ನಾಲ್ಸಾರ್ ಬೆನ್ನಲ್ಲೇ ಬೆಂಗಳೂರಿನ ಎನ್‌ಎಲ್‌ಎಸ್‌ಐಯು ಕಾಲೇಜಿನಲ್ಲೂ ಸಿಜೆಐ ಸೂರ್ಯಕಾಂತ್ ವಿರುದ್ಧ ಪ್ರತಿಭಟನೆ: ಘಟಿಕೋತ್ಸವ ಆಹ್ವಾನಕ್ಕೆ ವಿದ್ಯಾರ್ಥಿಗಳಿಂದ ಆಕ್ಷೇಪ

ಬೆಂಗಳೂರು: ಹೈದರಾಬಾದ್‌ನ ನಾಲ್ಸಾರ್ (NALSAR) ಕಾನೂನು ವಿವಿಯ ವಿವಾದದ ಬೆನ್ನಲ್ಲೇ, ದೇಶದ ಮತ್ತೊಂದು ಪ್ರತಿಷ್ಠಿತ ಕಾನೂನು ಸಂಸ್ಥೆಯಾದ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU) ಘಟಿಕೋತ್ಸವಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಹಾಗೂ ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರ ಉಪಸ್ಥಿತಿಗೆ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಎನ್‌ಎಲ್‌ಎಸ್‌ಐಯು ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಶನಿವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಅಧಿಕಾರಸ್ಥರ ಮುಂದೆ ಧ್ವನಿಯೆತ್ತಿದ ನಾಲ್ಸಾರ್ ವಿದ್ಯಾರ್ಥಿಗಳ ಹೋರಾಟಕ್ಕೆ ‘ಬೇಷರತ್ ಬೆಂಬಲ’ ಘೋಷಿಸಿದ್ದಾರೆ. ಇದು ಕೇವಲ ಘಟಿಕೋತ್ಸವದ ಮುಖ್ಯ ಅತಿಥಿ ಯಾರೆಂಬುದರ ಪ್ರಶ್ನೆಯಲ್ಲ, ಪ್ರಭಾವಿ ಸಂಸ್ಥೆಗಳು ಹಾಗೂ ಸಾರ್ವಜನಿಕ ಹುದ್ದೆಗಳಲ್ಲಿರುವವರನ್ನು ಯಾವುದೇ ವೃತ್ತಿಪರ ಭೀತಿಯಿಲ್ಲದೆ ಪ್ರಶ್ನಿಸುವ ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಪ್ರಶ್ನೆಯಾಗಿದೆ ಎಂದು ವಿದ್ಯಾರ್ಥಿಗಳು ಪ್ರತಿಪಾದಿಸಿದ್ದಾರೆ.

ವಿದ್ಯಾರ್ಥಿಗಳ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವಂತೆ ಎನ್‌ರೋಲ್‌ಮೆಂಟ್ ತಡೆಹಿಡಿಯುವ ಆದೇಶ ಹೊರಡಿಸಿದ್ದ ಬಿಸಿಐ ಅಧ್ಯಕ್ಷರ ನಡವಳಿಕೆಯನ್ನು ಖಂಡಿಸಿರುವ ಅವರು, ವಿದ್ಯಾರ್ಥಿಗಳ ಸಂವಿಧಾನಬದ್ಧ ಹಕ್ಕನ್ನು ಉಲ್ಲಂಘಿಸಲು ಯತ್ನಿಸಿದ್ದಕ್ಕಾಗಿ ಬಿಸಿಐ ತಕ್ಷಣವೇ ನಾಲ್ಸಾರ್‌ನ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಯ ಬಳಿ ಬೇಷರತ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು