ಅಮೆರಿಕ–ಇರಾನ್ ಶಾಂತಿ ಒಪ್ಪಂದದ ಘೋಷಣೆ ಬೆನ್ನಲ್ಲೇ ಕಚ್ಛಾ ತೈಲ ಬೆಲೆಯಲ್ಲಿ ಭಾರಿ ಕುಸಿತ

ವಾಷಿಂಗ್ಟನ್/ಟೆಹ್ರಾನ್ : ಹಲವು ತಿಂಗಳುಗಳಿಂದ ಉದ್ವಿಗ್ನತೆಗೆ ಕಾರಣವಾಗಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡುವ ಮಹತ್ವದ ಶಾಂತಿ ಒಪ್ಪಂದ ಪ್ರಕಟವಾಗಿದ್ದು, ಇದರ ಪರಿಣಾಮವಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ತೀವ್ರ ಕುಸಿತ ಕಂಡಿವೆ.

ಉಭಯ ರಾಷ್ಟ್ರಗಳು ಮಿಲಿಟರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಹಾಗೂ ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿ ಸ್ಥಾಪನೆಗೆ ಒಪ್ಪಿಗೆ ಸೂಚಿಸಿರುವುದಾಗಿ ವರದಿಯಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಏಷ್ಯಾದ ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ (WTI) ಕಚ್ಚಾ ತೈಲದ ಬೆಲೆ ಶೇ.4ಕ್ಕೂ ಹೆಚ್ಚು ಕುಸಿದು ಪ್ರತಿ ಬ್ಯಾರೆಲ್‌ಗೆ 81.15 ಡಾಲರ್‌ಗೆ ಇಳಿಕೆಯಾಗಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳಿಗೆ ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನ, ಲೆಬನಾನ್ ಸೇರಿದಂತೆ ಪ್ರದೇಶದ ವಿವಿಧ ಸಂಘರ್ಷಗಳಿಗೆ “ತಕ್ಷಣದ ಮತ್ತು ಶಾಶ್ವತ” ಅಂತ್ಯ ತರಲು ಒಪ್ಪಂದ ರೂಪುಗೊಂಡಿದೆ ಎಂದು ಘೋಷಿಸಿದೆ. ಈ ಘೋಷಣೆಯ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಗಳಲ್ಲಿ ಹೂಡಿಕೆದಾರರ ವಿಶ್ವಾಸ ಹೆಚ್ಚಿದ್ದು, ಹಲವು ದೇಶಗಳ ಷೇರುಪೇಟೆಗಳಲ್ಲಿ ಏರಿಕೆ ದಾಖಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಂತಿ ಒಪ್ಪಂದವನ್ನು ಅಧಿಕೃತವಾಗಿ ದೃಢಪಡಿಸಿದ್ದು, ಜಾಗತಿಕ ಇಂಧನ ಪೂರೈಕೆಗೆ ಅತ್ಯಂತ ಮಹತ್ವದ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯನ್ನು ಮರುತೆರೆಯುವುದಾಗಿ ತಿಳಿಸಿದ್ದಾರೆ. ವಿಶ್ವದ ಒಟ್ಟು ಕಚ್ಚಾ ತೈಲ ಸಾಗಣೆಯ ಸುಮಾರು 20 ಪ್ರತಿಶತ ಈ ಜಲಸಂಧಿಯ ಮೂಲಕವೇ ನಡೆಯುತ್ತಿರುವುದರಿಂದ, ಈ ನಿರ್ಧಾರ ಜಾಗತಿಕ ಇಂಧನ ಮಾರುಕಟ್ಟೆಗೆ ಮಹತ್ವದ ಉತ್ತೇಜನ ನೀಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತೈಲ ಪೂರೈಕೆಯ ಮೇಲಿನ ಅನಿಶ್ಚಿತತೆ ಕಡಿಮೆಯಾಗಿರುವುದರಿಂದ ಇಂಧನ ಬೆಲೆಗಳ ಮೇಲಿನ ಒತ್ತಡ ಇಳಿಕೆಯಾಗುವ ನಿರೀಕ್ಷೆ ವ್ಯಕ್ತವಾಗಿದ್ದು, ಜಾಗತಿಕ ಆರ್ಥಿಕತೆಯ ಮೇಲೂ ಇದರ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ ಶಾಂತಿ ಒಪ್ಪಂದದ ಸಂಪೂರ್ಣ ಷರತ್ತುಗಳು ಮತ್ತು ಅನುಷ್ಠಾನದ ವಿವರಗಳು ಇನ್ನೂ ಬಹಿರಂಗವಾಗಬೇಕಿರುವುದರಿಂದ ಮುಂದಿನ ಬೆಳವಣಿಗೆಗಳತ್ತ ವಿಶ್ವದ ಗಮನ ನೆಟ್ಟಿದೆ.

Related Articles

ಇತ್ತೀಚಿನ ಸುದ್ದಿಗಳು