ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಸಚಿವ ವಿಜಯ ಶಾ ವಿವಾದಾತ್ಮಕ ಹೇಳಿಕೆ: ಕ್ರಮ ಕೈಗೊಳ್ಳಲು ಮಧ್ಯಪ್ರದೇಶ ಸರ್ಕಾರಕ್ಕೆ ಸುಪ್ರೀಂ ಗಡುವು

ದೆಹಲಿ: ಆಪರೇಷನ್ ಸಿಂದೂರ್ (Operation Sindoor) ನಂತರ ಸೇನಾ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಸಚಿವ ಕುಂವರ್ ವಿಜಯ್ ಶಾ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಮಧ್ಯಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಖಡಕ್ ಸೂಚನೆ ನೀಡಿದೆ.

“ಎನಫ್‌ ಈಸ್‌ ಎನಫ್” ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರ ಪೀಠವು ಈ ಸಂದರ್ಭದಲ್ಲಿ ಗುಡುಗಿದೆ. ಸಚಿವರ ಹೇಳಿಕೆಯು “ಅತ್ಯಂತ ದುರದೃಷ್ಟಕರ” ಎಂದು ಬಣ್ಣಿಸಿದ ನ್ಯಾಯಾಲಯ, ನಾಲ್ಕು ವಾರಗಳ ಒಳಗಾಗಿ ಅವರ ವಿರುದ್ಧ ಕ್ರಮಕ್ಕೆ ಅನುಮತಿ ನೀಡುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಸಚಿವರ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಸಚಿವರು ತಪ್ಪಾಗಿ ಮಾತನಾಡಿದ್ದಾರೆ ಮತ್ತು ಈಗಾಗಲೇ ಕ್ಷಮೆಯಾಚಿಸಿದ್ದಾರೆ ಎಂದು ವಾದಿಸಿದರು. ಆದರೆ ಇದನ್ನು ಒಪ್ಪದ ಮುಖ್ಯ ನ್ಯಾಯಮೂರ್ತಿಗಳು, “ಇದು ಕೇವಲ ದುರದೃಷ್ಟಕರವಲ್ಲ, ಅತ್ಯಂತ ಕೆಟ್ಟ ಹೇಳಿಕೆ. ಸಚಿವರ ನಡವಳಿಕೆಯಲ್ಲಿ ಪಶ್ಚಾತ್ತಾಪದ ಲಕ್ಷಣಗಳೂ ಕಾಣುತ್ತಿಲ್ಲ” ಎಂದು ತರಾಟೆಗೆ ತೆಗೆದುಕೊಂಡರು.

ರಾಜಕೀಯ ವ್ಯಕ್ತಿಗಳಿಗೆ ವಿಷಯಗಳನ್ನು ಹೇಗೆ ಹೊಗಳಬೇಕು ಎಂಬುದು ಚೆನ್ನಾಗಿ ತಿಳಿದಿರುತ್ತದೆ, ಒಂದು ವೇಳೆ ಅದು ನಾಲಿಗೆ ತಪ್ಪಿ ಬಂದ ಮಾತಾಗಿದ್ದರೆ ತಕ್ಷಣವೇ ಕ್ಷಮೆ ಯಾಚಿಸಬೇಕಿತ್ತು ಎಂದು ನ್ಯಾಯಾಲಯ ಹೇಳಿದೆ. ವಿಶೇಷ ತನಿಖಾ ದಳ (SIT) ಈಗಾಗಲೇ ತನ್ನ ವರದಿಯನ್ನು ಸಲ್ಲಿಸಿದ್ದು, ಸಚಿವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 196 ಅಡಿಯಲ್ಲಿ ಕ್ರಮ ಕೈಗೊಳ್ಳಲು ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ.

ಆಪರೇಷನ್ ಸಿಂದೂರ್ ಸಮಯದಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರು ಮಾಧ್ಯಮಗಳ ಮುಂದೆ ನೀಡಿದ ವಿವರಣೆಗಳ ನಂತರ, ವಿಜಯ್ ಶಾ ಅವರು ಅವರ ವಿರುದ್ಧ ಅತ್ಯಂತ ಕೀಳು ಮಟ್ಟದ ಭಾಷೆಯನ್ನು ಬಳಸಿ ಮಾತನಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿ ತೀವ್ರ ಖಂಡನೆಗೆ ಗುರಿಯಾಗಿತ್ತು. ಈ ಹಿಂದೆ ಹೈಕೋರ್ಟ್ ಕೂಡ ಸಚಿವರ ಭಾಷೆಯನ್ನು “ಚರಂಡಿ ಭಾಷೆ” ಎಂದು ಕರೆದು ತರಾಟೆಗೆ ತೆಗೆದುಕೊಂಡಿತ್ತು.

ಜನವರಿ 19ರಂದು ನೀಡಿದ್ದ ಆದೇಶದಲ್ಲಿ ಎರಡು ವಾರಗಳ ಒಳಗಾಗಿ ನಿರ್ಧಾರ ತೆಗೆದುಕೊಳ್ಳುವಂತೆ ಕೋರ್ಟ್ ಸೂಚಿಸಿತ್ತಾದರೂ, ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಈಗ ಆಕ್ರೋಶ ವ್ಯಕ್ತಪಡಿಸಿದೆ. ಬೇಸಿಗೆ ರಜೆಯ ನಂತರ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

Related Articles

ಇತ್ತೀಚಿನ ಸುದ್ದಿಗಳು