ಬಡವರು ಈ ನಗರವನ್ನು ಸಿಂಗಾಪುರ್‌ ಮಾಡಲು ಬಿಡುತ್ತಿಲ್ಲ -ಅಲ್ಲವೇ?

ಮಂಗಳೂರಿನಲ್ಲಿ ಈ ಹಿಂದೆ ಬೀದಿಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿದರು. ಆಮೇಲೆ, ಅವರನ್ನು ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣದ ಪಕ್ಕ ಸಾಲಾಗಿ ಅಂಗಡಿ ಹಾಕಿ ಕೂರಿಸಿದರು. ಎರಡು ವರ್ಷಗಳ ಹಿಂದೆ ನಾನು ಹೋಗಿದ್ದಾಗ, ಅವರ ಗೋಳು ಕೇಳಲಾಗದು!
ಅವರಿಗೆ ಕಟ್ಟಿಕೊಟ್ಟಿರುವ ಗೂಡಿನಂತಹ ಅಂಗಡಿಯನ್ನು ನೋಡಿದರೆ, ನಮ್ಮ ಮನೆಯ ಕಕ್ಕುಸು ಅದಕ್ಕಿಂತ ದೊಡ್ಡದಿದೆ. ಅದರಲ್ಲಿ ಅವರು ಅಡುಗೆ ಮಾಡಬೇಕು, ಸಾಮಾನುಗಳನ್ನು ಇಡಬೇಕು, ಕಬ್ಬಿನ ಜ್ಯೂಸ್‌ ಮಾಡುವ ದೊಡ್ಡ ಯಂತ್ರವನ್ನು ಇಡಬೇಕು…..!

ನ್ಯಾಯಾಲಯ ಹೇಳಿದೆ, ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಸಮರ್ಥನೆ ಮಾಡಿಕೊಳ್ಳುವ “ಪ್ರಗತಿಪರರು” ಸರ್ಕಾರದ ಮುಖವಾಣಿ ಆಗಿದ್ದು ಯಾವಾಗ? ನ್ಯಾಯಾಲಯ ಹೇಳಿದೆ ಎಂಬ ಕಾರಣವನ್ನು ಮುಂದಿಟ್ಟುಕೊಂಡರೆ, ಅದೇ ನ್ಯಾಯಾಲಯ ಕೊಟ್ಟಿರುವ ಎಲ್ಲಾ ತೀರ್ಪುಗಳನ್ನು ನಾವು ಒಪ್ಪಿಕೊಂಡಿದ್ದೇವೋ?
ನಾವು ಇರುವುದು ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಅಲ್ಲ, ನಾಯಕರ ಜೊತೆಗೆ ದಿನಬೆಳಗಾದರೆ ಪೋಟೋ ಹಾಕಿ ಅವರಿಗೆ “ಬಹುಪರಾಕ್”‌ ಹೇಳುವುದಕ್ಕೆ ಅಲ್ಲ. ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಆಗುವ ಅನ್ಯಾಯ ನಮ್ಮನ್ನು ತಟ್ಟದೆ, ನಮ್ಮ ದಿನ ಕಳೆಯಲು ಚಿಲ್ಲರೆ ಕಾಸಿಗೆ ಸರ್ಕಾರವನ್ನು ಸಮರ್ಥನೆ ಮಾಡುವುದಕ್ಕೆ ಕೂತರೆ ನಾವು ಎಷ್ಟರ ಮಟ್ಟಿಗೆ “ಪ್ರಾಮಾಣಿಕರು” ಎಂಬುದು ನಮಗೇ ನಾಚಿಕೆ ತರಿಸಬಲ್ಲ ಪ್ರಶ್ನೆಯಾಗುತ್ತದೆ!

ನನ್ನ ಆಫೀಸಿನ ಕೆಳಗೆ ಹತ್ತು-ಇಪ್ಪತ್ತು ಪ್ಲಾಸ್ಟೀಕ್‌ ಆಟಿಕೆಗಳನ್ನು ಇಟ್ಟುಕೊಂಡು ಮಾರುವ ಅಜ್ಜ ಒಬ್ಬರಿದ್ದಾರೆ. ಉತ್ತರ ಕರ್ನಾಟಕ ಕಡೆಯವರು. ಪಕ್ಕದ ದಾವಣಗೆರೆ ಬೆಣ್ಣೆ ದೋಸೆ ರೆಸ್ಟೋರೆಂಟಿಗೆ ಬರುವ ಪ್ರತಿಯೊಬ್ಬ ಗ್ರಾಹಕನನ್ನು ಆಸೆಗಣ್ಣುಗಳಿಂದ ನೋಡುತ್ತಿರುತ್ತಾರೆ. ಅವರ ಮುಂದೆ ತಮ್ಮ ಕೈಯಲ್ಲಿರುವ ಆಟಿಕೆಗಳನ್ನು ಆಡಿ ತೋರಿಸುತ್ತಾರೆ. ಕೆಲವರು ಅವರಿಗೆ ಊಟ, ಚಹಾ, ತಿಂಡಿ ತೆಗೆದುಕೊಡುತ್ತಾರೆ. ಆಟಿಕೆಗಳನ್ನು ಮಾರಿ ಅವರ ಕೈಯಲ್ಲಿ 150-200 ಉಳಿಯಹುದು! ಇವರು ಇಡೀ ವ್ಯಾಪಾರಿ ವ್ಯವಸ್ಥೆಯಲ್ಲಿ ಅತ್ಯಂತ ಕೆಳಗೆ ಇರುವವರು.ಇಂತಹ ಎಷ್ಟು ಮಂದಿ ವ್ಯಾಪಾರಿಗಳು ರಸ್ತೆಬದಿಯಲ್ಲಿ ಇರಬಹುದು!

ನಾಲ್ಕೈದು ತಿಂಗಳ ಹಿಂದಿನ ಘಟನೆ ಇದು. ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿ ಹೂಗಳನ್ನು ಮಾರುವವರನ್ನು ನೋಡಿರಬಹುದು. ಮಕ್ಕಳು ಹೆಚ್ಚಾಗಿ ಇರುತ್ತಾರೆ. ಅವರ ತಾಯಂದಿರು ಹೂಗಳ ಬೊಕ್ಕೆಗಳನ್ನು ಮಾಡುತ್ತಾ, ತಿಂಗಳ ಹಿಂದೆ ಹುಟ್ಟಿದ ಶಿಶುಗಳನ್ನು ನೋಡಿಕೊಳ್ಳುತ್ತಾ ಮೂಲೆಯಲ್ಲಿ ಇರುತ್ತಾರೆ. ಈ ಮಕ್ಕಳು ಅಲ್ಲಿಗೆ ಬರುವ ಜನರಲ್ಲಿ ಹೂಗಳನ್ನು ಖರೀದಿಸುವಂತೆ ಗೋಗರೆಯುತ್ತಾ ಇರುತ್ತಾರೆ. ಕೆಲವು ಮಕ್ಕಳು ಶಾಲೆಗೆ ಹೋಗುವವು, ರಾತ್ರಿ ಹೊತ್ತು ವ್ಯಾಪಾರ ಮಾಡುತ್ತವೆ.

ಒಂದು ದಿನ ಸಂಜೆ ಈ ಮಕ್ಕಳನ್ನು ಅಟ್ಟಾಡಿಸಿಕೊಂಡು ಓಡಿಸುವ, ಅವರ ಕೈಯಲ್ಲಿದ್ದ ಹೂಗಳನ್ನು ಕಿತ್ತೆಸೆಯುತ್ತಾ, ಅದೇ ಬುಟ್ಟಿಯಿಂದ ಓಡುತ್ತಿರುವ ಮಕ್ಕಳಿಗೆ ಭಾರಿಸುವ ಪೊಲೀಸ್‌ ಪೇದೆಯೊಬ್ಬರನ್ನು ನೋಡಿದೆ. ಪಿತ್ತ ಏರಿತು. ಆ ಮನುಷ್ಯನ ಕೈಯಿಂದ ಬುಟ್ಟಿಯನ್ನು ಎಸೆದುಕೊಂಡು, ಜೋರಾಗಿ ಮೈಯಲ್ಲಿ ಪ್ರೇತ ಬಂದಂತೆ ಕಿರುಚಿದೆ. ಅವನೂ ಹೆದರಿಸಲು ನೋಡಿದ. ಜನ ಸೇರಿದರು. “ಮಕ್ಕಳಿಗೆ ಹೇಗೆ ಹೊಡೆದಿರಿ? ಎಷ್ಟು ಧೈರ್ಯ ನಿಮಗೆ? ಕಬ್ಬನ್‌ ಪಾರ್ಕ್‌ ಪೊಲೀಸ್‌ ಸ್ಟೇಷನ್‌ ಅಲ್ವಾ? ಬನ್ನಿ ಹೋಗುವ!” ಎಂದೆ.
“ನಾನು ಹೊಡೆದಿಲ್ಲ!” ಎಂದು ಸಮರ್ಥಿಸಿಕೊಂಡ. ಕಣ್ಣಡಕ ಹಾಕಿದ ಮಾತ್ರಕ್ಕೆ ನನಗೆ ಕಣ್ಣು ಕಾಣುವುದಿಲ್ಲ ಎಂದರ್ಥವಲ್ಲ. ಹೊಡೆದದನ್ನು ನಾನು ನೋಡಿದ್ದೆ. ಸುತ್ತ ಇದ್ದ ಜನರೂ ನೋಡಿದ್ದರು. ಪೊಲೀಸ್‌ಗೇ “ಸ್ಟೇಷನ್‌ಗೆ ನಡಿರಿ!” ಎಂದೆ.

“ಸಾರ್‌, ಏನ್‌ ಮಾಡೋದು. ಇವರನ್ನೆಲ್ಲಾ ಇಲ್ಲಿ ವ್ಯಾಪಾರ ಮಾಡೋದಕ್ಕೆ ಬಿಡಬಾರದು ಅಂತ ಹೇಳಿದ್ದಾರೆ. ಅದಕ್ಕೆ ಓಡಿಸುತ್ತಿದ್ದೇವೆ. ಇಲ್ಲಿ ವ್ಯಾಪಾರ ಮಾಡೋ ಹಾಗೆ ಇಲ್ಲ! ಪ್ಲೀಸ್‌, ಸ್ಟೇಷನ್‌ಗೆ ಬನ್ನಿ. ನಮ್ಮ ದೊಡ್ಡ ಆಫೀಸರ್‌ ಜೊತೆಗೆ ಮಾತನಾಡಿ….”
ಹೀಗೆ ಆಯ್ತು!

ಬಹುಶಃ ಬೀದಿಬದಿ ವ್ಯಾಪಾರಿಗಳಿಂದ ಜನರಿಗೆ ಸಮಸ್ಯೆಯಾಗುತ್ತದೆ ಎನ್ನುವ “ಕವಿಕೋಗಿಲೆ ರಾಜರು, ವಿದ್ವಾನ್‌ಗಳು”, ಚರ್ಚ್‌ ಸ್ಟ್ರೀಟ್‌ನಲ್ಲಿ ಪಬ್‌ನಿಂದ ಹೊರಗೆ ವಾಲಾಡುತ್ತಾ ಬರುವವರಿಗೆ ಸಮಸ್ಯೆಯಾಗುತ್ತದೆ ಎಂದು ಸಮರ್ಥಿಸಿದರೂ ಅಚ್ಚರಿ ಇಲ್ಲ.

ಕೃಷ್ಣೇಭೈರೇ ಗೌಡರನ್ನು “ವೀರ-ಶೂರ-ಧೀರ” ಎನ್ನುವವರಿಗೆ ರಾಜ್ಯ ಸರ್ಕಾರದಿಂದ ಏನೆಲ್ಲಾ ಲಾಭಗಳಿವೆ ಎಂಬುದು ಗೊತ್ತಿಲ್ಲದ ಸಂಗತಿ ಅಲ್ಲ, ಅದನ್ನು ನಾವು ವೈಯಕ್ತಿಕವಾಗಿ ನೋಡಿದ್ದೇವೆ. ಆ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ ಎಂಬ ಮಾತ್ರಕ್ಕೆ ಏನೂ ಗೊತ್ತಾಗುವುದಿಲ್ಲ, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುವುದು ಗೊತ್ತಾಗಲ್ಲ ಎಂದು ಅರ್ಥ ಅಲ್ಲ.

ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ಮೊದಲು,

  1. ಅವರಿಗೆ ಕೊಡಬೇಕಾದ ಪರ್ಯಾಯ ಅಂಗಡಿ ವ್ಯವಸ್ಥೆಯನ್ನು ಈಗಾಗಲೇ ಮಾಡಿ ಕೊಟ್ಟಿದೆಯೇ?
  2. ವ್ಯವಸ್ಥೆ ಮಾಡದೆ ಒಕ್ಕಲೆಬ್ಬಿಸಿದರೆ, ಅವರಿಗೆ ವ್ಯವಸ್ಥೆ ಆಗುವ ವರೆಗಿನ ನಷ್ಟವನ್ನು ಸರ್ಕಾರ ಕೊಡುತ್ತದೆಯೇ?
  3. ಈ ಪರ್ಯಾಯ ಮಾರುಕಟ್ಟೆಯಲ್ಲಿ ಅದೇ ವ್ಯಾಪಾರಿಗಳಿಗೆ ಅವಕಾಶ ಸಿಗುತ್ತದೆ ಎಂದು ಯಾವ ಗ್ಯಾರಂಟಿ? ನಾನು ಹೋಗಿ ಒಣಮೀನು ಅಂಗಡಿ ಹಾಕಬಹುದಲ್ಲಾ? “ಕವಿಕೋಗಿಲೆಗಳು” ಲಾಬಿ ಮಾಡಿ ಅಲ್ಲಿ ತಮ್ಮ ಕವನ-ಕತೆಗಳನ್ನು ಮಾರಬಹುದಲ್ವಾ?
  4. ಪರ್ಯಾಯ ವ್ಯವಸ್ಥೆ ಕೊಟ್ಟರೂ, ಅವರ ಈಗಿನ ಸಂಪಾದನೆಗಿಂತ ಕಡಿಮೆ ಸಂಪಾದನೆ ಆಗುವುದು ಸಾಮಾನ್ಯ. ಬೀದಿ ಬದಿಯಿಂದಲೇ ತರಕಾರಿ, ಹಣ್ಣು, ಸಾಮಾನುಗಳನ್ನು ಖರೀದಿಸುವ ಜನರು ಇದ್ದಾರೆ. ಈ ನಷ್ಟವನ್ನು ಅವರು ಹೇಗೆ ಭರಿಸುತ್ತಾರೆ?

ರಸ್ತೆ ಬದಿ ವ್ಯಾಪಾರಿಗಳಿಂದ ಮಾತ್ರ ಫೂಟ್‌ಪಾತ್ ಸಂಬಂಧಿಸಿದ ಅಪಘಾತಗಳು ನಡೆಯುತ್ತವೆ ಎಂದು “ಕವಿಕೋಗಿಲೆಗಳು” ಹಾಡುತ್ತಿವೆ.

ಟ್ರಾಫಿಕ್ ಪೊಲೀಸರ ಪ್ರಕಾರ, 2025 ರಲ್ಲಿ (ನವೆಂಬರ್ 30 ರವರೆಗೆ) ಬೆಂಗಳೂರು ನಗರದಾದ್ಯಂತ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ 763 ಜನರಲ್ಲಿ 218 ಜನರು ಪಾದಚಾರಿಗಳು. 2024 ರಲ್ಲಿ, 869 ಜನರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡರು ಮತ್ತು ಅವರಲ್ಲಿ 246 ಜನರು ಪಾದಚಾರಿಗಳು. ಅಂದರೆ ಬೆಂಗಳೂರಿನ ಒಟ್ಟು ರಸ್ತೆ ಅಪಘಾತಗಳಲ್ಲಿ 28% ಮಂದಿ ಸತ್ತವರು ಪಾದಚಾರಿಗಳು.

ಆದರೆ, ಈ ಎಲ್ಲಾ ಪಾದಾಚಾರಿಗಳ ಸಾವಿಗೆ ಬೀದಿಬದಿ ವ್ಯಾಪಾರಿಗಳು ಮಾತ್ರ ಕಾರಣವೇ? ಇವರ ಒಟ್ಟು ವಾದ ನೋಡಿದರೆ, ಅವರಿಂದ ಮಾತ್ರ ಈ ಸಾವುಗಳು ಸಂಭವಿಸಿವೆ ಎಂಬಂತೆ ಇದೆ. ಜಾಣರು ಇವರು..!

ಇನ್ನೊಂದು ಮುಖ್ಯ ಅಂಶವೆಂದರೆ, 2025 ರ ವರದಿಯಲ್ಲೇ ಪೊಲೀಸರು 2024ರಲ್ಲಿ ಫುಟ್‌ಪಾತ್ ಮೇಲೆ ವಾಹನ ನಿಲ್ಲಿಸಿದ್ದಕ್ಕಾಗಿ ಸುಮಾರು 1.2 ಲಕ್ಷ ಪ್ರಕರಣಗಳು ಮತ್ತು ಫುಟ್‌ಪಾತ್ ಮೇಲೆಯೇ ವಾಹನ ಚಲಾಯಿಸಿದ್ದಕ್ಕಾಗಿ 17,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಿಸಿರುವುದಾಗಿ ಹೇಳಿದ್ದಾರೆ. 2025ರಲ್ಲೂ ಅಕ್ಟೋಬರ್‌ವರೆಗೆ ಸಾವಿರಾರು ಪ್ರಕರಣಗಳು ದಾಖಲಾಗಿವೆ.

ಗೋವಿಂದರಾಜ ನಗರಸ ಸತ್ವ ಅಪಾರ್ಟ್‌ಮೆಂಟ್‌ ಎದುರು ಒಂದು ಪೂಟ್‌ಪಾತ್‌ ಇದೆ. ಜೋರು ಮಳೆ ಒಂದು ದಿನ. ಫೂಟ್‌ಪಾತ್‌ ಇಳಿದರೆ, ರಸ್ತೆಯಲ್ಲಿ ನದಿ ಹರಿಯುತ್ತಿದೆ. ಫೂಟ್‌ ಪಾತ್‌ ಮೇಲೆ ಎಲ್ಲೋ ನೋಡಿಕೊಂಡು ನಡೆದರೆ, ಮಧ್ಯೆ ಸಿಮೆಂಟ್‌ ಸ್ಲ್ಯಾಬ್‌ ಕಿತ್ತುಹೋಗಿದೆ, ಚರಂಡಿ ನೀರು ತುಂಬಿ ಗೊತ್ತೇ ಆಗುವುದಿಲ್ಲ. ಎಲ್ಲೋ ನೋಡಿಕೊಂಡು ನಡೆದರೆ, ತುಳುಂಕ್‌ ಅಂತ ಚರಂಡಿಗೆ ಬೀಳುತ್ತೀರಿ, ಆಮೇಲೆ ನೇರ ಪಕ್ಕದ ಗಬ್ಬು ನೀರು ಹರಿಯುವ ವೃಷಭಾವತಿಯಲ್ಲಿ ನಿಮ್ಮ ಹೆಣ ಸಿಗುತ್ತದೆ. ಇದು ಬೆಂಗಳೂರಿನ ಫೂಟ್‌ಪಾತ್‌ಗಳ ಅವಸ್ಥೆ.

ಪಾದಚಾರಿಗಳ ಸಾವಿಗೆ ನೇರವಾಗಿ ಬೀದಿಬದಿ ವ್ಯಾಪಾರಿಗಳನ್ನು ಹೊಣೆ ಮಾಡುವುದು ಅಸಹ್ಯ ಮನಸ್ಥಿತಿ. ಕಟ್ಟಡಗಳ ರ್ಯಾಂಪ್‌ಗಳು ಮತ್ತು ಮೆಟ್ಟಿಲುಗಳು, ಜಾಹೀರಾತು ಫಲಕಗಳು, ಮರಳು-ಜಲ್ಲಿ-ಮರದ ಹಲಗೆಗಳಂತಹ ಕಟ್ಟಡ ನಿರ್ಮಾಣ ಸಾಮಗ್ರಿಗಳು, ಕಸ, ಅಕ್ರಮ ಪಾರ್ಕಿಂಗ್, ಮುರಿದ ಅಥವಾ ಕಂಟ್ಯುನಿಟಿ ಇಲ್ಲ ಫುಟ್‌ಪಾತ್‌ಗಳು….. ಇವೆಲ್ಲಾ ಕಾರಣಗಳು. ಪಾದಚಾರಿಗಳು ರಸ್ತೆ ದಾಟುವಾಗಲೂ ಸತ್ತಿದ್ದಾರೆ. ಜನರು ಸ್ಕೈವಾಕ್‌ ಬಳಸಲ್ಲ. (ಸ್ಯಾಟ್‌ಲೈಟ್‌ ಬಳಿ ಗಾಳಿ ಆಂಜನೇಯ ದೇವಾಲಯದ ಸಿಗ್ನಲ್‌ನಲ್ಲಿ ಒಂದು ಹತ್ತು ನಿಮಿಷ ನಿಲ್ಲಿ, ಸ್ಕೈವಾಕ್‌ ಇದ್ದರೂ ರೋಡು ದಾಟಲು ಮಾಡುವ ಸರ್ಕಸನ್ನು ನೋಡಬಹುದು) ಸಿಗ್ನಲ್‌ನಲ್ಲಿ ಜೀಬ್ರಾ ಕ್ರಾಸ್‌ ಇದ್ದರೂ ಬೇರೆ ಕಡೆ ರಸ್ತೆ ದಾಟುವುದು!

“Many of these accidents occur because people are forced to step onto busy roads due to broken or dug-up pavements” – TOI, December 25, 2025

ಇದೆಲ್ಲಾ ಕಾರಣಕ್ಕೆ 28% ಪಾದಚಾರಿಗಳ ಸಾವಾಗಿದೆ. ಇದನ್ನೆಲ್ಲಾ ನೋಡದೆ, ನೇರವಾಗಿ 30% ಪಾದಚಾರಿಗಳ ಸಾವನ್ನು ಬೀದಿ ಬದಿ ವ್ಯಾಪಾರಿಗಳ ತಲೆಗೆ ಕಟ್ಟುವ “ಕವಿಕೋಗಿಲೆಗಳಿಗೆ” ಏನು ಹೇಳುವುದು?


ಒಂದು ಕಡೆ ಇದೇ ಜನ ರಿಲಯನ್ಸ್‌, ಅಂಬಾನಿ, ಟಾಟಾದವರ ದೊಡ್ಡ ದೊಡ್ಡ ಶಾಪಿಂಗ್‌ ಮಾಲ್‌ಗಳು ಬಂದು ನಮ್ಮ ದಿನಸಿ ಅಂಗಡಿಗಳು ಇಲ್ಲವಾಗುತ್ತಿವೆ ಎನ್ನುತ್ತೇವೆ ಇನ್ನೊಂದು ಕಡೆ ನಾವೇ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಬೀದಿ ಬದಿ ವ್ಯಾಪಾರಿಗಳನ್ನು ದೂರುತ್ತಿದ್ದೇವೆ!

ಒಟ್ಟಾರೆ, ಬಡವರು ಈ ನಗರವನ್ನು ಸಿಂಗಾಪುರ್‌ ಮಾಡಲು ಬಿಡುತ್ತಿಲ್ಲ. ನಗರದ ಸೌಂದರ್ವನ್ನು ಹಾಳು ಮಾಡುತ್ತಿದ್ದಾರೆ. ಸರ್ಕಾರ ಇವರಿಗೆಲ್ಲಾ ದಯಾಮರಣವನ್ನು ನೀಡುವ ವ್ಯವಸ್ಥೆ ಮಾಡಲಿ!

Related Articles

ಇತ್ತೀಚಿನ ಸುದ್ದಿಗಳು