ಬ್ರಿಜ್ ಭೂಷಣ್ ಸಿಂಗ್‌ ಅವರನ್ನು ಕಾಪಾಡಲು ಇಡೀ ವ್ಯವಸ್ಥೆ ಕೆಲಸ ಮಾಡುತ್ತಿದೆ: ವಿನೇಶ್ ಫೋಗಟ್

ಮೂರು ವರ್ಷಗಳ ಹಿಂದೆ ಬ್ರಿಜ್ ಭೂಷಣ್ ಅವರ ಲೈಂಗಿಕ ಕಿರುಕುಳದ ವಿರುದ್ಧ ಮಹಿಳಾ ಪೈಲ್ವಾನರು ನಡೆಸಿದ ಹೋರಾಟವು ದೇಶಾದ್ಯಂತ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದ್ದು ತಿಳಿದಿರುವ ವಿಚಾರವೇ ಆಗಿದೆ. ಇವರ ಸತತ ಹೋರಾಟದ ಫಲವಾಗಿ ಬ್ರಿಜ್ ಭೂಷಣ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯವು ಬ್ರಿಜ್ ಭೂಷಣ್ ಅವರಿಗೆ ಆರೋಪಮುಕ್ತಗೊಳಿಸಿ ತೀರ್ಪು ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿನೇಶ್ ಫೋಗಟ್, “ಬ್ರಿಜ್ ಭೂಷಣ್ ಅವರನ್ನು ಕಾಯಲು ಇಡೀ ವ್ಯವಸ್ಥೆಯೇ ಕೆಲಸ ಮಾಡಿದೆ,” ಎಂದು ಆರೋಪಿಸಿದ್ದಾರೆ. ಅಲ್ಲದೆ, ಈ ವಿಷಯದಲ್ಲಿ ತಮ್ಮ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮಹಿಳಾ ಪೈಲ್ವಾನರು ತಮ್ಮ ಹೋರಾಟವನ್ನು ಕೈಬಿಡುವುದಿಲ್ಲ, ದೆಹಲಿ ನ್ಯಾಯಾಲಯದ ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ. ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವಂತೆ ತಮ್ಮ ಕಾನೂನು ತಂಡಕ್ಕೆ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ.

“ಆಡಳಿತ ಪಕ್ಷದ ಪ್ರಭಾವಿ ನಾಯಕನೊಬ್ಬನ ವಿರುದ್ಧ ಎಫ್‌ಐಆರ್ ದಾಖಲಿಸಲು ಧೈರ್ಯ ತಂದುಕೊಂಡು ನಾವು ಬೀದಿಗಿಳಿದು ಹೋರಾಟ ನಡೆಸಿದೆವು. ಆದರೆ, ಆತ ತನ್ನ ಅಧಿಕಾರ ಮತ್ತು ತೋಳ್ಬಲವನ್ನು ಬಳಸಿ ಪ್ರಕರಣವನ್ನು ವಾಪಸ್ ಪಡೆಯುವಂತೆ ದೂರುದಾರರಿಗೆ ಬೆದರಿಕೆ ಹಾಕಿದ್ದ,” ಎಂದು ಅವರು ದೂರಿದ್ದಾರೆ.

ಆದರೆ ಬೆದರದೆ ತಾವು ನ್ಯಾಯದ ಪರವಾಗಿ ನಿಂತಿದ್ದಾಗಿ ಅವರು ಹೇಳಿದ್ದಾರೆ. “ಆದರೆ ದೆಹಲಿ ನ್ಯಾಯಾಲಯವು ಆತ ನಿರ್ದೋಷಿ ಎಂದು ತೀರ್ಪು ನೀಡಿರುವುದು ನಮಗೆ ತೀವ್ರ ಬೇಸರ ತಂದಿದೆ. ಆದರೂ ನಾವು ಎದೆಗುಂದುವುದಿಲ್ಲ, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ,” ಎಂದು ವಿನೇಶ್ ಫೋಗಟ್ ಪ್ರತಿಪಾದಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು