ಕೇರಳ ಮಳೆ ಆರ್ಭಟ: ಬಲಿಯಾದವರ ಸಂಖ್ಯೆ 15ಕ್ಕೆ ಏರಿಕೆ; 12 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಜಾರಿ

ತಿರುವನಂತಪುರಂ: ಕೇರಳದಾದ್ಯಂತ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬಲಿಯಾದವರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಮತ್ತೊಬ್ಬರು ನಾಪತ್ತೆಯಾಗಿದ್ದಾರೆ. ದಕ್ಷಿಣ ತಮಿಳುನಾಡು ಕರಾವಳಿಯಲ್ಲಿ ಚಂಡಮಾರುತದ ವಾತಾವರಣ ಆವರಿಸಿರುವ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನಗಳ ಕಾಲ ಕೇರಳದಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಈ ತಿಂಗಳ 7ರವರೆಗೆ ರಾಜ್ಯದ ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಸ್ಸೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಸೇರಿದಂತೆ 12 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಸೋಮವಾರ ಮತ್ತು ಮಂಗಳವಾರ ಕೇರಳ-ಲಕ್ಷದ್ವೀಪ-ಕರ್ನಾಟಕ ಕರಾವಳಿಯುದ್ದಕ್ಕೂ ಬಲವಾದ ಗಾಳಿ ಬೀಸಲಿದೆ ಎಂದು ತಿಳಿಸಲಾಗಿದೆ. ಪ್ರವಾಹ ಸಂತ್ರಸ್ತರಾಗಿ ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆಯಾದರೂ, ಹಲವು ಶಿಬಿರಗಳಿಗೆ ಅತ್ಯಗತ್ಯ ವಸ್ತುಗಳು ತಲುಪುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಕಾಸರಗೋಡಿನಲ್ಲಿ ರಾಕ್ಷಸ ಅಲೆಗಳ ಹೊಡೆತಕ್ಕೆ ಕರಾವಳಿ ರಸ್ತೆ ಕೊಚ್ಚಿಹೋಗಿದ್ದು, 200 ಕುಟುಂಬಗಳು ಉಳಿದ ಪ್ರದೇಶಗಳಿಂದ ಸಂಪರ್ಕ ಕಳೆದುಕೊಂಡಿವೆ. ಅವರಿಗೆ ರಸ್ತೆ ಸಂಪರ್ಕವಿಲ್ಲದಂತಾಗಿದ್ದು, ಆ ಕುಟುಂಬಗಳನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಎರ್ನಾಕುಲಂನಲ್ಲಿ ಹಲವು ಪ್ರಮುಖ ಜಲಾಶಯಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇಡುಕ್ಕಿಯಲ್ಲೂ ಭಾರಿ ಮಳೆಯಿಂದಾಗಿ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ರಾಜ್ಯದಲ್ಲಿ ಭಾರಿ ಮಳೆ ಮುಂದುವರಿದಿದ್ದು, ಸರ್ಕಾರ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಿದೆ ಹಾಗೂ ಪ್ರವಾಹ ಸಂತ್ರಸ್ತರಿಗಾಗಿ 316 ಪರಿಹಾರ ಶಿಬಿರಗಳನ್ನು ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜನರು ಜಾಗರೂಕರಾಗಿರಬೇಕು: ಐಎಂಡಿ

ಅಪಾಯಕಾರಿ ಪ್ರದೇಶಗಳಲ್ಲಿರುವ ಜನರು ಜಾಗರೂಕರಾಗಿರಬೇಕು ಎಂದು ಐಎಂಡಿ ಎಚ್ಚರಿಸಿದೆ. ಭೂಕುಸಿತ, ಮಣ್ಣು ಕುಸಿತ ಮತ್ತು ದಿಢೀರ್ ಪ್ರವಾಹ ಬರುವ ಅಪಾಯವಿರುವ ಪ್ರದೇಶಗಳಲ್ಲಿ ವಾಸಿಸುವವರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನದಿ ತೀರಗಳು ಮತ್ತು ಅಣೆಕಟ್ಟುಗಳ ಕೆಳಭಾಗದ ಪ್ರದೇಶಗಳಲ್ಲಿರುವವರು ಹಗಲಿನ ವೇಳೆಯಲ್ಲೇ ಪರಿಹಾರ ಶಿಬಿರಗಳನ್ನು ತಲುಪಬೇಕು ಹಾಗೂ ಸ್ಥಳೀಯ ಸಂಸ್ಥೆಗಳು ಮತ್ತು ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಸರ್ಕಾರ ಕೋರಿದೆ.

ಭಾರಿ ಮಳೆಯ ಸಮಯದಲ್ಲಿ ನದಿಗಳು ಮತ್ತು ಜಲಮೂಲಗಳಿಗೆ ಸ್ನಾನ ಮಾಡಲು ಅಥವಾ ಮೀನು ಹಿಡಿಯಲು ಇಳಿಯಬಾರದು, ಸೇತುವೆಗಳ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವುದು ಮತ್ತು ಗುಂಪುಗೂಡುವುದನ್ನು ಮಾಡಬಾರದು ಎಂದೂ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಸಮನ್ವಯದ ಕೊರತೆಯಿಂದ ಜನರಿಗೆ ಸಂಕಷ್ಟ: ಪಿಣರಾಯಿ ವಿಜಯನ್

ವಿಪತ್ತು ನಿರ್ವಹಣೆಯಲ್ಲಿನ ನಿರ್ಲಕ್ಷ್ಯ ಮತ್ತು ಸಮನ್ವಯದ ಕೊರತೆಯಿಂದಾಗಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಹಾರ ಶಿಬಿರಗಳ ನಿರ್ವಹಣೆಯಲ್ಲಿ ಲೋಪ ದೋಷಗಳಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

“ರನ್ನಿಯಲ್ಲಿ ಸೂಕ್ತ ಮುನ್ನೆಚ್ಚರಿಕೆ ನೀಡದೆ ಅಣೆಕಟ್ಟೆಯನ್ನು ತೆರೆಯಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವರ್ತಕರು ತಮ್ಮ ಅಂಗಡಿಗಳಲ್ಲಿದ್ದ ಸರಕುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕೂಡ ಅಗತ್ಯ ಸಮಯ ನೀಡಲಿಲ್ಲ. ಇದರಿಂದಾಗಿ ಅವರು ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಯಿತು,” ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

ಪರಿಹಾರ ಶಿಬಿರಗಳಲ್ಲಿ ಆಹಾರ ವಿತರಣೆಯಲ್ಲಿ ಲೋಪಗಳಿರುವುದನ್ನು ಸರ್ಕಾರಿ ಸಂಸ್ಥೆಗಳೇ ಒಪ್ಪಿಕೊಂಡಿದ್ದು, ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಸ್ವಯಂಸೇವಕರು, ಸ್ಥಳೀಯರು ಮತ್ತು ರಾಜಕೀಯ ಕಾರ್ಯಕರ್ತರೇ ಸ್ವತಃ ಆಹಾರ ಸಿದ್ಧಪಡಿಸಿ ವಿತರಿಸಬೇಕಾಯಿತು ಎಂದಿದ್ದಾರೆ. ಆಹಾರ, ಕುಡಿಯುವ ನೀರು, ಔಷಧಗಳು, ಸುರಕ್ಷಿತ ವಸತಿ ಮತ್ತು ನಷ್ಟ ಪರಿಹಾರ ಸಮಯಕ್ಕೆ ಸರಿಯಾಗಿ ಸಿಗುವಂತೆ ನೋಡಿಕೊಳ್ಳಬೇಕು ಎಂದು ಪಿಣರಾಯಿ ವಿಜಯನ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ನಡೆದ ಲೋಪಗಳನ್ನು ಪರಾಮರ್ಶಿಸಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳಬೇಕು ಎಂದೂ ಅವರು ಸಲಹೆ ನೀಡಿದ್ದಾರೆ. ಈ ಬಿಕ್ಕಟ್ಟನ್ನು ಎದುರಿಸಲು ಸರ್ಕಾರಿ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಸ್ವಯಂಸೇವಕರು ಮತ್ತು ಸಾರ್ವಜನಿಕರೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಅವರು ಕರೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು