ಡಿಕೆ ಸಂಪುಟದಲ್ಲಿ ಇದೇ ಮೊದಲ ಬಾರಿಗೆ ಬ್ರಾಹ್ಮಣ ಸಮಾಜಕ್ಕೆ ಸಚಿವ ಸ್ಥಾನವಿಲ್ಲ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದ್ದರೂ, ಈ ಬಾರಿ ಸಾಮಾಜಿಕ ಸಮೀಕರಣದ ವಿಚಾರದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ನೂತನ ಸಂಪುಟದಲ್ಲಿ ವಿವಿಧ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲಾಗಿದ್ದರೂ, ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬ್ರಾಹ್ಮಣ ಸಮುದಾಯದ ಒಬ್ಬರಿಗೂ ಸಚಿವ ಸ್ಥಾನ ದೊರೆಯದಿರುವುದು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಸಂಪುಟದಲ್ಲಿ ದಲಿತ, ಒಕ್ಕಲಿಗ, ಲಿಂಗಾಯತ, ಮುಸ್ಲಿಂ, ಕುರುಬ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ರೆಡ್ಡಿ ಲಿಂಗಾಯತ, ಪಂಚಮಸಾಲಿ ಲಿಂಗಾಯತ, ಗೌಡಗೆ ಲಿಂಗಾಯತ, ಉಪ್ಪಾರ, ಮರಾಠ, ಸಾದರ ಲಿಂಗಾಯತ ಹಾಗೂ ಕ್ರೈಸ್ತ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಆದರೆ ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ಸ್ಥಾನ ಸಿಗದಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.

ಇದುವರೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿದಂತೆ ವಿವಿಧ ಸರ್ಕಾರಗಳಲ್ಲಿ ಕನಿಷ್ಠ ಒಬ್ಬ ಬ್ರಾಹ್ಮಣ ನಾಯಕ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದ ಉದಾಹರಣೆಗಳಿದ್ದವು. ಆದರೆ ಡಿ.ಕೆ. ಶಿವಕುಮಾರ್ ನೇತೃತ್ವದ ಮೊದಲ ಸಚಿವ ಸಂಪುಟದಲ್ಲಿ ಆ ಸಂಪ್ರದಾಯ ಮುರಿದಂತಾಗಿದೆ.

ಕಾಂಗ್ರೆಸ್ ನಲ್ಲಿ ಹಿರಿಯ ನಾಯಕರಾಗಿ ದಿನೇಶ್ ಗುಂಡೂರಾವ್ ಅವರು ಪ್ರಬಲ ಸಚಿವ ಆಕಾಂಕ್ಷಿ ಎನ್ನಲಾಗಿತ್ತು. ಈ ಕಡೆ ಹಿರಿತನದ ಆಧಾರದಲ್ಲಿ ಆರ್‌ವಿ ದೇಶಪಾಂಡೆ ಕೂಡಾ ಪ್ರಬಲ ಆಕಾಂಕ್ಷಿ. ಅತ್ತ ಹಳೆ ಮೈಸೂರು ಭಾಗದಲ್ಲಿ ಯುಬಿ ವೆಂಕಟೇಶ್ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರೂ ಯಾವೊಬ್ಬ ಬ್ರಾಹ್ಮಣ ಸಮುದಾಯದ ಶಾಸಕರಿಗೂ ಈ ಬಾರಿ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ ಎಂಬುದು ಪ್ರಮುಖ ಅಂಶ.

ಸಂಪುಟ ರಚನೆಯಲ್ಲಿ ಜಾತಿ ಸಮೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದ್ದು, ಬ್ರಾಹ್ಮಣ ಸಮುದಾಯದ ಪ್ರತಿನಿಧಿತ್ವ ಸಂಪೂರ್ಣವಾಗಿ ಕೈ ತಪ್ಪಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರದ ಕುರಿತು ಪ್ರತಿಪಕ್ಷಗಳು ಟೀಕೆ ವ್ಯಕ್ತಪಡಿಸುವ ಸಾಧ್ಯತೆ ಇದ್ದು, ಕಾಂಗ್ರೆಸ್ ನಾಯಕತ್ವ ಇದನ್ನು ಯಾವ ರೀತಿಯಲ್ಲಿ ಸಮರ್ಥಿಸಿಕೊಳ್ಳಲಿದೆ ಎಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ.

ಇದೇ ವೇಳೆ, ಸಚಿವ ಸ್ಥಾನ ಕೈತಪ್ಪಿದ ಹಲವು ಹಿರಿಯ ಕಾಂಗ್ರೆಸ್ ನಾಯಕರ ಬೆಂಬಲಿಗರಲ್ಲೂ ಅಸಮಾಧಾನ ವ್ಯಕ್ತವಾಗಿದ್ದು, ಸಂಪುಟ ವಿಸ್ತರಣೆಯ ಬಳಿಕ ಪಕ್ಷದೊಳಗಿನ ಅಸಮಾಧಾನದ ಹೊಗೆ ಇನ್ನಷ್ಟು ಜೋರಾಗುವ ಸಾಧ್ಯತೆಗಳಿವೆ.

Related Articles

ಇತ್ತೀಚಿನ ಸುದ್ದಿಗಳು