ಮುಂಬೈಯಲ್ಲಿ ಮರಾಠಿ ನಾಮಫಲಕ ಕಡ್ಡಾಯ: ನಿಯಮ ಮೀರಿದರೆ ‘ಸೇನಾ ಶೈಲಿ’ಯ ಬಿಸಿ ಮುಟ್ಟಿಸುವ ಎಚ್ಚರಿಕೆ ನೀಡಿದ ಮುಂಬೈ ಉಪಮೇಯರ್

ಮುಂಬೈನ ಎಲ್ಲಾ ಅಂಗಡಿಗಳು ಮತ್ತು ಹೋಟೆಲ್‌ಗಳು ಕೂಡಲೇ ಮರಾಠಿ ನಾಮಫಲಕಗಳನ್ನು ಅಳವಡಿಸಬೇಕು, ಇಲ್ಲದಿದ್ದರೆ ‘ಶಿವಸೇನಾ ಶೈಲಿ’ಯ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಮುಂಬೈ ಉಪಮೇಯರ್ ಸಂಜಯ್ ಘಾಡಿ ಎಚ್ಚರಿಸಿದ್ದಾರೆ. ಪಂಚತಾರಾ ಹೋಟೆಲ್‌ಗಳು ಮತ್ತು ಸೆಲೆಬ್ರಿಟಿಗಳ ಒಡೆತನದ ಮಳಿಗೆಗಳು ಸೇರಿದಂತೆ ಎಲ್ಲಾ ಸಂಸ್ಥೆಗಳು ಒಂದು ತಿಂಗಳೊಳಗೆ ದೇವನಾಗರಿ ಲಿಪಿಯಲ್ಲಿ ಮರಾಠಿ ನಾಮಫಲಕಗಳನ್ನು ಪ್ರದರ್ಶಿಸಬೇಕು ಎಂದು ಅವರು ಗಡುವು ನೀಡಿದ್ದಾರೆ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮರಾಠಿ ನಾಮಫಲಕಗಳು ಕಡ್ಡಾಯವಾಗಿದ್ದು, ನಿಯಮ ಪಾಲಿಸದಿದ್ದರೆ ಪಕ್ಷದ ಅಧ್ಯಕ್ಷ ಹಾಗೂ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ಆದೇಶದಂತೆ ನಮ್ಮ ಕಾರ್ಯಕರ್ತರು ಶಿವಸೇನಾ ಶೈಲಿಯಲ್ಲಿ ಉತ್ತರಿಸಲಿದ್ದಾರೆ ಎಂದು ಘಾಡಿ ಗುಡುಗಿದ್ದಾರೆ. ನಗರದ 5,020 ಅಂಗಡಿಗಳು ಮತ್ತು ಸಂಸ್ಥೆಗಳು ಇನ್ನೂ ಮರಾಠಿ ನಾಮಫಲಕ ನಿಯಮವನ್ನು ಪಾಲಿಸಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಈವರೆಗೆ ನಿಯಮ ಉಲ್ಲಂಘಿಸಿದ 3,114 ಸಂಸ್ಥೆಗಳ ವಿರುದ್ಧ ಪಾಲಿಕೆಯು ದಂಡನಾತ್ಮಕ ಕ್ರಮ ಕೈಗೊಂಡಿದ್ದು, ಒಟ್ಟು 1.91 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದೆ. “ಪಂಚತಾರಾ ಹೋಟೆಲ್ ಆಗಿರಲಿ ಅಥವಾ ಸಾಮಾನ್ಯ ಮಳಿಗೆಯಾಗಿರಲಿ, ಮರಾಠಿ ಫಲಕಗಳು ಕಡ್ಡಾಯ. ಈ ಬಗ್ಗೆ ಅಧಿಕಾರಿಗಳು ನಿರಂತರ ತಪಾಸಣೆ ನಡೆಸಬೇಕು” ಎಂದು ಘಾಡಿ ಸೂಚಿಸಿದ್ದಾರೆ. ಅಲ್ಲದೆ, ನಿಯಮ ಜಾರಿಗೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು