ಚಾಮರಾಜನಗರ ಎನ್‌ಕೌಂಟರ್: ಅರಣ್ಯ ಸಿಬ್ಬಂದಿ ಬೆಂಬಲಕ್ಕೆ ನಿಂತ ವಲಯ ಅರಣ್ಯಾಧಿಕಾರಿಗಳ ಸಂಘ; ನ್ಯಾಯಯುತ ತನಿಖೆಗೆ ಆಗ್ರಹ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ವನ್ಯಜೀವಿ ವಲಯದಲ್ಲಿ ಆಗಸ್ಟ್ 15 ರಂದು ನಡೆದ ಎನ್‌ಕೌಂಟರ್‌ನಲ್ಲಿ ಭಾಗಿಯಾದ ಸಿಬ್ಬಂದಿಯ ಬೆಂಬಲಕ್ಕೆ ನಿಂತಿರುವ ಕರ್ನಾಟಕ ರಾಜ್ಯ ವಲಯ ಅರಣ್ಯ ಅಧಿಕಾರಿಗಳ ಸಂಘ, ವನ್ಯಜೀವಿ ಸಂರಕ್ಷಣೆ ಹಾಗೂ ಕರ್ತವ್ಯದ ಭಾಗವಾಗಿ ಕೇವಲ ಆತ್ಮರಕ್ಷಣೆಗಾಗಿ ಮಾತ್ರ ಗುಂಡು ಹಾರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಕಾವೇರಿ ವನ್ಯಜೀವಿ ವಿಭಾಗದ ಚಾಮರಾಜನಗರ ವೃತ್ತ ವ್ಯಾಪ್ತಿಯಲ್ಲಿ ಮೂವರು ಶಂಕಿತ ಬೇಟೆಗಾರರು ಮೃತಪಟ್ಟಿರುವುದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಸಂಘ, ಇದೇ ವೇಳೆ ಕರ್ತವ್ಯನಿರತ ಅರಣ್ಯ ಸಿಬ್ಬಂದಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿರುವುದನ್ನು ಬಲವಾಗಿ ಖಂಡಿಸಿದೆ. ಅಲ್ಲದೆ ಮೃತರ ಸಂಬಂಧಿಕರು ಅರಣ್ಯ ಸಿಬ್ಬಂದಿ ಮತ್ತು ಇಲಾಖಾ ಆಸ್ತಿಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವುದಕ್ಕೆ ತೀವ್ರ ಆತಂಕ ವ್ಯಕ್ತಪಡಿಸಿದೆ.

ಆಗಸ್ಟ್ 15 ರ ಬೆಳಗಿನ ಜಾವ ಶಂಕಿತ ಬೇಟೆಗಾರರನ್ನು ಪತ್ತೆಹಚ್ಚಿ ಬಂಧಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದ ವೇಳೆ ಎದುರಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಸಿಬ್ಬಂದಿ ಈ ಕ್ರಮ ಕೈಗೊಂಡಿದ್ದಾರೆ ಎಂದು ಸಂಘ ತಿಳಿಸಿದೆ. ಈ ವೇಳೆ ನಡೆದ ಗುಂಡಿನ ಚಕಮಕಿ ಸಂಪೂರ್ಣವಾಗಿ ಆತ್ಮರಕ್ಷಣೆಗಾಗಿ ನಡೆದಿದ್ದಾಗಿದೆ. ಸರ್ಕಾರಿ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡುವುದು, ಸಿಬ್ಬಂದಿ ವಿರುದ್ಧ ಹೆಚ್ಚುತ್ತಿರುವ ಹಗೆತನ ಹಾಗೂ ಅರಣ್ಯ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಸಾಮಾಜಿಕ ಜಾಲತಾಣಗಳಲ್ಲಿ ನಡೆಸಲಾಗುತ್ತಿರುವ ಪ್ರಚಾರಗಳ ಬಗ್ಗೆಯೂ ಸಂಘ ಕಳವಳ ವ್ಯಕ್ತಪಡಿಸಿದೆ.

ಮುಂಚೂಣಿ ಸಿಬ್ಬಂದಿ ಎದುರಿಸುತ್ತಿರುವ ಸವಾಲುಗಳನ್ನು ಉಲ್ಲೇಖಿಸಿದ ಸಂಘ, ಅರಣ್ಯ ಮತ್ತು ವನ್ಯಸಂಪತ್ತನ್ನು ರಕ್ಷಿಸಲು ಅಧಿಕಾರಿ-ಸಿಬ್ಬಂದಿ ದುರ್ಗಮ ಪ್ರದೇಶಗಳಲ್ಲಿ ಹಗಲಿರುಳು (24×7) ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದೆ. ಇಂತಹ ಸಂದರ್ಭಗಳಲ್ಲಿ ಅನ್ಯಾಯದ ಕಾನೂನು ಕ್ರಮಗಳು ಮತ್ತು ಸೋಷಿಯಲ್ ಮೀಡಿಯಾ ಟ್ರಯಲ್‌ಗಳು ಸಿಬ್ಬಂದಿಯ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತವೆ ಹಾಗೂ ನಿತ್ಯದ ಸಂರಕ್ಷಣಾ ಮತ್ತು ಬೇಟೆ ತಡೆ ಕರ್ತವ್ಯಗಳಿಗೆ ಅಡ್ಡಿಯಾಗುತ್ತವೆ. ಇಂತಹ ಅನೇಕ ಕಾರ್ಯಾಚರಣೆಗಳಲ್ಲಿ ಇಲಾಖೆಯ ಪ್ರಾಮಾಣಿಕ ಸಿಬ್ಬಂದಿ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಎಂದು ನೆನಪಿಸಿದ ಸಂಘ, ಕರ್ತವ್ಯನಿರತ ಸಿಬ್ಬಂದಿಯ ವಿರುದ್ಧ ಯಾವುದೇ ಆಡಳಿತಾತ್ಮಕ ಅಥವಾ ಕಾನೂನು ಕ್ರಮ ಕೈಗೊಳ್ಳುವ ಮುನ್ನ ರಾಜ್ಯ ಸರ್ಕಾರವು ಸೂಕ್ತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.

ಅರಣ್ಯ ಅಧಿಕಾರಿಗಳು ನಕಲಿ ಎನ್‌ಕೌಂಟರ್ ನಡೆಸಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಈ ನಡುವೆ ಸಂಘದ ಈ ಹೇಳಿಕೆ ಹೊರಬಿದ್ದಿದೆ. ಪೊಲೀಸ್ ಪ್ರಕರಣ ದಾಖಲಾಗಿ ಪ್ರತಿಭಟನೆಗಳು ಮುಂದುವರಿದಿರುವ ನಡುವೆ, ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂಬ ಆಗ್ರಹ ಈಗ ಎರಡೂ ಕಡೆಯಿಂದ ಪ್ರಮುಖವಾಗಿ ಕೇಳಿಬರುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು