ನನ್ನ ಯೌವನದ ಬಗ್ಗೆ ಹಗಲುಗನಸು ಕಾಣಬೇಡಿ: ಬಾಬಾ ರಾಮ್‌ದೇವ್‌ಗೆ ಕಂಗನಾ ರಣಾವತ್ ತೀಕ್ಷ್ಣ ತಿರುಗೇಟು

ದೆಹಲಿ: ಇಂದಿನ ಯುವ ಪೀಳಿಗೆಯನ್ನು (ಜೆನ್-ಝಡ್) ‘ಜನರೇಷನ್ ಗಟರ್’ ಎಂದು ಕರೆದಿದ್ದಕ್ಕೆ ತಮ್ಮನ್ನು ಟೀಕಿಸಿದ್ದ ಯೋಗ ಗುರು ಬಾಬಾ ರಾಮ್‌ದೇವ್ ವಿರುದ್ಧ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ರಾಮ್‌ದೇವ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕಂಗನಾ, “ಬಾಬಾ ಜೀ, ನನ್ನ ಜವಾನಿ (ಯೌವನ) ಅಥವಾ ಮಲಗುವ ಕೋಣೆಯ ಬಗ್ಗೆ ಹಗಲುಗನಸು ಕಾಣಬೇಡಿ. ಕೇವಲ ಗಾಳಿಸುದ್ದಿಗಳನ್ನು ನಂಬಿ ಮಾತನಾಡುವುದು ಬಿಡಿ; ಸುಳ್ಳು ಮತ್ತು ದಾರಿತಪ್ಪಿಸುವ ಜಾಹೀರಾತುಗಳನ್ನು ನೀಡಿದ್ದಕ್ಕಾಗಿ ನನಗೆ ಕನಿಷ್ಠ ಸುಪ್ರೀಂ ಕೋರ್ಟ್‌ನಿಂದ ಎಂದಿಗೂ ಛೀಮಾರಿ ಹಾಕಿಸಿಕೊಂಡ ಇತಿಹಾಸವಿಲ್ಲ” ಎಂದು ಪತಂಜಲಿ ವಿವಾದವನ್ನು ಮುಂದಿಟ್ಟು ತಿವಿದಿದ್ದಾರೆ.

ಮುಂದುವರಿದು ಮಾತನಾಡಿದ ಅವರು, “ನನಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್ ಅಥವಾ ಪಾಠ ಹೇಳಿಕೊಡಲು ಬರಬೇಡಿ. ನನ್ನ ವ್ಯಕ್ತಿತ್ವ ನಿಮ್ಮದಕ್ಕಿಂತ ಎಷ್ಟೋ ಪಟ್ಟು ಉತ್ತಮವಾಗಿದೆ, ನನ್ನಲ್ಲಿ ಯಾವುದೇ ವಂಚನೆಗಳು ಪತ್ತೆಯಾಗಿಲ್ಲ” ಎಂದು ತಿರುಗೇಟು ನೀಡಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬಾಬಾ ರಾಮ್‌ದೇವ್, ಯುವಜನರನ್ನು ‘ಜನರೇಷನ್ ಗಟರ್’ ಎಂದು ಕರೆದಿದ್ದ ಕಂಗನಾ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದ್ದರು. “ಆಕೆಯ ಅರ್ಹತೆಯೇನು? ಆಕೆಯ ಬಾಲ್ಯ ಮತ್ತು ಯೌವನ ಹೇಗಿತ್ತು? ಭಾರತದ ಯುವಜನರ ಬಗ್ಗೆ ಈ ರೀತಿ ಮಾತನಾಡುವುದು ಮಾನಸಿಕ ಅಸ್ವಸ್ಥತೆಯ ಲಕ್ಷಣ. ಆಕೆಯ ಪಕ್ಷವಾದ ಬಿಜೆಪಿ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ರಾಮ್‌ದೇವ್ ಕಿಡಿಕಾರಿದ್ದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ತಾಯಿ ಮತ್ತು ಆಕೆಯ ಪ್ರಿಯಕರ ಸೇರಿ ಪತಿ ಹಾಗೂ ನಾಲ್ಕು ವರ್ಷದ ಮಗುವನ್ನು ಹತ್ಯೆಗೈದ ಪ್ರಕರಣದ ಕುರಿತು ಪ್ರತಿಕ್ರಿಯಿಸುವ ವೇಳೆ ಕಂಗನಾ ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಇಂದಿನ ಯುವ ಪೀಳಿಗೆಯ ಜೀವನಶೈಲಿಯನ್ನು ತೀವ್ರವಾಗಿ ಟೀಕಿಸಿದ್ದರು. ಆ ಬೆನ್ನಲ್ಲೇ ರಾಮ್‌ದೇವ್ ಮತ್ತು ಕಂಗನಾ ನಡುವೆ ಈ ವಾಕ್ಸಮರ ಶುರುವಾಗಿದೆ.

Related Articles

ಇತ್ತೀಚಿನ ಸುದ್ದಿಗಳು