ಯುದ್ಧ ಭೀತಿಯ ವಿರುದ್ಧ ಮೌನ ಸಮರ: ಕುಂದಾಪುರದಲ್ಲಿ ಏಪ್ರಿಲ್ 25ರಂದು ರಾಮಾಂಜಿ ಮೌನ ಚಳುವಳಿ

ಕುಂದಾಪುರ: ಜಗತ್ತಿನಾದ್ಯಂತ ಹೆಚ್ಚುತ್ತಿರುವ ಯುದ್ಧದ ಕಾರ್ಮೋಡಗಳು, ಮಾನವೀಯ ಸಂಬಂಧಗಳಲ್ಲಿನ ಬಿರುಕು ಹಾಗೂ ಪ್ರಕೃತಿಯ ಮೇಲಿನ ದಬ್ಬಾಳಿಕೆಯನ್ನು ಖಂಡಿಸಿ, ಶಾಂತಿ ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರಲು ಸಾಮಾಜಿಕ ಹೋರಾಟಗಾರ ರಾಮಾಂಜಿ ನಮ್ಮಭೂಮಿ ಅವರು ಏಪ್ರಿಲ್ 25ರಂದು ಕುಂದಾಪುರದ ಶಾಸ್ತ್ರಿ ವೃತ್ತದಲ್ಲಿ ‘ಮೌನ ಚಳುವಳಿ’ ಹಮ್ಮಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ದುಡಿಯುವ ಮಕ್ಕಳ ಸಂಸ್ಥೆ ‘ನಮ್ಮ ಭೂಮಿ’ಯ ಮೂಲಕ ಸಾಮಾಜಿಕ ಕಳಕಳಿಯೊಂದಿಗೆ ಗುರುತಿಸಿಕೊಂಡಿರುವ ರಾಮಾಂಜಿ, ರಂಗಕರ್ಮಿಯಾಗಿ ಮತ್ತು ಕನ್ನಡ ಉಪನ್ಯಾಸಕರಾಗಿ ಸಮಾಜದ ಸ್ವಾಸ್ಥ್ಯಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಘಟನೆಗಳಿಂದ ಮನನೊಂದಿರುವ ಅವರು, ಗಾಂಧೀಜಿಯವರ ಅಹಿಂಸಾ ಮಾರ್ಗದಲ್ಲಿ ಶಾಂತಿಗಾಗಿ ಧ್ವನಿಯೆತ್ತಿದ್ದಾರೆ.

ಏಪ್ರಿಲ್ 25ರ ಚಳುವಳಿಯ ವಿವರ:

ಸ್ಥಳ: ಶಾಸ್ತ್ರಿ ವೃತ್ತ, ಕುಂದಾಪುರ.

ಸಮಯ: ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ.

ಕಾರ್ಯಕ್ರಮವು ಲಾಲ್ ಬಹದ್ದೂರ್ ಶಾಸ್ತ್ರಿಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರೊಂದಿಗೆ ಆರಂಭವಾಗಲಿದ್ದು, ಯುದ್ಧಗಳಲ್ಲಿ ಮಡಿದವರಿಗೆ ಮೌನ ನಮನ ಸಲ್ಲಿಸಲಾಗುತ್ತದೆ.

ಈ ಕುರಿತು ಮಾತನಾಡಿರುವ ರಾಮಾಂಜಿ, “ಈ ಮೌನ ಚಳುವಳಿಯು ಸಾಮ್ರಾಜ್ಯಶಾಹಿಗಳು, ಅಧಿಕಾರದಾಹಿಗಳು ಮತ್ತು ಸರ್ವಾಧಿಕಾರಿಗಳ ಮನಃಪರಿವರ್ತನೆಗೆ ಒಂದು ಸಣ್ಣ ಪ್ರಯತ್ನವಾಗಿದೆ. ಜಾಗತಿಕ ಮಟ್ಟದ ಸಹಬಾಳ್ವೆ, ಶಾಂತಿ, ಸೌಹಾರ್ದತೆ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಚಳುವಳಿ ನಡೆಯಲಿದೆ,” ಎಂದು ತಿಳಿಸಿದ್ದಾರೆ.

ಈ ಹಿಂದೆ ಎಪ್ರಿಲ್ 11ರಂದು ಉಡುಪಿಯಲ್ಲಿ ನಡೆದಿದ್ದ ಇವರ ಒಂದು ದಿನದ ಮೌನ ಪ್ರತಿಭಟನೆಗೆ ಸಾರ್ವಜನಿಕರು ಹಾಗೂ ಮಾಧ್ಯಮಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಅದೇ ಮಾದರಿಯಲ್ಲಿ ಕುಂದಾಪುರದಲ್ಲೂ ನಡೆಯಲಿರುವ ಈ ಶಾಂತಿ ಮಂತ್ರಕ್ಕೆ ಸಾರ್ವಜನಿಕರು ಕೈಜೋಡಿಸುವಂತೆ ರಾಮಾಂಜಿ ವಿನಂತಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು