ಕಮರ್ಷಿಯಲ್‌ ಗ್ಯಾಸ್‌ ಬೆನ್ನಲ್ಲೇ, ಮನೆಬಳಕೆ ಗ್ಯಾಸ್‌ ಮತ್ತು ಪೆಟ್ರೋಲ್‌, ಡೀಸಲ್ ಬೆಲೆ ಏರಿಕೆ ಬರೆಗೆ ಕೇಂದ್ರದಿಂದ ಸಿದ್ಧತೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆಗಳನ್ನು ಹೆಚ್ಚಿಸುವುದಿಲ್ಲ ಎಂದು ಭರವಸೆ ನೀಡಿದ್ದ ಕೇಂದ್ರ ಸರ್ಕಾರವು ಈಗ ತನ್ನ ನಿಲುವಿನಿಂದ ಹಿಂದೆ ಸರಿಯುತ್ತಿದೆ. ಚುನಾವಣೆ ಮುಗಿದ ಬೆನ್ನಲ್ಲೇ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟುವ ಸಾಧ್ಯತೆಯಿದ್ದು, ಈಗಾಗಲೇ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಅಮಾಂತು ₹933 ರಷ್ಟು ಏರಿಕೆ ಮಾಡುವ ಮೂಲಕ ಸರ್ಕಾರ ಜನರಿಗೆ ಆಘಾತ ನೀಡಿದೆ. ಈ ಬೆಲೆ ಏರಿಕೆಯ ಸರಣಿ ಇಲ್ಲಿಗೆ ನಿಲ್ಲುವ ಲಕ್ಷಣಗಳಿಲ್ಲ ಎಂದು ಮೂಲಗಳು ತಿಳಿಸಿವೆ.

ಬರುವ ವಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀಟರ್‌ಗೆ ₹4 ರಿಂದ ₹5 ರವರೆಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಉನ್ನತ ಸರ್ಕಾರಿ ಮೂಲಗಳು ಬಹಿರಂಗಪಡಿಸಿವೆ. ಇದರೊಂದಿಗೆ ಮನೆ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯು ₹40 ರಿಂದ ₹50 ರವರೆಗೆ ಹೆಚ್ಚಾಗುವ ನಿರೀಕ್ಷೆಯಿದೆ. ರಾಜಕೀಯ ಲಾಭಕ್ಕಾಗಿ ಚುನಾವಣೆ ಮುಗಿಯುವವರೆಗೆ ಬೆಲೆ ಏರಿಕೆಯನ್ನು ತಡೆಹಿಡಿದು, ಮತದಾನ ಪ್ರಕ್ರಿಯೆ ಮುಗಿದ ಕೆಲವೇ ದಿನಗಳಲ್ಲಿ ಬೆಲೆ ಏರಿಕೆಗೆ ಮುಂದಾಗಿರುವ ಸರ್ಕಾರದ ನಡೆಯನ್ನು ನೆಟ್ಟಿಗರು ತೀವ್ರವಾಗಿ ಟೀಕಿಸುತ್ತಿದ್ದಾರೆ.

ಈ ಜಾಗತಿಕ ಬೆಲೆ ಏರಿಕೆಗೆ ಅಂತರಾಷ್ಟ್ರೀಯ ಘರ್ಷಣೆಗಳು ಪ್ರಮುಖ ಕಾರಣವಾಗಿವೆ. ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕಾ ಮತ್ತು ಇಸ್ರೇಲ್ ನಡೆಸಿದ ದಾಳಿ ಹಾಗೂ ಅದಕ್ಕೆ ಪ್ರತಿಯಾಗಿ ಇರಾನ್ ಕೈಗೊಂಡ ಕ್ರಮಗಳಿಂದಾಗಿ ಕಚ್ಚಾ ತೈಲದ ಬೆಲೆಗಳು ದಿಢೀರನೆ ಏರಿಕೆಯಾಗಿವೆ. ಈ ಸಂಘರ್ಷದ ಪರಿಣಾಮವಾಗಿ ವಿಶ್ವದ ತೈಲ ವ್ಯಾಪಾರದಲ್ಲಿ ಅತ್ಯಂತ ಪ್ರಮುಖವಾದ ‘ಹೊರ್ಮುಜ್ ಜಲಸಂಧಿ’ ಮೂಲಕ ತೈಲ ಸಂಚಾರಕ್ಕೆ ಅಡ್ಡಿಯಾಗಿದ್ದು, ಇದು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಈಗಾಗಲೇ ವಾಣಿಜ್ಯ ಎಲ್‌ಪಿಜಿ, ಕೈಗಾರಿಕಾ ಡೀಸೆಲ್ ಮತ್ತು ಜೆಟ್ ಇಂಧನದ ಬೆಲೆಗಳನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಶುಕ್ರವಾರದಂದು ಹೆಚ್ಚಿಸಿವೆ. ಪಶ್ಚಿಮ ಬಂಗಾಳದ ಚುನಾವಣೆ ಮುಗಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್‌ಗೆ ₹25 ರಿಂದ ₹28 ರವರೆಗೆ ಏರಿಕೆಯಾಗಬಹುದು ಎಂದು ಈ ಹಿಂದೆ ವಿಶ್ಲೇಷಕರು ಅಂದಾಜಿಸಿದ್ದರು. ಒಟ್ಟಾರೆಯಾಗಿ, ಅಂತರಾಷ್ಟ್ರೀಯ ಪರಿಸ್ಥಿತಿ ಮತ್ತು ಚುನಾವಣಾ ನಂತರದ ಬೆಳವಣಿಗೆಗಳು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಿರುವುದು ದಟ್ಟವಾಗಿದೆ.

Related Articles

ಇತ್ತೀಚಿನ ಸುದ್ದಿಗಳು