ದೇವಸ್ಥಾನಕ್ಕೆ ಹೋದರಷ್ಟೇ ಹಿಂದೂ ಅಲ್ಲ, ಮನೆಯಲ್ಲಿ ದೀಪ ಹಚ್ಚಿದರೂ ಸಾಕು: ಸುಪ್ರೀಂ ಕೋರ್ಟ್

ಹಿಂದೂ ಧರ್ಮವು ಒಂದು ಜೀವನ ವಿಧಾನವಾಗಿದ್ದು, ಒಬ್ಬ ವ್ಯಕ್ತಿ ತನ್ನನ್ನು ಹಿಂದೂ ಎಂದು ಸಾಬೀತುಪಡಿಸಲು ದೇವಸ್ಥಾನಕ್ಕೇ ಹೋಗಬೇಕೆಂದಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ತಾರತಮ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಈ ಅವಲೋಕನ ಮಾಡಿದೆ. ಪೀಠದಲ್ಲಿದ್ದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, “ಹಿಂದೂ ಧರ್ಮವು ಒಂದು ಜೀವನ ವಿಧಾನ. ಒಬ್ಬ ವ್ಯಕ್ತಿಯು ಹಿಂದೂ ಆಗಿ ಮುಂದುವರಿಯಲು ದೇವಸ್ಥಾನಕ್ಕೆ ಹೋಗುವುದು ಅಥವಾ ನಿರ್ದಿಷ್ಟ ಆಚರಣೆಗಳನ್ನು ಮಾಡುವುದು ಕಡ್ಡಾಯವಲ್ಲ” ಎಂದು ತಿಳಿಸಿದರು.

ಈ ವಿಚಾರವನ್ನು ಮತ್ತಷ್ಟು ವಿವರಿಸಿದ ಮುಖ್ಯ ನ್ಯಾಯಮೂರ್ತಿಗಳು, “ಒಬ್ಬ ವ್ಯಕ್ತಿಯು ತನ್ನ ಗುಡಿಸಲಿನಲ್ಲಿ ಒಂದು ದೀಪವನ್ನು ಹಚ್ಚಿದರೂ ಸಹ, ಅದು ಅವನ ನಂಬಿಕೆ ಮತ್ತು ಧರ್ಮವನ್ನು ಸಾಬೀತುಪಡಿಸಲು ಸಾಕಾಗುತ್ತದೆ” ಎಂದು ಮಾರ್ಮಿಕವಾಗಿ ಹೇಳಿದರು. ಧಾರ್ಮಿಕ ನಂಬಿಕೆ ಎಂಬುದು ಕೇವಲ ಬಾಹ್ಯ ಆಚರಣೆಗಳಿಗೆ ಸೀಮಿತವಾಗಿಲ್ಲ ಎಂಬುದು ನ್ಯಾಯಾಲಯದ ಆಶಯವಾಗಿತ್ತು.

ವಿಚಾರಣೆಯ ವೇಳೆ ಹಿರಿಯ ವಕೀಲ ಡಾ. ಜಿ. ಮೋಹನ್ ಗೋಪಾಲ್ ಅವರು ವಾದ ಮಂಡಿಸುತ್ತಾ, 1966ರ ತೀರ್ಪೊಂದರಲ್ಲಿ ವೇದಗಳನ್ನು ಅತ್ಯುನ್ನತ ಪ್ರಮಾಣವೆಂದು ಒಪ್ಪುವವರೇ ಹಿಂದೂಗಳು ಎಂದು ವ್ಯಾಖ್ಯಾನಿಸಲಾಗಿತ್ತು ಎಂದು ಸ್ಮರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ಧಾರ್ಮಿಕ ಆಚರಣೆಗಳು ಮತ್ತು ನಂಬಿಕೆಗಳು ವೈಯಕ್ತಿಕವಾಗಿದ್ದು, ಪ್ರತಿಯೊಂದು ಆಚರಣೆಯನ್ನು ನ್ಯಾಯಾಲಯದ ಮುಂದೆ ಪ್ರಶ್ನಿಸುತ್ತಾ ಹೋದರೆ ಅದು ಧರ್ಮಗಳ ವಿಭಜನೆಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿತು.

2018ರಲ್ಲಿ ಸುಪ್ರೀಂ ಕೋರ್ಟ್ ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಐತಿಹಾಸಿಕ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಈಗಿನ ಸಂವಿಧಾನ ಪೀಠವು ನಡೆಸುತ್ತಿದೆ. ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಾಂವಿಧಾನಿಕ ಹಕ್ಕುಗಳ ನಡುವಿನ ಸಮತೋಲನದ ಕುರಿತು ಈ ವಿಚಾರಣೆ ಮಹತ್ವ ಪಡೆದಿದೆ.

Related Articles

ಇತ್ತೀಚಿನ ಸುದ್ದಿಗಳು