ಮತ್ತೆ ಮುನ್ನೆಲೆಗೆ ಬರಲಿದೆ ಡಿಲಿಮಿಟೇಷನ್‌ ಬಿಲ್:‌ ಜುಲೈ 13ರಿಂದ ಮಳೆಗಾಲದ ಅಧಿವೇಶನ ಆರಂಭ

ಹೊಸದೆಹಲಿ, ಜುಲೈ 3: ಈ ತಿಂಗಳ 20 ರಿಂದ ಆಗಸ್ಟ್ 13 ರವರೆಗೆ ನಡೆಯಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ತೀವ್ರ ರಾಜಕೀಯ ಸಂಘರ್ಷ ಏರ್ಪಡುವ ಸಾಧ್ಯತೆಯಿದೆ.

ನಾಲ್ಕು ವಾರಗಳ ಕಾಲ ನಡೆಯಲಿರುವ ಈ ಅಧಿವೇಶನದಲ್ಲಿ 19 ಕಲಾಪದ ದಿನಗಳು (ಸಿಟ್ಟಿಂಗ್ಸ್) ಇರಲಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಹಲವು ಪ್ರಾದೇಶಿಕ ಪಕ್ಷಗಳಲ್ಲಿ ರಾಜಕೀಯ ಸಮೀಕರಣಗಳು ಬದಲಾಗುತ್ತಿರುವುದು ಮತ್ತು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಆಕ್ರಮಣಕಾರಿಯಾಗಿ ಸಜ್ಜಾಗುತ್ತಿರುವುದರಿಂದ ಈ ಅಧಿವೇಶನವು ಅತ್ಯಂತ ಕಾವೇರಿದ ಚರ್ಚೆಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಅಧಿವೇಶನ ಪ್ರಾರಂಭವಾಗುವ ಮುನ್ನವೇ ಶಿವಸೇನೆ (ಶಿಂದೆ ಬಣ) ಸೇರಿದ ಆರು ಶಿವಸೇನೆ (ಯುಬಿಟಿ) ಸಂಸದರು ಮತ್ತು 20 ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದರ ವಿಲೀನಕ್ಕೆ ಸಂಬಂಧಿಸಿದ ವಿಷಯದ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಹಾಗೆಯೇ, ಲೋಕಸಭೆಯಲ್ಲಿ ಈ ಬಂಡಾಯ ಸಂಸದರ ಸೀಟು ಹಂಚಿಕೆ ಕುರಿತೂ ನಿರ್ಧಾರ ಹೊರಬೀಳಬಹುದು. ಮೂರನೇ ಎರಡರಷ್ಟು ಬಹುಮತ ಸಾಧಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವ ಎನ್‌ಡಿಎ ಸರ್ಕಾರವು ಈ ಅಧಿವೇಶನದ ಸಂದರ್ಭದಲ್ಲಿ ಎರಡು ಸಾಂವಿಧಾನಿಕ ತಿದ್ದುಪಡಿ ಮಸೂದೆಗಳು ಸೇರಿದಂತೆ ಹಲವು ಪ್ರಮುಖ ಮಸೂದೆಗಳನ್ನು ಅಂಗೀಕರಿಸಲು ಸಜ್ಜಾಗಿದೆ. ಮಹಿಳಾ ಮೀಸಲಾತಿ ಕುರಿತ 131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ ಹಾಗೂ ಪ್ರಸ್ತಾವಿತ ತಿದ್ದುಪಡಿಗಳೊಂದಿಗೆ ಕ್ಷೇತ್ರಗಳ ಮರುವಿಂಗಡಣೆ (ಡೀಲಿಮಿಟೇಷನ್) ಮಸೂದೆಯನ್ನು ಸರ್ಕಾರ ಮಂಡಿಸುವ ಸಾಧ್ಯತೆಯಿದೆ.

ತಿದ್ದುಪಡಿ ಮಾಡಿದ ಮಸೂದೆಯಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಸದಸ್ಯರ ಬಲವನ್ನು ಶೇಕಡಾ 50 ರಷ್ಟು ಹೆಚ್ಚಿಸುವ ನಿಬಂಧನೆ ಇರಬಹುದು ಎಂದು ತಿಳಿದುಬಂದಿದೆ. 30 ದಿನಗಳಿಗಿಂತ ಹೆಚ್ಚು ಕಾಲ ಬಂಧನದಲ್ಲಿದ್ದಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸಚಿವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕು ಎಂಬ ನಿಬಂಧನೆಯನ್ನು 130ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯಲ್ಲಿ ಪ್ರಸ್ತಾಪಿಸುವ ಸಾಧ್ಯತೆಯಿದೆ.

ಈ ನಿಬಂಧನೆಯು ದುರುಪಯೋಗವಾಗದಂತೆ ಕೆಲವು ರಕ್ಷಣೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಶಿಫಾರಸು ಮಾಡುವ ಸಾಧ್ಯತೆಯಿದೆ. ‘ಒಂದು ದೇಶ, ಒಂದು ಚುನಾವಣೆ’ ಮಸೂದೆಗಾಗಿ ರಚಿಸಲಾದ ಸಮಿತಿಯ ಕಾಲಾವಧಿಯನ್ನು ವಿಸ್ತರಿಸಲು ಸರ್ಕಾರ ಕ್ರಮ ಕೈಗೊಳ್ಳಬಹುದು ಎಂದು ತಿಳಿದುಬಂದಿದೆ. ಇಸಿಆರ್‌ಎಗೆ ಸಂಬಂಧಿಸಿದ ವಿವಾದಾತ್ಮಕ ಕಾಯ್ದೆಯ ವಿಷಯವೂ ಈ ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ.

ವಿಕಸಿತ್ ಭಾರತ್ ಶಿಕ್ಷಣ ಅಧಿಷ್ಠಾನ, ಡೋಪಿಂಗ್ ವಿರೋಧಿ ಸುಧಾರಣೆಗಳು, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆ ಹೆಚ್ಚಳ, ಕಾರ್ಪೊರೇಟ್ ಕಾಯ್ದೆಗಳ ಸುಧಾರಣೆಗಳು ಮತ್ತು ಸೆಕ್ಯೂರಿಟೀಸ್ ಮಾರ್ಕೆಟ್ ಕೋಡ್‌ನಂತಹ ವಿಷಯಗಳನ್ನೂ ಅಂಗೀಕಾರಕ್ಕಾಗಿ ಮಂಡಿಸುವ ಸಾಧ್ಯತೆಯಿದೆ.

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು… ಮತ್ತೊಂದೆಡೆ, ಮಳೆ ಕೊರತೆ, ಬರಗಾಲ, ಪ್ರವಾಹ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಅಯೋಧ್ಯಾ ರಾಮಮಂದಿರದ ಕಾಣಿಕೆ ಮತ್ತು ದೇಣಿಗೆ ಕಳ್ಳತನ, ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ, ಹಣದುಬ್ಬರ ಮತ್ತು ನಿರುದ್ಯೋಗದ ವಿಷಯಗಳ ಕುರಿತು ಸರ್ಕಾರವನ್ನು ಗುರಿಯಾಗಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ. ಅಷ್ಟೇ ಅಲ್ಲದೆ, ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಆರ್‌ಆರ್) ಸಂಬಂಧಿಸಿದ ಸಮಸ್ಯೆಗಳು ಮತ್ತು ಪ್ರಾದೇಶಿಕ ಪಕ್ಷಗಳಲ್ಲಿ ಆಂತರಿಕವಾಗಿ ನಡೆಯುತ್ತಿರುವ ಬಂಡಾಯದಲ್ಲಿ ಕೇಂದ್ರ ಸರ್ಕಾರದ ಪಾತ್ರದ ಕುರಿತೂ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಧ್ವನಿ ಎತ್ತಲಿವೆ.

ಇದೇ ಸಮಯದಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಇತ್ತೀಚೆಗೆ ಸಾಧಿಸಿದ ಚುನಾವಣಾ ಜಯಗಳ ಹಿನ್ನೆಲೆಯಲ್ಲಿ ಮುಂಗಾರು ಅಧಿವೇಶನದಲ್ಲಿ ಬಿಜೆಪಿ ಆಕ್ರಮಣಕಾರಿ ಧೋರಣೆ ತಳೆಯುವ ಸಾಧ್ಯತೆಯಿದೆ. ಹಾಗೆಯೇ ವಿವಿಧ ರಾಜ್ಯಗಳಲ್ಲಿ ವಿರೋಧ ಪಕ್ಷದ ಶಾಸಕರೊಂದಿಗೆ ಆಡಳಿತ ಪಕ್ಷ ನಡೆಸುತ್ತಿರುವ ಕುದುರೆ ವ್ಯಾಪಾರದ ವಿಷಯವನ್ನೂ ವಿರೋಧ ಪಕ್ಷಗಳು ಪ್ರಸ್ತಾಪಿಸುವ ಸಾಧ್ಯತೆಯಿದೆ.

Related Articles

ಇತ್ತೀಚಿನ ಸುದ್ದಿಗಳು