15ನೇ ಹಣಕಾಸು ಆಯೋಗದ ಶಿಫಾರಸಿನಡಿ ಕೇಂದ್ರ ಸರ್ಕಾರ ಬಾಕಿ ಹಣ ಬಿಡುಗಡೆ ಮಾಡಲಿ – ಈಶ್ವರ ಬಿ. ಖಂಡ್ರೆ

ನವದೆಹಲಿ : ಕರ್ನಾಟಕದ ಗ್ರಾಮ ಪಂಚಾಯಿತಿಗಳ (panchayat) ಅಭಿವೃದ್ಧಿಗೆ ಸಂಬಂಧಿಸಿದಂತೆ 15ನೇ ಹಣಕಾಸು ಆಯೋಗದ ಶಿಫಾರಸಿನಡಿ ಬಾಕಿ ಇರುವ ₹2,186.20 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ (Rural development) ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ (Eshwara Khandre) ಒತ್ತಾಯಿಸಿದ್ದಾರೆ.

ನವದೆಹಲಿಯಲ್ಲಿ ಕೇಂದ್ರ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿ ಅವರು ಈ ಮಹತ್ವದ ಆಗ್ರಹ ಮಂಡಿಸಿದರು. 16ನೇ ಹಣಕಾಸು ಆಯೋಗದ ಶಿಫಾರಸುಗಳು ಹಾಗೂ ಅನುದಾನ ಬಿಡುಗಡೆ ಪ್ರಕ್ರಿಯೆ ಕುರಿತಾದ ಚರ್ಚೆಯ ವೇಳೆ ರಾಜ್ಯದ ಹಣಕಾಸು ಸ್ಥಿತಿಗತಿಯನ್ನು ಅವರು ಕೇಂದ್ರದ ಗಮನಕ್ಕೆ ತಂದರು.

ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಆಪರೇಷನಲ್ ಗೈಡ್‌ಲೈನ್ಸ್‌ನ ಎಲ್ಲಾ ಷರತ್ತುಗಳನ್ನು ಕರ್ನಾಟಕ ಸರ್ಕಾರ ಪಾಲಿಸಿದೆ. ಕೇಂದ್ರ ಎತ್ತಿದ್ದ ಎಲ್ಲಾ ಪ್ರಶ್ನೆಗಳಿಗೂ ರಾಜ್ಯ ಸೂಕ್ತ ಪ್ರತಿಕ್ರಿಯೆ ನೀಡಿದೆ. 2024-25ರ ಆರ್ಥಿಕ ವರ್ಷದ ಅನುದಾನ ವರ್ಗಾವಣೆ ಪ್ರಮಾಣಪತ್ರಗಳನ್ನು (GTC) ಕಳೆದ ಜುಲೈ ಹಾಗೂ ಸೆಪ್ಟೆಂಬರ್ (2025) ತಿಂಗಳಲ್ಲೇ ಕೇಂದ್ರಕ್ಕೆ ಒದಗಿಸಲಾಗಿದೆ. ಅಷ್ಟೇ ಅಲ್ಲದೆ, ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ಆಗಸ್ಟ್ 2025 ರೊಳಗೆ ‘ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ’ಗಳನ್ನು (GPDP) ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿವೆ. 15ನೇ ಹಣಕಾಸು ಆಯೋಗದಡಿ ಕರ್ನಾಟಕದ ಗ್ರಾ.ಪಂ.ಗಳಿಗೆ ಹಂಚಿಕೆಯಾದ ಒಟ್ಟು ₹13,392 ಕೋಟಿ ಪೈಕಿ ಕಳೆದ 4 ವರ್ಷಗಳಲ್ಲಿ ರಾಜ್ಯಕ್ಕೆ ಸಂದಿರುವುದು ₹11,068 ಕೋಟಿ ಮಾತ್ರ. ಇನ್ನುಳಿದ ₹2,186.20 ಕೋಟಿ ಹಣವನ್ನು ಕೇಂದ್ರ ಸರ್ಕಾರ ವಿನಾಕಾರಣ ವಿಳಂಬ ಮಾಡುತ್ತಿದೆ ಎಂದು ಖಂಡ್ರೆ ದೂರಿದರು.

ರಾಜ್ಯದಲ್ಲಿ ಪ್ರಸ್ತುತ ‘ಎಲ್ ನಿನೋ’ ಪ್ರಭಾವದಿಂದಾಗಿ ಮುಂಗಾರು ಮಳೆ ಕೊರತೆ ಎದುರಾಗಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪಂಚಾಯಿತಿಗಳ ಹಣವನ್ನು ತಡೆ ಹಿಡಿದರೆ ಹಳ್ಳಿಗಳಲ್ಲಿ ಕುಡಿಯುವ ನೀರಿನ ಪೂರೈಕೆಗೂ ಭಾರೀ ತೊಡಕಾಗುತ್ತದೆ. ಹೀಗಾಗಿ ಸಣ್ಣಪುಟ್ಟ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಳ್ಳದೆ ಬಾಕಿ ಹಣ ಬಿಡುಗಡೆ ಮಾಡಿ ಎಂದು ಅವರು ಕೇಂದ್ರ ಸಚಿವರಿಗೆ ಮನವಿ ಮಾಡಿದರು.

ಮುಂದಿನ 2 ತಿಂಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ!
ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳ ವಿಳಂಬದ ಕುರಿತು ಸಭೆಯಲ್ಲಿ ಸ್ಪಷ್ಟನೆ ನೀಡಿದ ಈಶ್ವರ ಖಂಡ್ರೆ, “ಬಹುತೇಕ ಪಂಚಾಯಿತಿಗಳ ಅವಧಿ ಕಳೆದ ಮಾರ್ಚ್‌ ತಿಂಗಳಲ್ಲೇ ಮುಗಿದಿದೆ. ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆಗಳು ಚುರುಕಾಗಿ ನಡೆಯುತ್ತಿದ್ದು, ಮುಂದಿನ ತಿಂಗಳು ಪೂರ್ಣಗೊಳ್ಳಲಿವೆ. ಹೀಗಾಗಿ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದ ಪಂಚಾಯ್ತಿ ಚುನಾವಣೆಗಳನ್ನು ಮುಂದಿನ 2 ತಿಂಗಳೊಳಗೆ ನಡೆಸಲು ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದರು.

ಮುಂದಿನ 5 ವರ್ಷಗಳ ಅವಧಿಗೆ (16ನೇ ಹಣಕಾಸು ಆಯೋಗದ ಶಿಫಾರಸಿನಂತೆ) ಕರ್ನಾಟಕದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು ₹18,889 ಕೋಟಿ ಹಂಚಿಕೆಯಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಇದರಲ್ಲಿ ₹15,111 ಕೋಟಿ ಮೂಲ ಅನುದಾನ ಹಾಗೂ ₹3,778 ಕೋಟಿ ಕಾರ್ಯ ಸಾಮರ್ಥ್ಯ ಅನುದಾನ ಸೇರಿದೆ. ಜೊತೆಗೆ, ರಾಜ್ಯದ ಪಂಚಾಯಿತಿಗಳು ಗ್ರಾಮೀಣ ಆಸ್ತಿಗಳಿಂದ ಶೇ. 80 ರಷ್ಟು ತೆರಿಗೆ ಸಂಗ್ರಹಿಸುವ ಮೂಲಕ ಅತ್ಯುತ್ತಮ ಗುರಿ ಸಾಧಿಸಿವೆ ಎಂದು ಹೆಮ್ಮೆಯಿಂದ ಹಂಚಿಕೊಂಡರು.

Related Articles

ಇತ್ತೀಚಿನ ಸುದ್ದಿಗಳು