ದಿ ಬ್ರೋಕನ್ ಕ್ರೌನ್‌: ಡಿಕೆಶಿ ಮುಂದಿರುವ ಚಕ್ರವ್ಯೂಹ ಮತ್ತು 18 ತಿಂಗಳ ‘ಡೆತ್ ಮ್ಯಾಚ್’!

“ಇದು ಡಿಕೆ ಶಿವಕುಮಾರ್ ಪಾಲಿನ ಅಂತಿಮ ಹೋರಾಟ. ಇದು ಮಾಡು ಇಲ್ಲವೇ ಮಡಿ ಪಂದ್ಯ! ಇಷ್ಟು ದಿನ ಟ್ರಬಲ್ ಶೂಟ‌ರ್ ಆಗಿ ಬೇರೆಯವರ ಸಂಕಷ್ಟಗಳನ್ನು ಪರಿಹರಿಸಿದವರು, ಈಗ ತಮ್ಮದೇ ಕುರ್ಚಿಗೆ, ತಮ್ಮದೇ ಸರ್ಕಾರಕ್ಕೆ, ತಮ್ಮದೇ ಪಕ್ಷಕ್ಕೆ ಎದುರಾಗಿರುವ ಟ್ರಬಲ್‌ಗಳನ್ನು ಹೇಗೆ ಶೂಟ್ ಮಾಡ್ತಾರೆ?..” ಓದಿ ವಿಆರ್ ಕಾರ್ಪೆಂಟರ್ ಅವರ ಬರಹದಲ್ಲಿ

2023ರ ಮೇ ತಿಂಗಳಲ್ಲಿ ಶುರುವಾಗಿದ್ದ ‘ಕುರ್ಚಿ’ಯ ಮ್ಯೂಸಿಕಲ್ ಚೇರ್ ಆಟಕ್ಕೀಗ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ದೆಹಲಿ ಹೈಕಮಾಂಡ್‌ನ ಪಕ್ಕಾ ಕಮರ್ಷಿಯಲ್ ಡೀಲ್ ಪ್ರಕಾರ, ಸಿದ್ದರಾಮಯ್ಯ ಕೆಳಗಿಳಿದಿದ್ದಾರೆ. ಡಿ.ಕೆ. ಶಿವಕುಮಾ‌ರ್ ಸಿಎಂ ಗದ್ದುಗೆ ಏರಿದ್ದಾರೆ. ಕನಕಪುರದ ಬಂಡೆ ಈಗ ವಿಧಾನಸೌಧದ ಮೂರನೇ ಮಹಡಿಯಲ್ಲಿ ವಿರಾಜಮಾನವಾಗಿದೆ. “ನಮ್ಮ ಸಾಹೇಬ್ರು ಸಿಎಂ ಆದ್ರು” ಅಂತ ಅವರ ಅಭಿಮಾನಿಗಳು ರಾಜ್ಯಾದ್ಯಂತ ಕಟೌಟ್ ನಿಲ್ಲಿಸಿ, ಹಾಲಿನ ಅಭಿಷೇಕ ಮಾಡುತ್ತಿದ್ದಾರೆ.

ಆದರೆ, ಆ ಕಟೌಟ್‌ಗಳ ಹಿಂದಿರುವ ಕಟು ವಾಸ್ತವವೇ ಬೇರೆ. ಡಿಕೆಶಿ ತಲೆ ಮೇಲಿರುವುದು ಹೂವಿನ ಕಿರೀಟ ಅಲ್ಲ, ಅದು ರಕ್ತ ಹೀರುವ ಮುಳ್ಳಿನ ಕಿರೀಟ!

ಮುಳ್ಳಿನ ಕಿರೀಟ ಮತ್ತು ಕರಗುತ್ತಿರುವ ಕಾಲಾವಕಾಶ
ಲೆಕ್ಕಾಚಾರ ಬಹಳ ಸಿಂಪಲ್ ಆಗಿದೆ, ಆದರೆ ಡೇಂಜರಸ್ ಆಗಿದೆ. ಡಿಕೆಶಿಗೆ ಸಿಕ್ಕಿರುವುದು ಐದು ವರ್ಷದ ಫುಲ್ ಟೈಮ್ ಅಧಿಕಾರ ಅಲ್ಲ, ಕೇವಲ ಎರಡು ವರ್ಷದ ‘ಪಾರ್ಟ್ ಟೈಮ್’ ಕಾಂಟ್ರಾಕ್ಟ್. ಈ 24 ತಿಂಗಳಲ್ಲಿ ಕಡೆಯ ಆರು ತಿಂಗಳು ಸಂಪೂರ್ಣವಾಗಿ ಎಲೆಕ್ಷನ್ ಜ್ವರ. ನೀತಿ ಸಂಹಿತೆ, ಟಿಕೆಟ್ ಹಂಚಿಕೆ, ಪ್ರಚಾರದ ಗದ್ದಲ. ಅಂದರೆ ಆಡಳಿತ ನಡೆಸಲು ಉಳಿಯುವುದು ಬರೀ ಹದಿನೆಂಟು ತಿಂಗಳು.

ಈ 18 ತಿಂಗಳಲ್ಲಿ ಏನಾಗಬೇಕು? ಹೊಸ ಸಿಎಂ ಬಂದ ತಕ್ಷಣ ತಮ್ಮದೇ ಆದ ಅಧಿಕಾರಿಗಳ ಪಡೆಯನ್ನು ಕಟ್ಟಿಕೊಳ್ಳಬೇಕು. ಚೀಫ್ ಸೆಕ್ರೆಟರಿಯಿಂದ ಹಿಡಿದು, ಡಿಜಿಪಿ, ಐಜಿಪಿ, ಜಿಲ್ಲಾಧಿಕಾರಿಗಳು, ಎಸ್ಪಿಗಳ ತನಕ ‘ತಮಗೆ ಬೇಕಾದವರನ್ನು’ ಕೂರಿಸಿಕೊಳ್ಳಲು ಕನಿಷ್ಠ ಮೂರು ತಿಂಗಳು ಬೇಕು. ಆಮೇಲೆ ಬಜೆಟ್ ಮಂಡನೆ, ಹಳೆ ಯೋಜನೆಗಳ ರಿವ್ಯೂ… ನೋಡನೋಡುತ್ತಿದ್ದಂತೆಯೇ ಒಂದು ವರ್ಷ ಕಳೆದುಹೋಗುತ್ತದೆ!

ಇನ್ನು ಡಿಕೆಶಿಯವರ ಡೀಮ್ ಪ್ರಾಜೆಕ್ಟ್ ‘ಬ್ರಾಂಡ್ ಬೆಂಗಳೂರು’ ಕಥೆ ಏನಾಗಬೇಕು? ಟನೆಲ್ ರಸ್ತೆಗಳು, ಹೊಸ ಪ್ರೈಓವರ್‌ಗಳು, ಮೆಟ್ರೋ ವಿಸ್ತರಣೆ… ಇವೆಲ್ಲಾ 18 ತಿಂಗಳಲ್ಲಿ ಆಗುವ ಮ್ಯಾಜಿಕ್ ಅಲ್ಲ. ಈ ಪ್ರಾಜೆಕ್ಟ್‌ಗಳಿಗೆ ಟೆಂಡ‌ರ್ ಕರೆದು, ವರ್ಕ್ ಆರ್ಡರ್ ಕೊಡುವಷ್ಟರಲ್ಲಿ ಎಲೆಕ್ಷನ್ ಬಂದುಬಿಡುತ್ತದೆ. ಜನರ ಕಣ್ಣಿಗೆ ಕಾಣುವಂತಹ, “ಇದು ಡಿಕೆಶಿ ಮಾಡಿದ್ದು” ಅಂತ ಎದೆತಟ್ಟಿ ಹೇಳಿಕೊಳ್ಳುವಂತಹ ಒಂದೇ ಒಂದು ಬೃಹತ್ ಯೋಜನೆಯನ್ನು ಕಂಪ್ಲೇಟ್ ಮಾಡುವುದು ಅಕ್ಷರಶಃ ಅಸಾಧ್ಯ.

ಅಂದರೆ, ಡಿಕೆಶಿ ಈಗ ಓಡಬೇಕಾಗಿರುವುದು ಟೆಸ್ಟ್ ಮ್ಯಾಚ್ ಪಿಚ್ ಮೇಲಲ್ಲ, ಇದು ಟಿ-20ಯ ಡೆತ್ ಓವರ್‌ಗಳು! ಪ್ರತಿ ಬಾಲ್‌ಗೂ ಸಿಕ್ಸ್ ಹೊಡೆಯಲೇಬೇಕಾದ ಅನಿವಾರ್ಯತೆ ಅವರ ಮುಂದಿದೆ.

ಖಾಲಿ ಖಜಾನೆ ಮತ್ತು “ಗ್ಯಾರಂಟಿ” ಎಂಬ ರಾಕ್ಷಸ!
ಸಮಯದ ಅಭಾವ ಒಂದು ಕಡೆಯಾದರೆ, ಅದಕ್ಕಿಂತ ದೊಡ್ಡ ಶತ್ರು ಡಿಕೆಶಿಯವರ ಕಚೇರಿಯ ಒಳಗೇ ಇದೆ. ಅದೇ ಆರ್ಥಿಕ ಇಲಾಖೆ! ನೀವು ಎಷ್ಟೇ ದೊಡ್ಡ ಟ್ರಬಲ್ ಶೂಟರ್ ಆಗಿರಬಹುದು, ಪವರ್‌ಫುಲ್ ಮ್ಯಾನೇಜ‌ರ್ ಆಗಿರಬಹುದು… ಆದರೆ ಜೇಬಲ್ಲಿ ಕಾಸಿಲ್ಲ ಅಂದರೆ ಯಾರು ತಾನೇ ಏನು ಮಾಡಲು ಸಾಧ್ಯ?

ಇವತ್ತು ಕರ್ನಾಟಕದ ಬಜೆಟ್ ಗಾತ್ರ ಸುಮಾರು 3.7 ಲಕ್ಷ ಕೋಟಿ. ಅದರಲ್ಲಿ ಬರೋಬ್ಬರಿ 50 ರಿಂದ 60 ಸಾವಿರ ಕೋಟಿ ರೂಪಾಯಿಗಳು ಈ ಐದು ಗ್ಯಾರಂಟಿಗಳಿಗೆ ಸ್ವಾಹಾ ಆಗುತ್ತಿದೆ. ಇನ್ನು ಸರ್ಕಾರಿ ನೌಕರರ ಸಂಬಳ, ಪಿಂಚಣಿ, ಹಳೇ ಸಾಲದ ಬಡ್ಡಿ ತೀರಿಸುವುದರಲ್ಲೇ ಸರ್ಕಾರದ ಮುಕ್ಕಾಲು ಪಾಲು ಆದಾಯ ಖಾಲಿಯಾಗುತ್ತಿದೆ. ಇಲ್ಲೇ ಇರೋದು ಅಸಲಿ ಟ್ವಿಸ್ಟ್! ಶಾಸಕರು ತಮ್ಮ ಕ್ಷೇತ್ರಕ್ಕೆ ರಸ್ತೆ ಮಾಡಬೇಕು, ಚರಂಡಿ ಕಟ್ಟಬೇಕು, ಆಸ್ಪತ್ರೆ ಕಟ್ಟಬೇಕು ಅಂತ ಸಿಎಂ ಬಳಿ ಬಂದರೆ, ಸಿಎಂ ಕೊಡುವ ಉತ್ತರ ಒಂದೇ – “ದುಡ್ಡಿಲ್ಲ, ಕಾಯ್ತಾ ಇರಿ!”

ಈಗ ಡಿಕೆಶಿ ಮುಂದಿರುವ ಆಯ್ಕೆಗಳೇನು?

  • ಆಯ್ಕೆ 1: ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದು ಅಥವಾ ಕಂಡೀಷನ್ ಹಾಕಿ ಕಡಿತಗೊಳಿಸುವುದು. ಆದರೆ ಹಾಗೆ ಮಾಡಿದರೆ, “ಡಿಕೆಶಿ ಬಂದು ನಮ್ಮ ಅನ್ನ ಕಿತ್ತುಕೊಂಡ” ಅಂತ ಜನ ಹಿಡಿಶಾಪ ಹಾಕುತ್ತಾರೆ. 2028ರ ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತೆ ಆಗುತ್ತದೆ.
  • ಆಯ್ಕೆ 2: ಅಭಿವೃದ್ಧಿಯನ್ನು ಸಂಪೂರ್ಣವಾಗಿ ಬದಿಗೊತ್ತಿ, ಸಾಲದ ಮೇಲೆ ಸಾಲ ಮಾಡಿ ಗ್ಯಾರಂಟಿ ಮುಂದುವರಿಸುವುದು. ಆಗ ವಿರೋಧ ಪಕ್ಷಗಳು, “ನೋಡಿ, ಇವರಿಂದ ರಾಜ್ಯ ದಿವಾಳಿಯಾಯ್ತು” ಅಂತ ಕ್ಯಾಂಪೇನ್ ಶುರು ಮಾಡುತ್ತವೆ.

ಸಿದ್ದರಾಮಯ್ಯನವರು ಬಹಳ ಚಾಣಾಕ್ಷರು. ಗ್ಯಾರಂಟಿಗಳನ್ನು ತಂದು ‘ಜನನಾಯಕ’ ಅನ್ನಿಸಿಕೊಂಡು, ಖಜಾನೆ ಖಾಲಿಯಾದ ಟೈಮ್‌ಗೆ, ಎಲ್ಲಾ ಜವಾಬ್ದಾರಿಗಳನ್ನು ಡಿ.ಕೆ.ಶಿ. ಅವರ ತಲೆಯ ಮೇಲೆ ಹೊರಿಸಿ ಎಕ್ಸಿಟ್ ಆಗಿಬಿಟ್ಟರು. ಈಗ ಖಾಲಿ ಪಾತ್ರೆಯನ್ನು ಇಟ್ಟುಕೊಂಡು ಮೃಷ್ಟಾನ್ನ ಭೋಜನ ಬಡಿಸುವ ಜವಾಬ್ದಾರಿ ಡಿಕೆಶಿಯವರದ್ದು! ಇದೊಂದು ಪಕ್ಕಾ ರಾಜಕೀಯ ಚಕ್ರವ್ಯೂಹ. ಬಹುಶಃ ಅವರ ಅರಿವು ಡಿಕೆಶಿ ಅವರಿಗೂ ಇದ್ದೇ ಇರುತ್ತದೆ.

ಒಳೇಟುಗಳು ಮತ್ತು ಅತೃಪ್ತರ ಬ್ಲಾಕ್ ಮೇಲ್ ಪಾಲಿಟಿಕ್ಸ್‌
ಡಿಕೆಶಿಗೆ ಅಸಲಿ ವಿರೋಧ ಪಕ್ಷ ಇರೋದು ಆರ್.ಎಸ್.ಎಸ್ ನಲ್ಲೋ ಅಥವಾ ಜೆಡಿಎಸ್ ಕಚೇರಿಯಲ್ಲೋ ಅಲ್ಲ… ಅದು ಇರೋದು ಸ್ವತಃ ಕಾಂಗ್ರೆಸ್ ಭವನದ ಒಳಗೆ!

ನಿಮಗೆ ನೆನಪಿರಲಿ, ಕಾಂಗ್ರೆಸ್‌ನಲ್ಲಿರುವ 135ಕ್ಕೂ ಹೆಚ್ಚು ಶಾಸಕರಲ್ಲಿ, ಬಹುಪಾಲು ಶಾಸಕರು ಸಿದ್ದರಾಮಯ್ಯನವರ ಕ್ಯಾಂಪ್‌ನವರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಈ ಶಾಸಕರು ಸುಮ್ಮನಿದ್ದರು. ಈಗ ಡಿಕೆಶಿ ಗದ್ದುಗೆ ಏರಿದ ತಕ್ಷಣ ಇವರೆಲ್ಲಾ ಸನ್ಯಾಸಿಗಳ ತರಹ ಸುಮ್ಮನೆ ಕೂರುತ್ತಾರಾ? ಚಾನ್ನೇ ಇಲ್ಲ!

ಮಂತ್ರಿಗಿರಿಗಾಗಿ ಕಿತ್ತಾಟ, ನಿಗಮ ಮಂಡಳಿಗಳಿಗಾಗಿ ಪೈಪೋಟಿ ಈಗ ತಾರಕಕ್ಕೇರುತ್ತದೆ. “ನಮಗೆ ಬೇಕಾದ ಖಾತೆ ಕೊಡದಿದ್ದರೆ ನಾವು ಬಂಡಾಯ ಏಳುತ್ತೇವೆ” ಅಂತ ಬೆದರಿಸುವ ಬ್ಲಾಕ್ ಮೇಲ್ ಪಾಲಿಟಿಕ್ಸ್ ಶುರುವಾಗುತ್ತದೆ. ಡಿಕೆಶಿಯವರ ಕಾರ್ಯಶೈಲಿ ಸಿದ್ದರಾಮಯ್ಯನವರ ತರಹ ಸಾಫ್ಟ್ ಅಲ್ಲ. ಅವರು ಪಕ್ಕಾ ಕಾರ್ಪೊರೇಟ್ ಸಿಇಒ ತರಹ, ‘ನಾನು ಹೇಳಿದ್ದೇ ಫೈನಲ್ ಎನ್ನುವ ಮೈಕ್ರೋ-ಮ್ಯಾನೇಜರ್.

ಇದು ಈ ಹಿರಿಯ ಶಾಸಕರಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ಶಾಸಕರು ಮತ್ತು ಸಿಎಂ ನಡುವಿನ ಇಂತಹ ಸಣ್ಣಪುಟ್ಟ ಇಗೋ ಕ್ಯಾಶ್‌ಗಳೇ ನಾಳೆ ಬೃಹತ್ ಬಂಡಾಯವಾಗಿ ಸ್ಫೋಟಗೊಳ್ಳುವ ಅಪಾಯವಿದೆ. ಈ ಅತೃಪ್ತರನ್ನು ನಿಭಾಯಿಸುವ ಟ್ರಬಲ್ ಶೂಟಿಂಗ್‌ನಲ್ಲೇ ಡಿಕೆಶಿಯವರ ಅರ್ಧ ಎನರ್ಜಿ ಖರ್ಚಾಗಿ ಹೋದರೆ ಅಚ್ಚರಿಯಿಲ್ಲ.

‘ಗೌಡ’ ಪ್ರೈಡ್ ಮತ್ತು ಕಂಬಾಲಪಲ್ಲಿಯ ಭೂತ!
ಈಗ ಅತಿ ಮುಖ್ಯವಾದ, ಆದರೆ ಯಾರೂ ಓಪನ್ ಆಗಿ ಚರ್ಚೆ ಮಾಡದ ಒಂದು ವಿಚಾರದ ಬಗ್ಗೆ ಮಾತಾಡೋಣ. ಅದೇ ಜಾತಿ ಲೆಕ್ಕಾಚಾರ ಮತ್ತು ಸಾಮಾಜಿಕ ಸಮತೋಲನ. ಡಿಕೆಶಿ ಸಿಎಂ ಆಗಿದ್ದಾರೆ ಅಂದರೆ, ಅದು ಕೇವಲ ಒಬ್ಬ ಕಾಂಗ್ರೆಸ್ ನಾಯಕನ ಗೆಲುವಲ್ಲ. ಅದು ಇಡೀ ಒಕ್ಕಲಿಗ ಸಮುದಾಯದ ಎರಡು ದಶಕಗಳ ಹಂಬಲ. ಎಸ್.ಎಂ. ಕೃಷ್ಣ ನಂತರ ನಮ್ಮ ಸಮುದಾಯದ ಒಬ್ಬ ಪವರ್‌ಫುಲ್ ಲೀಡ‌ರ್ ಸಿಎಂ ಆದರು ಎನ್ನುವ ಹೆಮ್ಮೆ ಆ ಸಮುದಾಯಕ್ಕಿದೆ. ಅದು ತಪ್ಪಲ್ಲ.

ಆದರೆ, ಅಧಿಕಾರದ ಕೇಂದ್ರ ಒಂದು ನಿರ್ದಿಷ್ಟ ಸಮುದಾಯದ ಕೈಗೆ ಹೋದಾಗ, ಸ್ಥಳೀಯ ಮಟ್ಟದಲ್ಲಿ ಏನಾಗುತ್ತದೆ ಎನ್ನುವುದನ್ನು ನಾವು ಇತಿಹಾಸದಿಂದ ಕಲಿಯಬೇಕಿದೆ. ಅಧಿಕಾರದ ಮದ ಸ್ಥಳೀಯ ಪುಡಾರಿಗಳ ನೆತ್ತಿಗೇರಿದರೆ ಏನಾಗುತ್ತದೆ? 2000ನೇ ಇಸವಿಯಲ್ಲಿ ಕೋಲಾರ ಜಿಲ್ಲೆಯ ಕಂಬಾಲಪಲ್ಲಿಯಲ್ಲಿ ದಲಿತರನ್ನು ಜೀವಂತ ದಹಿಸಿದ ಆ ಭೀಕರ ಘಟನೆ ನಮ್ಮ ಕಣ್ಣ ಮುಂದಿದೆ. ಆಗಲೂ ರಾಜ್ಯದಲ್ಲಿ ಎಸ್.ಎಂ. ಕೃಷ್ಣ ಅವರದ್ದೇ ಸರ್ಕಾರವಿತ್ತು! ಪ್ರಬಲ ಜಾತಿಗಳ ದರ್ಪ ಮಿತಿಮೀರಿದಾಗ, ವ್ಯವಸ್ಥೆ ಕಣ್ಣುಮುಚ್ಚಿ ಕೂತಾಗ ಇಂತಹ ಮಾರಣಹೋಮಗಳು ನಡೆಯುತ್ತವೆ.

ಈಗ 2026! ಕಂಬಾಲಪಲ್ಲಿಯ ಕಾಲಕ್ಕೂ ಇಂದಿಗೂ ಅಜಗಜಾಂತರ ವ್ಯತ್ಯಾಸವಿದೆ. ಈಗಿನ ಯುವಜನತೆ ಸುಮ್ಮನೆ ಕೂರುವವರಲ್ಲ. ಕೂರುವವರಲ್ಲ. ದಲಿತ ಸಂಘಟನೆಗಳು, ಪ್ರಗತಿಪರರು ಈಗ ಹಿಂದೆಂದಿಗಿಂತಲೂ ಹೆಚ್ಚು ಜಾಗೃತರಾಗಿದ್ದಾರೆ. ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಇದೆ, ಎಕ್ಸ್ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳಂತಹ ಅಸ್ತ್ರಗಳಿವೆ. ರಾಜ್ಯದ ಯಾವುದೇ ಮೂಲೆಯಲ್ಲಿ, ಯಾವುದೇ ಒಂದು ಹಿಂದುಳಿದ ವರ್ಗದ ಅಥವಾ ದಲಿತನ ಮೇಲೆ ಸಣ್ಣದೊಂದು ದೌರ್ಜನ್ಯ ನಡೆದರೂ, ಆ ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗುತ್ತದೆ. “ಇದು ಒಕ್ಕಲಿಗರ ದರ್ಪ, ಡಿಕೆಶಿಯವರ ಕುಮ್ಮಕ್ಕು” ಅಂತ ಒಂದೇ ನಿಮಿಷದಲ್ಲಿ ನ್ಯರೇಟಿವ್ ಸೆಟ್ ಆಗಿಬಿಡುತ್ತದೆ!

ಈ ಜಾತಿ ಸಂಘರ್ಷದ ಕಿಡಿಯನ್ನು ಆರಿಸುವುದು ಡಿಕೆಶಿ ಮುಂದಿರುವ ಅತಿ ದೊಡ್ಡ ಅಗ್ನಿಪರೀಕ್ಷೆ. ತಾನು ಕೇವಲ ಒಕ್ಕಲಿಗರ ನಾಯಕನಲ್ಲ, ಇಡೀ ರಾಜ್ಯದ ನಾಯಕ ಎಂದು ಅವರು ಸಾಬೀತುಪಡಿಸಲೇಬೇಕು. ದಲಿತ ಮತ್ತು ಅಹಿಂದ ವರ್ಗದ ಮತಗಳಿಲ್ಲದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇರಲಿಲ್ಲ ಎನ್ನುವ ಸತ್ಯ ಅವರಿಗೆ ಗೊತ್ತಿದೆ. ಹೀಗಾಗಿ, ಪೊಲೀಸ್ ಇಲಾಖೆಯನ್ನು ಸಂಪೂರ್ಣವಾಗಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಬಿಡುವುದು, ತಪ್ಪು ಮಾಡಿದರೆ ತಮ್ಮದೇ: ತಮ್ಮದೇ ಜಾತಿಯವರಾದರೂ ನಿರ್ದಾಕ್ಷಿಣ್ಯವಾಗಿ ಜೈಲಿಗಟ್ಟುವ ಇಚ್ಛಾಶಕ್ತಿಯನ್ನು ಡಿಕೆಶಿ ತೋರಲೇಬೇಕು. ಇಲ್ಲದಿದ್ದರೆ, ಸಿದ್ದರಾಮಯ್ಯನವರು ಕಟ್ಟಿದ ಅಹಿಂದ ವೋಟ್ ಬ್ಯಾಂಕ್ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮರ್ಮಾಘಾತ ನೀಡುವುದು ಗ್ಯಾರಂಟಿ.

2028ರ ಮಾಡು ಇಲ್ಲವೇ ಮಡಿ!
ಇದೆಲ್ಲದರ ಲೆಕ್ಕಾಚಾರ ಬಂದು ನಿಲ್ಲುವುದು ಎಲ್ಲಿಗೆ? ಅದೇ 2028ರ ಮಹಾಚುನಾವಣೆಗೆ. ಬೀದಿಬೀದಿಯಲ್ಲಿ ಈಗಲೇ ಒಂದು ಮಾತು ಕೇಳಿಬರುತ್ತಿದೆ… “ಕಾಂಗ್ರೆಸ್ ಮುಂದಿನ ಬಾರಿ ಅಧಿಕಾರಕ್ಕೆ ಬರೋದು ಭಾರಿ ಡೌಟು!”

ಆಡಳಿತ ವಿರೋಧಿ ಅಲೆ (Anti-incumbency) ಈಗಲೇ ಶುರುವಾಗಿದೆ. ಈ ಅಲೆಯನ್ನು ತಡೆಯಲು ಡಿಕೆಶಿ ಬಳಿ ಇರುವ ಏಕೈಕ ಅಸ್ತ್ರಅಂದರೆ ಅವರ ‘ಸಂಘಟನಾ ಚಾತುರ್ಯ’. ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವುದು, ಕಾರ್ಯಕರ್ತರಿಗೆ ಬೂಸ್ಟ್ ಕೊಡುವುದು, ಚುನಾವಣಾ ರಣತಂತ್ರ ಹೆಣೆಯುವುದರಲ್ಲಿ ಡಿಕೆಶಿಯನ್ನು ಮೀರಿಸುವವರಿಲ್ಲ. ಆದರೆ, ಪಾರ್ಟಿ ಆಫೀಸ್‌ನಲ್ಲಿ ಕೂತು ಪ್ಲಾನ್ ಮಾಡುವುದು ಬೇರೆ, ಸಿಎಂ ಸೀಟಲ್ಲಿ ಕೂತು ಇಡೀ ರಾಜ್ಯವನ್ನು ಇಡೀ ರಾಜ್ಯವನ್ನು ಮ್ಯಾನೇಜ್ ಮಾಡುವುದು ಬೇರೆ.

ಕೇವಲ ‘ಮ್ಯಾನೇಜೆಂಟ್’ ನಿಂದ ಚುನಾವಣೆ ಗೆಲ್ಲಲು ಆಗುವುದಿಲ್ಲ. ಜನರಿಗೆ ಕುಡಿಯೋಕೆ ನೀರು ಬೇಕು, ಓಡಾಡೋಕೆ ರಸ್ತೆ ಬೇಕು, ಯುವಕರಿಗೆ ಉದ್ಯೋಗ ಬೇಕು. ಇವೆಲ್ಲವನ್ನು ಈ 18 ತಿಂಗಳಲ್ಲಿ, ಖಾಲಿ ಖಜಾನೆಯನ್ನು ಇಟ್ಟುಕೊಂಡು ಡಿಕೆಶಿ ಹೇಗೆ ಸಾಧಿಸುತ್ತಾರೆ?

ಇದು ಡಿಕೆ ಶಿವಕುಮಾರ್ ಪಾಲಿನ ಅಂತಿಮ ಹೋರಾಟ. ಇದು ಮಾಡು ಇಲ್ಲವೇ ಮಡಿ ಪಂದ್ಯ! ಇಷ್ಟು ದಿನ ಟ್ರಬಲ್ ಶೂಟ‌ರ್ ಆಗಿ ಬೇರೆಯವರ ಸಂಕಷ್ಟಗಳನ್ನು ಪರಿಹರಿಸಿದವರು, ಈಗ ತಮ್ಮದೇ ಕುರ್ಚಿಗೆ, ತಮ್ಮದೇ ಸರ್ಕಾರಕ್ಕೆ, ತಮ್ಮದೇ ಪಕ್ಷಕ್ಕೆ ಎದುರಾಗಿರುವ ಟ್ರಬಲ್‌ಗಳನ್ನು ಹೇಗೆ ಶೂಟ್ ಮಾಡ್ತಾರೆ? ಅವರು ಈ ಸವಾಲುಗಳನ್ನು ಮೀರಿ ನಿಂತರೆ, ಇತಿಹಾಸ ಅವರನ್ನು ಒಬ್ಬ ‘ಮಾಸ್ ಲೀಡರ್’ ಆಗಿ ನೆನಪಿಟ್ಟುಕೊಳ್ಳುತ್ತದೆ. ಎಡವಿದರೆ…ಕಾಂಗ್ರೆಸ್ ಮತ್ತೊಂದು ದಶಕಗಳ ಕಾಲ ವಿರೋಧ ಪಕ್ಷದ ಸಾಲಿನಲ್ಲಿ ಕೂರಬೇಕಾಗುತ್ತದೆ. ನಿಮ್ಮ ಪ್ರಕಾರ ಡಿಕೆಶಿ ಈ ಚಕ್ರವ್ಯೂಹವನ್ನು ಭೇದಿಸುತ್ತಾರಾ? ಅಥವಾ ಈ ರಾಜಕೀಯ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಾರಾ? ಇದು ಕೇವಲ ರಾಜಕಾರಣದ ಆಟವಲ್ಲ. ಇದು ಕರ್ನಾಟಕದ ಭವಿಷ್ಯದ ಪ್ರಶ್ನೆ!

ಸಿದ್ದರಾಮಯ್ಯನವರು ಬಹಳ ಚಾಣಾಕ್ಷರು. ಗ್ಯಾರಂಟಿಗಳನ್ನು ತಂದು 'ಜನನಾಯಕ' ಅನ್ನಿಸಿಕೊಂಡು, ಖಜಾನೆ ಖಾಲಿಯಾದ ಟೈಮ್‌ಗೆ, ಎಲ್ಲಾ ಜವಾಬ್ದಾರಿಗಳನ್ನು ಡಿ.ಕೆ.ಶಿ. ಅವರ ತಲೆಯ ಮೇಲೆ ಹೊರಿಸಿ ಎಕ್ಸಿಟ್ ಆಗಿಬಿಟ್ಟರು. ಈಗೆ ಖಾಲಿ ಪಾತ್ರೆಯನ್ನು ಇಟ್ಟುಕೊಂಡು ಮೃಷ್ಟಾನ್ನ ಭೋಜನ ಬಡಿಸುವ ಜವಾಬ್ದಾರಿ ಡಿಕೆಶಿಯವರದ್ದು! ಇದೊಂದು ಪಕ್ಕಾ ರಾಜಕೀಯ ಚಕ್ರವ್ಯೂಹ. ಬಹುಶಃ ಅವರ ಅರಿವು ಡಿಕೆಶಿ ಅವರಿಗೂ ಇದ್ದೇ ಇರುತ್ತದೆ.

Related Articles

ಇತ್ತೀಚಿನ ಸುದ್ದಿಗಳು