ಬೃಹತ್ ಪ್ರಮಾಣದ ಮತದಾರರ ಹೆಸರು ಡಿಲೀಟ್ ಆರೋಪ: ಮುಖ್ಯಮಂತ್ರಿಗೆ ನಾಗರಿಕ ಸಮಾಜ ಸಂಘಟನೆಗಳ ತುರ್ತು ಮನವಿ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ದೇಶದಲ್ಲೇ ಹಿಂದೆಂದೂ ಕಂಡಿರದ ಮಟ್ಟದಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದು ಆರೋಪಿಸಿ, ನಾಗರಿಕ ಸಮಾಜ ಸಂಘಟನೆಗಳು ಹಾಗೂ ಪ್ರಮುಖ ಗಣ್ಯರು ಮುಖ್ಯಮಂತ್ರಿಗೆ ಜಂಟಿ ಮನವಿ ಸಲ್ಲಿಸಿ ಸರ್ಕಾರದ ತುರ್ತು ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ.

ರಾಜ್ಯಾದ್ಯಂತ ಸುಮಾರು 1.09 ಕೋಟಿಗೂ ಅಧಿಕ ಮತದಾರರನ್ನು ಗೈರುಹಾಜರಿ, ವಿಳಾಸ ಬದಲಾವಣೆ, ಮರಣ ಮತ್ತು ನಕಲಿ (ASDDO) ಪಟ್ಟಿಗೆ ಸೇರಿಸಿ ಗುರುತಿಸಲಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ. ಕೇವಲ ಬೆಂಗಳೂರಿನಲ್ಲೇ ಅರ್ಧದಷ್ಟು ಮತದಾರರ ಹೆಸರುಗಳು ರದ್ದಾಗುವ ಭೀತಿಯಲ್ಲಿದ್ದು, ಸುಮಾರು 3,000 ಮತಗಟ್ಟೆಗಳಲ್ಲಿ ಶೇ.60ಕ್ಕಿಂತ ಹೆಚ್ಚು ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಬದುಕಿರುವ ಹಿರಿಯ ನಾಗರಿಕರನ್ನು ‘ಮೃತ’ ಎಂದು ನಮೂದಿಸಿರುವುದು ಹಾಗೂ ಉದ್ಯೋಗಕ್ಕಾಗಿ ವಲಸೆ ಹೋದ ಕಾರ್ಮಿಕರನ್ನು ‘ಗೈರುಹಾಜರು’ ಎಂದು ಪರಿಗಣಿಸಿರುವುದು ಸೇರಿದಂತೆ ಹಲವು ಗಂಭೀರ ಲೋಪಗಳು ನಡೆದಿವೆ ಎಂದು ಆರೋಪಿಸಲಾಗಿದೆ.

ನಟ ಪ್ರಕಾಶ್ ರಾಜ್, ಹೋರಾಟಗಾರರಾದ ತಾರಾ ರಾವ್, ನೂರ್ ಶ್ರೀಧರ್ ಸೇರಿದಂತೆ ಹಲವು ನಾಗರಿಕ ಸಂಘಟನೆಗಳ ಪ್ರಮುಖರು ಈ ಮನವಿಗೆ ಸಹಿ ಹಾಕಿದ್ದಾರೆ. ಅವಸರದಲ್ಲಿ ಕೈಗೊಂಡ ಈ ಪ್ರಕ್ರಿಯೆಯಿಂದ ಬಡ ಮತ್ತು ಮಧ್ಯಮ ವರ್ಗದ ಮತದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿರುವ ಒಕ್ಕೂಟವು, ಪರಿಷ್ಕರಣೆ ಪ್ರಕ್ರಿಯೆಗೆ ಚುನಾವಣಾ ಆಯೋಗದಿಂದ ಕನಿಷ್ಠ ಮೂರು ತಿಂಗಳ ಕಾಲಾವಕಾಶ ಪಡೆಯಬೇಕು, ‘ಸ್ಥಳಾಂತರ’ ಮತ್ತು ‘ಗೈರುಹಾಜರಿ’ ಹೆಸರಿನಲ್ಲಿ ತಕ್ಷಣದ ರದ್ದತಿಯನ್ನು ಸ್ಥಗಿತಗೊಳಿಸಿ ಮನೆ-ಮನೆಗೆ ತೆರಳಿ ಮರುಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದೆ. ಅಲ್ಲದೆ, ಪ್ರಜಾಪ್ರಭುತ್ವದ ಹಕ್ಕುಗಳನ್ನು ರಕ್ಷಿಸಲು ಅಗತ್ಯವಿದ್ದರೆ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕೆಂದು ಸರ್ಕಾರವನ್ನು ಆಗ್ರಹಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು