ಸವಾಲು ಸ್ವೀಕರಿಸಿ ರಾಜೀನಾಮೆ ಕೊಡಿ, ಚುನಾವಣೆ ಎದುರಿಸೋಣ: ಸಚಿವ ತಂಗಡಗಿಗೆ ಜನಾರ್ದನ ರೆಡ್ಡಿ ನೇರ ಸವಾಲು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರ ಹೇಳಿಕೆಗೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದು, ರಾಜೀನಾಮೆ ನೀಡಿ ಚುನಾವಣಾ ಅಖಾಡಕ್ಕೆ ಬರುವಂತೆ ಬಹಿರಂಗ ಸವಾಲು ಹಾಕಿದ್ದಾರೆ.

“ನಾನು ಯಾರಿಗೂ ತಲೆಬಾಗಿಲ್ಲ, ಯಾರ ಬಳಿಯೂ ಗಣಿ ಹಣ ಪಡೆದಿಲ್ಲ ಎಂದು ಹೇಳುತ್ತಿದ್ದೀರಲ್ಲ; ಕಳೆದ ಜುಲೈ ತಿಂಗಳಲ್ಲಿ ಖಾಸಗಿ ಕಾಲೇಜೊಂದರ ಸಮಾರಂಭದಲ್ಲಿ ನೀವೇ ಸ್ವತಃ ಯಾರ ಆಶೀರ್ವಾದ ಮತ್ತು ಯಾರ ಹಣದಿಂದ ಮೊದಲ ಬಾರಿಗೆ ಶಾಸಕ ಹಾಗೂ ಸಚಿವರಾದಿರಿ ಎಂದು ಒಪ್ಪಿಕೊಂಡಿರುವ ವಿಡಿಯೋವನ್ನು ಒಮ್ಮೆ ನೋಡಿ,” ಎಂದು ಜನಾರ್ದನ ರೆಡ್ಡಿ ತಿರುಗೇಟು ನೀಡಿದ್ದಾರೆ.

ತಾವು ಸಾರ್ವಜನಿಕ ಸಭೆಯಲ್ಲಿ ಹೇಳಿದ ಮಾತನ್ನು ಸಮರ್ಥಿಸಿಕೊಂಡ ರೆಡ್ಡಿ, “ಗಣಿ ದುಡ್ಡಿನಿಂದಲೇ ನೀವು ಶಾಸಕ ಮತ್ತು ಸಚಿವರಾಗಿದ್ದು ಎಂದು ನಾನು ಹೇಳಿದ್ದು ಸತ್ಯ. ಇನ್ನು ‘ಲೇ ತಮ್ಮ’ ಎನ್ನುವುದು ಉತ್ತರ ಕರ್ನಾಟಕ ಭಾಗದಲ್ಲಿ ಸಾಮಾನ್ಯವಾಗಿ ಬಳಸುವ ಆಡುಭಾಷೆಯ ಪದವಷ್ಟೇ. ನೀವು ಆಡಿದ ಮಾತುಗಳು ನೆನಪಿಲ್ಲದಿದ್ದರೆ ಹೆಡ್‌ಫೋನ್ ಧರಿಸಿ ಮತ್ತೊಮ್ಮೆ ಸ್ಪಷ್ಟವಾಗಿ ಕೇಳಿಸಿಕೊಳ್ಳಿ,” ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ರಾಜೀನಾಮೆ ಸವಾಲೊಡ್ಡಿದ ಅವರು, “ವಿಧಾನಸೌಧಕ್ಕೆ ನಿಮ್ಮ ಕಾರಿನಲ್ಲೇ ನಾನು ಜೊತೆಯಾಗಿ ಬರುತ್ತೇನೆ. ನೀವು ನಿಮ್ಮ ಸಚಿವ ಸ್ಥಾನ ಹಾಗೂ ಶಾಸಕ ಸ್ಥಾನಕ್ಕೆ, ಜೊತೆಗೆ ಶಾಸಕ ನಾಗೇಂದ್ರ ಸೇರಿದಂತೆ ಬಳ್ಳಾರಿಯ ಎಲ್ಲ ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಬಂದು ರಾಜೀನಾಮೆ ಕೊಡಿಸಿ. ನಿಮ್ಮೆಲ್ಲರ ರಾಜೀನಾಮೆ ಅಂಗೀಕಾರವಾದ ತಕ್ಷಣವೇ ನಾನು ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾವೆಲ್ಲರೂ ಒಟ್ಟಾಗಿ ಚುನಾವಣಾ ಅಖಾಡಕ್ಕೆ ಧುಮುಕೋಣ,” ಎಂದು ಗುಡುಗಿದ್ದಾರೆ.

“ಯಾರು ನಿಜವಾದ ಜನನಾಯಕರು, ಯಾರಿಗೆ ಜನ ಠೇವಣಿ ಕಸಿದುಕೊಂಡು ಮನೆಗೆ ಕಳುಹಿಸುತ್ತಾರೆ ಎಂಬುದು ಗಂಗಾವತಿ ಮತ್ತು ಕನಕಗಿರಿ ಕ್ಷೇತ್ರಗಳಲ್ಲಿ ನೇರವಾಗಿಯೇ ತೀರ್ಮಾನವಾಗಿ ಹೋಗಲಿ,” ಎಂದು ಗಾಲಿ ಜನಾರ್ದನ ರೆಡ್ಡಿ ಸವಾಲು ಹಾಕಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು