ಹೊರ್ಮುಜ್ ಜಲಸಂಧಿಯಲ್ಲಿ ಭಾರತದ ನೌಕೆಯ ಮೇಲೆ ದಾಳಿ: 14 ಮಂದಿ ಸಿಬ್ಬಂದಿಯನ್ನು ರಕ್ಷಿಸಿದ ಒಮನ್ ಕೋಸ್ಟ್‌ಗಾರ್ಡ್

ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆಯ ನಡುವೆ ಭಾರತದ ಸರಕು ಸಾಗಣೆ ನೌಕೆಯೊಂದರ ಮೇಲೆ ಭೀಕರ ದಾಳಿ ನಡೆದಿದೆ. ‘ಎಂಎಸ್‌ವಿ ಹಾಜಿ ಅಲಿ’ (MSV Haji Ali) ಎಂಬ ಹೆಸರಿನ ಭಾರತೀಯ ನೌಕೆಯು ಡ್ರೋನ್ ಅಥವಾ ಕ್ಷಿಪಣಿ ದಾಳಿಗೆ ತುತ್ತಾಗಿ ಸಮುದ್ರದಲ್ಲಿ ಮುಳುಗಡೆಗೊಂಡಿದೆ.

ಬುಧವಾರ ಮುಂಜಾನೆ 3.30ರ ಸುಮಾರಿಗೆ ಸಂಭವಿಸಿದ ಈ ಸ್ಫೋಟದ ವೇಳೆ ನೌಕೆಯಲ್ಲಿದ್ದ 14 ಮಂದಿ ಸಿಬ್ಬಂದಿ ಅಪಾಯಕ್ಕೆ ಸಿಲುಕಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಒಮನ್ ಕೋಸ್ಟ್‌ಗಾರ್ಡ್ ಸಿಬ್ಬಂದಿ, ಬೃಹತ್ ರಕ್ಷಣಾ ಕಾರ್ಯಾಚರಣೆ ನಡೆಸಿ ನೌಕೆಯಲ್ಲಿದ್ದ ಎಲ್ಲಾ 14 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಗುರುತು ತಿಳಿಯದ ಡ್ರೋನ್ ಅಥವಾ ಕ್ಷಿಪಣಿಯೊಂದು ನೌಕೆಯನ್ನು ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಆದಾಗ್ಯೂ, ಈ ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುದು ಇನ್ನು ಅಧಿಕೃತವಾಗಿ ತಿಳಿದುಬಂದಿಲ್ಲ. ಒಮನ್ ಕರಾವಳಿಯಲ್ಲಿ ಭಾರತದ ಧ್ವಜ ಹೊತ್ತ ವಾಣಿಜ್ಯ ನೌಕೆಯ ಮೇಲೆ ನಡೆದ ಈ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ.

ಈ ಪ್ರದೇಶದಲ್ಲಿ ಅಂತರಾಷ್ಟ್ರೀಯ ಹಡಗು ಸಂಚಾರಕ್ಕೆ ಎದುರಾಗಿರುವ ನಿರಂತರ ಬೆದರಿಕೆಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದ್ದು, ಇಂತಹ ದಾಳಿಗಳು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ ಎಂದು ಗುಡುಗಿದೆ.

Related Articles

ಇತ್ತೀಚಿನ ಸುದ್ದಿಗಳು