ನೋಯ್ಡಾ ಫ್ಯಾಕ್ಟರಿಯಲ್ಲಿ ಭೀಕರ ಅಗ್ನಿ ಅವಘಡ: ಕಟ್ಟಡದ ಅವಶೇಷ ಕುಸಿದು ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸಾವು

ನೋಯ್ಡಾ: ನೋಯ್ಡಾದ ಎಲೆಕ್ಟ್ರಾನಿಕ್ ಚಿಪ್ ತಯಾರಿಕಾ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡವನ್ನು ನಂದಿಸುವ ಕಾರ್ಯಾಚರಣೆ ವೇಳೆ ಕಟ್ಟಡದ ಅವಶೇಷಗಳು ಕುಸಿದು ಬಿದ್ದು ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರ ಮಾಹಿತಿಯಂತೆ, ಈ ದುರಂತವು ಸೋಮವಾರ ತಡರಾತ್ರಿ ಕೈಗಾರಿಕಾ ಪ್ರದೇಶ ‘ಈಕೋಟೆಕ್-3’ ನಲ್ಲಿರುವ ‘ಐಎಲ್‌ಜಿಐಎಮ್’ (ILGIM) ಕಂಪನಿಯಲ್ಲಿ ನಡೆದಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅಗ್ನಿಶಾಮಕ ದಳದ ಕನಿಷ್ಠ 6 ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದ್ದವು.

ಪೊಲೀಸ್ ವಕ್ತಾರರು ತಿಳಿಸಿದಂತೆ, ಬೆಂಕಿ ನಂದಿಸುವ ಕೆಲಸ ನಡೆಯುತ್ತಿದ್ದಾಗ ಕಾರ್ಖಾನೆ ಆವರಣದ ಗೋಡೆ ಮತ್ತು ಕಬ್ಬಿಮದ ಬೀಮ್‌ವೊಂದು ದಿಢೀರನೆ ಕುಸಿದು ಬಿದ್ದಿದೆ. ಇದರ ಅಡಿಯಲ್ಲಿ ಸಿಲುಕಿ ಐದು ಮಂದಿ ಅಗ್ನಿಶಾಮಕ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ತಕ್ಷಣವೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಕೊನೆಯುಸಿರೆಳೆದಿದ್ದಾರೆ.

ನೋಯ್ಡಾ ಪೊಲೀಸರು ನೀಡಿರುವ ವಿವರಣೆಯಂತೆ, “ಆಗಸ್ಟ್ 3 ಮತ್ತು 4ರ ಮಧ್ಯರಾತ್ರಿ ಈಕೋಟೆಕ್ 3 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಐಎಲ್‌ಜಿಐಎಮ್ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಬಂದಿತ್ತು. ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ವಾಹನಗಳು ತಕ್ಷಣ ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದವು. ಆದರೆ ಕಾರ್ಯಾಚರಣೆ ವೇಳೆ ಗೋಡೆ ಮತ್ತು ಕಬ್ಬಿಮದ ಬೀಮ್ ಕುಸಿದು ಬಿದ್ದಿದ್ದರಿಂದ ಹೆಡ್ ಕಾನ್ಸ್‌ಟೇಬಲ್ ಡ್ರೈವರ್ ರಾಜ್‌ಪಾಲ್ ಸಿಂಗ್, ಅಗ್ನಿಶಾಮಕ ಸಿಬ್ಬಂದಿ ಮನೀಷ್ ಕುಮಾರ್, ಹೆಡ್ ಕಾನ್ಸ್‌ಟೇಬಲ್ ಡ್ರೈವರ್ ತೀರಥ್‌ಪಾಲ್ ಸಿಂಗ್, ಅಗ್ನಿಶಾಮಕ ಸಿಬ್ಬಂದಿ ಅಮಿತ್ ಕುಮಾರ್ ಮತ್ತು ರೋಹಿತ್ ಯಾದವ್ ಗಂಭೀರವಾಗಿ ಗಾಯಗೊಂಡಿದ್ದರು.”

ಇಬ್ಬರು ಸಿಬ್ಬಂದಿ ಸಾವು

ಆಸ್ಪತ್ರೆಯ ವೈದ್ಯರು ಅಗ್ನಿಶಾಮಕ ಸಿಬ್ಬಂದಿ ರೋಹಿತ್ ಯಾದವ್ ಮತ್ತು ಹೆಡ್ ಕಾನ್ಸ್‌ಟೇಬಲ್ ಡ್ರೈವರ್ ತೀರಥ್‌ಪಾಲ್ ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಇನ್ನುಳಿದ ಮೂವರು ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಎಸ್‌ಡಿಆರ್‌ಎಫ್ (SDRF) ತಂಡ ಸ್ಥಳದಲ್ಲಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಗಾಯಗೊಂಡಿರುವ ರಾಜ್‌ಪಾಲ್ ಸಿಂಗ್, ಮನೀಷ್ ಕುಮಾರ್ ಮತ್ತು ಅಮಿತ್ ಕುಮಾರ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು