ತೀರ್ಥಹಳ್ಳಿ: ರಾಮಮಂದಿರ ಅಕ್ರಮ ಪ್ರಕರಣದಲ್ಲಿ ಮೋದಿ ಮೌನ ಪ್ರಶ್ನಾರ್ಹ; ‘A1 ಮೋದಿ, A2 ಅಮಿತ್ ಷಾ, A3 ಯೋಗಿ’ ಎಂದು ಕಿಮ್ಮನೆ ರತ್ನಾಕರ್ ಆರೋಪ

ತೀರ್ಥಹಳ್ಳಿ: ಅಯೋಧ್ಯೆ ರಾಮಮಂದಿರದಲ್ಲಿ ನಡೆದ ಹಣಕಾಸು ಅಕ್ರಮ, ಭೂ ಅಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದು ಪ್ರಶ್ನಾರ್ಹ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.

ತೀರ್ಥಹಳ್ಳಿ ತಾಲ್ಲೂಕಿನ ಕೋದಂಡರಾಮ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಶ್ರೀರಾಮನನ್ನು ಗುತ್ತಿಗೆ ತೆಗೆದುಕೊಂಡವರೇ ಈಗ ರಾಮನ ಹುಂಡಿಗೆ ಕನ್ನ ಹಾಕಿದ್ದಾರೆ. ಚುನಾವಣೆ, ರಾಜಕೀಯ ಅಥವಾ ಪ್ರತಿಪಕ್ಷಗಳ ವಿರುದ್ಧ ಯಾವುದೇ ವಿಷಯ ಬಂದಾಗ ತಕ್ಷಣ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ, ರಾಮಮಂದಿರ ಅಕ್ರಮ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಬಿಜೆಪಿ ಆಡಳಿತದ ರಾಜ್ಯಗಳಲ್ಲಿನ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಬಗ್ಗೆ ಗಾಢ ಮೌನ ವಹಿಸಿದ್ದಾರೆ” ಎಂದು ಟೀಕಿಸಿದರು.

“ನಾನೂ ವೈಯಕ್ತಿಕವಾಗಿ ಶ್ರೀರಾಮನ ಭಕ್ತ. ಆದರೆ ಬಿಜೆಪಿಯಂತೆ ರಾಮನನ್ನು ಬೀದಿಗೆ ತಂದು ರಾಜಕೀಯ ಮಾಡಿಲ್ಲ. ಕಾಂಗ್ರೆಸ್ ಕೂಡ ರಾಮನ ಹೆಸರಲ್ಲಿ ರಾಜಕೀಯ ಮಾಡಿಲ್ಲ. ರಾಮಮಂದಿರ ವಿವಾದ ನ್ಯಾಯಾಲಯದಲ್ಲೇ ಇತ್ಯರ್ಥವಾಗಬೇಕು ಎಂಬುದು ಕಾಂಗ್ರೆಸ್ ನಿಲುವಾಗಿತ್ತು. ಆದರೆ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅದು ಬೀದಿಯಲ್ಲೇ ಇತ್ಯರ್ಥವಾಗಬೇಕು ಎಂದು ವಾದಿಸಿದ್ದರು. ಅದರ ಪರಿಣಾಮವನ್ನು ಈಗ ಬಿಜೆಪಿಯವರೇ ಅನುಭವಿಸುತ್ತಿದ್ದಾರೆ” ಎಂದು ಹೇಳಿದರು.

ತೀರ್ಥಹಳ್ಳಿಯ ಬಿಜೆಪಿ ನಾಯಕರ ಮೌನವನ್ನೂ ಪ್ರಶ್ನಿಸಿದ ಅವರು, “ನರೇಂದ್ರನಿಂದ ಜ್ಞಾನೇಂದ್ರನವರೆಗೂ ಈಗ ಮೌನ. ರಾಮಮಂದಿರಕ್ಕಾಗಿ ತೀರ್ಥಹಳ್ಳಿಯಲ್ಲೂ ಇಟ್ಟಿಗೆ ಸಂಗ್ರಹವಾಗಿತ್ತು. ಆಗಲೇ ಆ ಇಟ್ಟಿಗೆಗಳು ತುಂಗಾ ನದಿ ದಾಟುವುದಿಲ್ಲ ಎಂದು ಹೇಳಿದ್ದೆ. ಇದೀಗ ನಡೆದಿರುವ ಬೆಳವಣಿಗೆಗಳಿಂದ ನನ್ನ ಮಾತು ನಿಜವಾಗಿದೆ. ತೀರ್ಥಹಳ್ಳಿಯ ಬಿಜೆಪಿ ನಾಯಕ ಸಿಬಿ ಈಶ್ವರ್ ಹೊರತುಪಡಿಸಿ ಉಳಿದವರು ಯಾರೂ ಅಕ್ರಮವನ್ನು ಖಂಡಿಸಿಲ್ಲ. ಅವರ ಮೌನದ ಹಿಂದೆ ಏನು ಇದೆ ಎಂಬ ಅನುಮಾನ ಮೂಡುತ್ತಿದೆ” ಎಂದು ಆರೋಪಿಸಿದರು.

ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಕುರಿತು ಮಾತನಾಡಿದ ಕಿಮ್ಮನೆ ರತ್ನಾಕರ್, “ಧಾರ್ಮಿಕ ಶಾಸ್ತ್ರದ ಪ್ರಕಾರ ಪ್ರಾಣ ಪ್ರತಿಷ್ಠಾಪನೆ ನಡೆದಿಲ್ಲ. ಹಿಂದೂ ಸಂಪ್ರದಾಯದಲ್ಲಿ ದಂಪತಿ ಸಮೇತ ಕುಳಿತು ವಿಧಿವಿಧಾನ ನಡೆಸುವುದು ರೂಢಿ. ಆದರೆ ಪ್ರಧಾನಿ ನರೇಂದ್ರ ಮೋದಿ ಏಕಾಂಗಿಯಾಗಿ ಕುಳಿತಿದ್ದರು. ಇದು ಶಾಸ್ತ್ರೋಕ್ತ ವಿಧಾನವಲ್ಲ. ಪ್ರಗತಿಪರವಾಗಿ ಮಾಡಬೇಕೆಂದಿದ್ದರೆ ರಾಷ್ಟ್ರಪತಿಗಳೇ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಅವರನ್ನು ದೂರವಿಟ್ಟಿದ್ದು ರಾಜಕೀಯ ಕಾರಣದಿಂದಲೇ. ಇದೇ ಕಾರಣಕ್ಕೆ ಶೃಂಗೇರಿ ಜಗದ್ಗುರುಗಳು ಹಾಗೂ ಕಂಚಿ ಶ್ರೀಗಳು ಕಾರ್ಯಕ್ರಮದಿಂದ ದೂರ ಉಳಿದರು” ಎಂದು ಹೇಳಿದರು.

ರಾಮಮಂದಿರ ಟ್ರಸ್ಟ್ ನೇಮಕಾತಿಯಲ್ಲೂ ಪ್ರಧಾನಿ ನರೇಂದ್ರ ಮೋದಿ ಪಾತ್ರವಿದೆ ಎಂದು ಆರೋಪಿಸಿದ ಅವರು, “ಟ್ರಸ್ಟ್ ಅನ್ನು ನೇಮಿಸಿದ್ದು ಮೋದಿ. ಟ್ರಸ್ಟ್ ಅನ್ನು ಮಾಹಿತಿ ಹಕ್ಕು ಕಾಯ್ದೆ (RTI) ವ್ಯಾಪ್ತಿಯಿಂದ ಹೊರಗಿಟ್ಟಿದ್ದೂ ಮೋದಿ. ಬಂಗಾರದ ಇಟ್ಟಿಗೆ, ಬೆಳ್ಳಿಯ ಇಟ್ಟಿಗೆ, ಹುಂಡಿ ಹಾಗೂ ಭೂ ವ್ಯವಹಾರಗಳಲ್ಲಿ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಇವೆಲ್ಲವೂ ಮೋದಿಗೆ ತಿಳಿದೇ ನಡೆದಿವೆ. ಅದಕ್ಕಾಗಿಯೇ ಅವರು ಮೌನವಾಗಿದ್ದಾರೆ” ಎಂದು ಆರೋಪಿಸಿದರು.

ಮುಂದುವರಿದು, “ಈ ಅಕ್ರಮದಲ್ಲಿ A1 ಆರೋಪಿ ನರೇಂದ್ರ ಮೋದಿ, A2 ಆರೋಪಿ ಅಮಿತ್ ಷಾ ಹಾಗೂ A3 ಆರೋಪಿ ಯೋಗಿ ಆದಿತ್ಯನಾಥ್. ಸಣ್ಣಪುಟ್ಟ ಪ್ರಕರಣಗಳಿಗೆ ಬುಲ್ಡೋಜರ್ ರಾಜಕಾರಣ ಮಾಡುವ ಬಿಜೆಪಿ, ಈ ಹುಂಡಿ ಕಳ್ಳರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಈ ಎಲ್ಲ ಬೆಳವಣಿಗೆಗಳಿಗೆ RSS ಸಂಘಟನೆಯೇ ನಿರ್ದೇಶಕ ಮತ್ತು ನಿರ್ಮಾಪಕ. ಸಂಘಟನೆಗೆ ಈ ಅಕ್ರಮದೊಂದಿಗೆ ಸಂಬಂಧವಿಲ್ಲ ಎಂದಾದರೆ, ಅದನ್ನೂ ಸಾರ್ವಜನಿಕವಾಗಿ ಖಂಡಿಸಲಿ” ಎಂದು ಸವಾಲು ಹಾಕಿದರು.

ಅಕ್ರಮ ವಲಸಿಗರನ್ನು ಪತ್ತೆಹಚ್ಚಲು SIR ಅಸ್ತ್ರ ಬಳಸುವ ಬಿಜೆಪಿ, ರಾಮಮಂದಿರ ಅಕ್ರಮ ಆರೋಪಿಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯಕರ ಎಂದು ಕಿಮ್ಮನೆ ರತ್ನಾಕರ್ ವ್ಯಂಗ್ಯವಾಡಿದರು.

Related Articles

ಇತ್ತೀಚಿನ ಸುದ್ದಿಗಳು