CJP ಪ್ರತಿಭಟನಾಕಾರರ ಮೇಲಿನ ಹಲ್ಲೆ ಪ್ರಕರಣ – ದೆಹಲಿ ಪೊಲೀಸರಿಗೆ ಚೀಮಾರಿ ಹಾಕಿದ ಹೈಕೋರ್ಟ್

ನವದೆಹಲಿ: ಸಂಸತ್ ಭವನದತ್ತ ಮೆರವಣಿಗೆ ಕೈಗೊಂಡಿದ್ದ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party Protest) ಕಾರ್ಯಕರ್ತರ ಮೇಲೆ ದೆಹಲಿ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ (Delhi High Court) ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್‌ಗೆ ಇದು ಪ್ರಚಾರಕ್ಕಾಗಿ ಸಲ್ಲಿಸಿದ ಅರ್ಜಿ ಎಂದು ನೀವು ಹೇಗೆ ಹೇಳುತ್ತೀರಿ? ಎಂದು ನೇರವಾಗಿ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದೆ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ನ್ಯಾಯಾಲಯವು ದೆಹಲಿ ಪೊಲೀಸ್ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಅಂದಿನ ಘಟನೆಯ ಸಿಸಿಟಿವಿ ಮತ್ತು ಇತರ ವಿಡಿಯೋ ದೃಶ್ಯಾವಳಿಗಳನ್ನು (CCTV Footage Preservation) ನಾಶಪಡಿಸದೆ ಸುರಕ್ಷಿತವಾಗಿ ಕಾಯ್ದಿರಿಸುವಂತೆ ಆದೇಶಿಸಿದೆ.

ಕೋರ್ಟ್‌ನಿಂದ ಮಹತ್ವದ ವಿಚಾರಣೆ

ನ್ಯಾಯಾಲಯದಲ್ಲಿ ವಕೀಲರು ಮತ್ತು ಎಎಸ್‌ಜಿ ನಡುವೆ ನಡೆದ
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಹಾಗೂ ದೆಹಲಿ ಪೊಲೀಸ್‌ ಪರ ಹಾಜರಿದ್ದ
ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್. ರಾಜು ಅವರ ನಡುವೆ ತೀವ್ರ ವಾಗ್ದಾಳಿ ನಡೆಯಿತು.

ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎನ್. ಹರಿಹರನ್ ಮತ್ತು ವಿಕಾಸ್ ಸಿಂಗ್, “ಪ್ರತಿಭಟನಾಕಾರರು ಸಂವಿಧಾನ ಬದ್ಧವಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಪೊಲೀಸರು ಅತಿರೇಕದ ಬಲಪ್ರಯೋಗ ಮಾಡಿದ್ದಾರೆ. ಜೊತೆಗೆ ಮಹಿಳಾ ಪ್ರತಿಭಟನಾಕಾರರ ಮೇಲೆ ಹಲ್ಲೆ ಮತ್ತು ಲೈಂಗಿಕ ಕಿರುಕುಳ ನಡೆಸಿದ್ದಾರೆ. ಆದಾಗ್ಯೂ, ಆಣಿಕೂರಿಸಿದ ಲಾಠಿಗಳನ್ನು ಬಳಸಲಾಗಿದ್ದು, ಪೊಲೀಸರ ಸಮವಸ್ತ್ರದಲ್ಲಿ ಹೆಸರು ಅಥವಾ ಬ್ಯಾಡ್ಜ್‌ಗಳಿರಲಿಲ್ಲ. ಇದಕ್ಕೆ ಸಾಕ್ಷಿಯಾಗಿ ನಮ್ಮ ಬಳಿ 110ಕ್ಕೂ ಹೆಚ್ಚು ವಿಡಿಯೋಗಳಿವೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಸರ್ಕಾರದ ಪರ ವಾದ ಮಂಡಿಸಿದ ಎಎಸ್‌ಜಿ ರಾಜು ಈ ಎಲ್ಲಾ ಆರೋಪಗಳನ್ನು ಅಲ್ಲಗೆಳೆದಿದ್ದು,ಪ್ರತಿಭಟನಾಕಾರರು ಹಿಂಸಾತ್ಮಕರಾಗಿದ್ದರು ಮತ್ತು ಘಟನೆಯಲ್ಲಿ ಹಲವು ಪೊಲೀಸರೂ ಗಾಯಗೊಂಡಿದ್ದಾರೆ. ಈ ಅರ್ಜಿಯು ಕೇವಲ ಪ್ರಚಾರಕ್ಕಾಗಿ (Publicity) ಸಲ್ಲಿಸಲಾಗಿದೆ ಎಂದು ಪ್ರತಿವಾದಿಸಿದರು.

90ಕ್ಕೂ ಹೆಚ್ಚು ಜನರಿಗೆ ಗಾಯ

ವಾದ ಮುಂದುವರಿಸಿದ ಅರ್ಜಿದಾರರ ಪರ ವಕೀಲರು, ಪ್ರತಿಭಟನೆಯನ್ನು ನಿಯಂತ್ರಿಸುವ ಅಥವಾ ಮಾರ್ಗ ಬದಲಿಸುವ ಹಕ್ಕು ಸರ್ಕಾರಕ್ಕಿದೆ ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ ಪೊಲೀಸರು ನಡೆಸಿದ ದೌರ್ಜನ್ಯ ಕಲ್ಪನೆಗೂ ಮೀರಿದ್ದು. 90ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದೆ. ಪೊಲೀಸರಿಗೂ ಗಾಯಗಳಾಗಿರಬಹುದು, ಆದರೆ ಅಂದು ಸ್ಥಳದಲ್ಲಿ ವಾಸ್ತವವಾಗಿ ಏನು ನಡೆಯಿತು ಎಂಬುದರ ಕುರಿತು ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಪ್ರಕರಣದ ಮುಂದಿನ ವಿಚಾರಣೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಹಾಗೂ ಕೇಂದ್ರ ಸರ್ಕಾರ ತಮ್ಮ ಉತ್ತರದೊಂದಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗಿದೆ.

Related Articles

ಇತ್ತೀಚಿನ ಸುದ್ದಿಗಳು