ಸಾಮಾಜಿಕ ಭದ್ರತಾ ಪಿಂಚಣಿ | ₹1.20 ಲಕ್ಷದೊಳಗಿನ ಆದಾಯ ಮಿತಿಯ ಅರ್ಹರಿಗೆ ಪಿಂಚಣಿ ಮುಂದುವರಿಕೆ: ಡಿಸಿಎಂ ಜಿ. ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು: ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ₹32,000 ದಿಂದ ₹1,20,000 ವಾರ್ಷಿಕ ಆದಾಯ ಮಿತಿ ಹೊಂದಿರುವ ಅರ್ಹ ಫಲಾನುಭವಿಗಳ ಪಿಂಚಣಿಯನ್ನು ಮುಂದುವರಿಸುವಂತೆ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ಗೃಹ ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಸೇರಿದಂತೆ ವಿವಿಧ ಸಾಮಾಜಿಕ ಪಿಂಚಣಿಗಳಿಗೆ ಈ ಹಿಂದೆ ₹32,000 ವಾರ್ಷಿಕ ಆದಾಯ ಮಿತಿ ಇತ್ತು. ಬಹುಕಾಲದಿಂದ ಈ ಮಿತಿ ಬದಲಾಗದೆ ಇದ್ದ ಕಾರಣ ಲಕ್ಷಾಂತರ ಮಂದಿ ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದರು. ಈ ಆದಾಯ ಮಿತಿಯನ್ನು ₹1,20,000 ಗಳಿಗೆ ಹೆಚ್ಚಿಸುವ ಮೂಲಕ ದೀರ್ಘಕಾಲದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ.

ಕುಟುಂಬ ದತ್ತಾಂಶದಿಂದ ಪಡೆದ ಮಾಹಿತಿಯನ್ನು ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ದತ್ತಾಂಶದೊಂದಿಗೆ ತಾಳೆ ಮಾಡಿದಾಗ ರಾಜ್ಯದಲ್ಲಿ ಸುಮಾರು 23,14,544 ಫಲಾನುಭವಿಗಳ ವಿವರಗಳು ಸಂದೇಹಾಸ್ಪದವಾಗಿ ಕಂಡುಬಂದಿದ್ದವು. ಇವರನ್ನು ಭೌತಿಕವಾಗಿ ಪರಿಶೀಲಿಸಲು ‘ಸಂಯೋಜನೆ’ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿ ಪರಿಶೀಲನೆ ನಡೆಸಲಾಗಿತ್ತು.

ಈ ಪರಿಶೀಲನೆಯ ವೇಳೆ ಸರಿಯಾದ ದಾಖಲೆಗಳನ್ನು ಒದಗಿಸದ, ನಮೂದಿಸಿದ ವಿಳಾಸದಲ್ಲಿ ವಾಸವಿಲ್ಲದ ಹಾಗೂ ಆದಾಯ ದೃಢೀಕರಣ ಪತ್ರ ಸಲ್ಲಿಸದ 18,06,032 ಮಂದಿಯ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಗ್ರಾಮ ಆಡಳಿತಾಧಿಕಾರಿಗಳು ‘ಸಂಯೋಜನೆ’ ಆ್ಯಪ್ ಮೂಲಕ ನಡೆಸಿದ ಪರಿಶೀಲನೆಯ ನಂತರ, ಸಂಬಂಧಪಟ್ಟ ತಾಲೂಕು ತಹಶೀಲ್ದಾರರು ನಿಯಮಾನುಸಾರ ಮರುಪರಿಶೀಲನೆ ನಡೆಸಿ ಅರ್ಹರಿಗೆ ಪಿಂಚಣಿ ನೀಡುವಂತೆ ಸೂಚಿಸಲಾಗಿದೆ. ಆದರೆ, ಸಂದೇಹಾಸ್ಪದ ಪಟ್ಟಿಯಲ್ಲಿದ್ದ 23,14,544 ಫಲಾನುಭವಿಗಳ ಪರಿಶೀಲನೆ ವೇಳೆ ಅವರ ಆದಾಯ ₹32,000 ಕ್ಕಿಂತ ಹೆಚ್ಚಿರುವುದು ಕಂಡುಬಂದಿತ್ತು.

ಈ ಹಿನ್ನೆಲೆಯಲ್ಲಿ, ₹32,000ಕ್ಕಿಂತ ಹೆಚ್ಚು ಹಾಗೂ ₹1,20,000ಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವಂತಹ ಅರ್ಹ ಫಲಾನುಭವಿಗಳ ಪಿಂಚಣಿಯನ್ನು ಮುಂದುವರಿಸಲು ನಿರ್ಧರಿಸಿರುವುದಾಗಿ ತಿಳಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು