ಜೆಇಇ ಅಡ್ವಾನ್ಸ್‌ಡ್ ಪರೀಕ್ಷಾ ನಿರ್ವಹಣೆಯಲ್ಲಿ ಗಂಭೀರ ಲೋಪ: 1.79 ಲಕ್ಷ ಅಭ್ಯರ್ಥಿಗಳ ವಿವರಗಳು ಆನ್‌ಲೈನ್‌ನಲ್ಲಿ ಬಹಿರಂಗ

ಇನ್ನೊಂದು ಪ್ರಮುಖ ಪರೀಕ್ಷೆಯ ನಿರ್ವಹಣೆಯಲ್ಲಿ ಗಂಭೀರ ವೈಫಲ್ಯ ಎದುರಾಗಿದ್ದು, ಜಿಇಇ ಅಡ್ವಾನ್ಸ್‌ಡ್ (JEE Advanced 2026) ಅಭ್ಯರ್ಥಿಗಳ ಅತ್ಯಂತ ಸೂಕ್ಷ್ಮ ವಿವರಗಳು ಆನ್‌ಲೈನ್‌ನಲ್ಲಿ ಬಹಿರಂಗಗೊಂಡಿವೆ. ಸಿಬಿಎಸ್‌ಇ 12ನೇ ತರಗತಿ ಪರೀಕ್ಷಾ ವ್ಯವಸ್ಥೆಯ ಗೊಂದಲಗಳಿಂದ ವಿದ್ಯಾರ್ಥಿಗಳು ಇನ್ನು ಹೊರಬರುವ ಮುನ್ನವೇ ಈ ನೂತನ ತಾಂತ್ರಿಕ ನಿರ್ಲಕ್ಷ್ಯದ ಘಟನೆ ಬೆಳಕಿಗೆ ಬಂದಿದೆ.
ಕಳೆದ ವಾರವಷ್ಟೇ ಪ್ರಕಟಗೊಂಡ ಜಿಇಇ ಅಡ್ವಾನ್ಸ್‌ಡ್ ಫಲಿತಾಂಶಗಳಿಗೆ ಸಂಬಂಧಿಸಿದಂತೆ ಸುಮಾರು 1.79 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಫಲಿತಾಂಶದ ದಾಖಲೆಗಳು ಹಾಗೂ 1.87 ಲಕ್ಷ ಅಭ್ಯರ್ಥಿಗಳ ಅಡ್ಮಿಟ್ ಕಾರ್ಡ್ (ಪ್ರವೇಶ ಪತ್ರ) ಪಿಡಿಎಫ್‌ಗಳು ಯಾವುದೇ ಅಧಿಕೃತ ದೃಢೀಕರಣ ಅಥವಾ ಪಾಸ್‌ವರ್ಡ್ ಇಲ್ಲದೆಯೇ ಆನ್‌ಲೈನ್‌ನಲ್ಲಿ ಮುಕ್ತವಾಗಿ ಲಭ್ಯವಿರುವುದು ಪತ್ತೆಯಾಗಿದೆ.

ದುಬೈ ಮೂಲದ ಸೈಬರ್ ಭದ್ರತಾ ಸಂಶೋಧಕರೊಬ್ಬರು ಈ ಗಂಭೀರ ಲೋಪವನ್ನು ಸಾಮಾಜಿಕ ಮಾಧ್ಯಮ ಎಕ್ಸ್ (X) ಮುಖಾಂತರ ಬಹಿರಂಗಪಡಿಸಿ, ನಿರ್ವಹಣಾ ಸಂಸ್ಥೆಯ ಗಮನಕ್ಕೆ ತಂದಿದ್ದಾರೆ.
ಬಹಿರಂಗಗೊಂಡ ದತ್ತಾಂಶದಲ್ಲಿ ಅಭ್ಯರ್ಥಿಗಳ ಹೆಸರುಗಳು, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆಗಳು, ವಿಷಯವಾರು ಅಂಕಗಳು ಮತ್ತು ಪಡೆದ ರಾಂಕ್‌ಗಳೂ ಸೇರಿದಂತೆ ಎಲ್ಲಾ ಖಾಸಗಿ ವಿವರಗಳು ಲಭ್ಯವಿವೆ. ಈ ವರ್ಷದ ಪರೀಕ್ಷೆಯನ್ನು ಆಯೋಜಿಸಿದ್ದ ಐಐಟಿ ರೂರ್ಕಿ (IIT Roorkee) ಸಂಸ್ಥೆಯು ಈ ದತ್ತಾಂಶ ಸೋರಿಕೆಯಾಗಿರುವುದನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ.

ವ್ಯವಸ್ಥೆಯಲ್ಲಿದ್ದ ಕ್ಲೌಡ್ ಸ್ಟೋರೇಜ್‌ನ ತಪ್ಪು ಕಾನ್ಫಿಗರೇಶನ್ (Cloud Storage Misconfiguration) ಕಾರಣದಿಂದಾಗಿ ಈ ತಾಂತ್ರಿಕ ದೋಷ ಸಂಭವಿಸಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಆದಾಗ್ಯೂ, ಬಹಿರಂಗಗೊಂಡ ದತ್ತಾಂಶವು ಕೇವಲ ಓದಲು ಮಾತ್ರ ಸಾಧ್ಯವಿರುವ (Read-Only) ರೂಪದಲ್ಲಿದ್ದ ಕಾರಣ, ಯಾವುದೇ ವಿದ್ಯಾರ್ಥಿಯ ಅಧಿಕೃತ ಅಂಕಗಳನ್ನು ಅಥವಾ ರಾಂಕ್ ದಾಖಲೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಐಐಟಿ ರೂರ್ಕಿ ತಿಳಿಸಿದೆ. ಸದ್ಯ ಈ ಭದ್ರತಾ ಲೋಪವನ್ನು ಸರಿಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು