ್ಡಾ: ಚಡ್ಡಾ ಸೇರಿ 7 ಸಂಸದರು ಬಿಜೆಪಿ ಸೇರ್ಪಡೆ

ನವದೆಹಲಿ : ಆಮ್ ಆದ್ಮಿ ಪಕ್ಷಕ್ಕೆ (ಆಪ್) ತೀವ್ರ ಆಘಾತ ನೀಡುವ ಬೆಳವಣಿಗೆಯಲ್ಲಿ, ಪಕ್ಷದ ಮುಂದಿನ ನಾಯಕ ಎಂದು ಬಿಂಬಿತರಾಗಿದ್ದ ರಾಘವ್ ಚಡ್ಡಾ ಅವರು ಶುಕ್ರವಾರ ಪಕ್ಷ ತೊರೆದು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದ್ದಾರೆ. ಅವರೊಂದಿಗೆ ರಾಜ್ಯಸಭೆಯ ಆರು ಇತರ ಆಪ್ ಸಂಸದರೂ ಬಿಜೆಪಿ ತೆಕ್ಕೆಗೆ ಜಿಗಿದಿದ್ದಾರೆ.

ಏನಾಯಿತು?
ನವದೆಹಲಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಘವ್ ಚಡ್ಡಾ, “ಸೈದ್ಧಾಂತಿಕ ಭಿನ್ನಾಭಿಪ್ರಾಯ”ಗಳನ್ನು ಮುಂದಿಟ್ಟು ಆಪ್ ತ್ಯಜಿಸುವ ನಿರ್ಧಾರ ಪ್ರಕಟಿಸಿದರು. ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಒಟ್ಟು ಏಳು ಮಂದಿ ಆಪ್ ರಾಜ್ಯಸಭಾ ಸಂಸದರು ಈ ನಿರ್ಧಾರದ ಭಾಗವಾಗಿದ್ದಾರೆ:
1. ರಾಘವ್ ಚಡ್ಡಾ
2. ಸಂದೀಪ್ ಪಾಠಕ್
3. ಅಶೋಕ್ ಮಿತ್ತಲ್
4. ಹರ್ಭಜನ್ ಸಿಂಗ್
5. ರಾಜಿಂದರ್ ಗುಪ್ತಾ
6. ವಿಕ್ರಮ್ ಸಹ್ನಿ
7. ಸ್ವಾತಿ ಮಲಿವಾಲ್
ಸದಸ್ಯತ್ವ ಉಳಿಯುತ್ತದೆ
ರಾಜ್ಯಸಭೆಯಲ್ಲಿ ಆಪ್‌ಗೆ ಒಟ್ಟು 10 ಸಂಸದರಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ, ಸದಸ್ಯತ್ವ ಉಳಿಸಿಕೊಳ್ಳಲು ಮೂರನೇ ಎರಡರಷ್ಟು ಸಂಸದರ ಒಪ್ಪಿಗೆ ಅಗತ್ಯ. ಈ ಏಳು ಮಂದಿ ಆ ಗಡಿಯನ್ನು ದಾಟಿರುವ ಕಾರಣ, ಅವರ ರಾಜ್ಯಸಭಾ ಸದಸ್ಯತ್ವ ರದ್ದಾಗುವ ಅಪಾಯ ಇಲ್ಲ.

ಈ ದಾಖಲೆಗಳನ್ನು ಈಗಾಗಲೇ ರಾಜ್ಯಸಭಾ ಅಧ್ಯಕ್ಷರಿಗೆ ಸಲ್ಲಿಸಲಾಗಿದೆ ಎಂದು ಚಡ್ಡಾ ತಿಳಿಸಿದ್ದಾರೆ.

ಚಡ್ಡಾ ಏನು ಹೇಳಿದರು?
“ಕಳೆದ 15 ವರ್ಷಗಳ ಕಾಲ ರಕ್ತ ಮತ್ತು ಬೆವರು ಸುರಿಸಿ ಪೋಷಿಸಿದ ಆಪ್ ಪಕ್ಷ ಇಂದು ತನ್ನ ಮೂಲ ತತ್ವ, ಮೌಲ್ಯಗಳಿಂದ ದೂರ ಸರಿದಿದೆ. ಪಕ್ಷ ಈಗ ದೇಶದ ಹಿತಕ್ಕಾಗಿ ಅಲ್ಲ, ಬದಲಾಗಿ ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡುತ್ತಿದೆ. ನಾನು ತಪ್ಪು ಪಕ್ಷದಲ್ಲಿ ಸರಿಯಾದ ವ್ಯಕ್ತಿ ಎಂಬ ಭಾವನೆ ದೀರ್ಘಕಾಲದಿಂದ ಕಾಡುತ್ತಿತ್ತು” ಎಂದು ಚಡ್ಡಾ ಭಾವುಕರಾಗಿ ಹೇಳಿದರು.

ಹಿನ್ನೆಲೆ
ಸರ್ಕಾರದ ವಿರುದ್ಧ ಮಹತ್ವದ ವಿಷಯಗಳನ್ನು ಎತ್ತದ ಕಾರಣ ಮತ್ತು “ಮೃದು ನಿಲುವು” ತಾಳಿದ ಆರೋಪದ ಮೇಲೆ ಆಪ್ ಇತ್ತೀಚೆಗೆ ಚಡ್ಡಾ ಅವರನ್ನು ರಾಜ್ಯಸಭಾ ಉಪ ನಾಯಕ ಸ್ಥಾನದಿಂದ ತೆಗೆದುಹಾಕಿತ್ತು. ಅಶೋಕ್ ಮಿತ್ತಲ್ ಅವರನ್ನು ಆ ಸ್ಥಾನಕ್ಕೆ ನೇಮಿಸಲಾಗಿತ್ತು. ಆದರೆ ಅವರೂ ಈಗ ಚಡ್ಡಾ ಜೊತೆ ಪಕ್ಷ ತೊರೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು