ಹೈಕಮಾಂಡ್ ನಿರ್ಧಾರವೇ ಪ್ರಸಾದ: ಕರ್ನಾಟಕದ ಅಧಿಕಾರ ಸಂಘರ್ಷದ ನಡುವೆ ಡಿ.ಕೆ. ಶಿವಕುಮಾರ್ ಹೇಳಿಕೆ

ಕಲಬುರಗಿ: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಸಾಧ್ಯತೆಯ ಕುರಿತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಯಾವುದೇ ಸ್ಪಷ್ಟ ನಿರ್ಧಾರ ಪ್ರಕಟಿಸದೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ ಅವರು, “ಮುಖ್ಯಮಂತ್ರಿಯವರನ್ನು ಬದಲಾಯಿಸುವ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಹಾಗಿರುವಾಗ ಬದಲಾವಣೆ ಆಗುತ್ತದೆಯೇ ಇಲ್ಲವೇ ಎಂದು ನಾನು ಹೇಗೆ ಹೇಳಲಿ?” ಎಂದು ಪ್ರತಿಕ್ರಿಯಿಸಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ‘ಅಧಿಕಾರ ಸಂಘರ್ಷ’ ಮುಂದುವರಿಯುತ್ತಿರುವ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಅವರ ಈ ಹೇಳಿಕೆ ಹೊರಬಿದ್ದಿದೆ.

ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ನಾನು ಪಕ್ಷಕ್ಕೆ ಅತ್ಯಂತ ನಿಷ್ಠನಾಗಿದ್ದೇನೆ. ನಮ್ಮ ಪಕ್ಷದ ನಾಯಕರ ಮಾತುಗಳು ನನಗೆ ಬಹಳ ಮುಖ್ಯ. ಪಕ್ಷದ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಏನೇ ಹೇಳಿದರೂ, ಅದನ್ನು ನಾನು ‘ಪ್ರಸಾದ’ ಎಂದು ಸ್ವೀಕರಿಸುತ್ತೇನೆ,” ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು