ರಾಜ್ಯದ ರೈಲ್ವೆ ನಿಲ್ದಾಣಗಳ ಕ್ಯಾಂಟೀನ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: ಅವಧಿ ಮೀರಿದ ಹಾಲು, ಕೃತಕ ಬಣ್ಣಗಳ ಬಳಕೆ ಪತ್ತೆ

ಬೆಂಗಳೂರು: ಅಸ್ವಚ್ಛತೆ ಹಾಗೂ ಆಹಾರ ಕಲಬೆರಕೆ ವಿರುದ್ಧ ರಾಜ್ಯಾದ್ಯಂತ ಕಾರ್ಯಾಚರಣೆ ತೀವ್ರಗೊಳಿಸಿರುವ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು, ಗುರುವಾರ ರಾಜ್ಯದ 36 ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿದ್ದ 112 ಆಹಾರ ಮಳಿಗೆಗಳ ಮೇಲೆ ಏಕಕಾಲಕ್ಕೆ ದಿಢೀರ್ ತಪಾಸಣೆ ನಡೆಸಿದ್ದಾರೆ.

ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಮೈಸೂರು, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ, ಹೊಸಪೇಟೆ, ದಾವಣಗೆರೆ, ಕಾರವಾರ, ಉಡುಪಿ ಹಾಗೂ ಯಾದಗಿರಿ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ. ಹುಬ್ಬಳ್ಳಿ-ಬೆಂಗಳೂರು ಹಾಗೂ ಮಂಗಳೂರು-ಕೇರಳ ನಡುವೆ ಸಂಚರಿಸುವ ವಂದೇ ಭಾರತ್ ರೈಲುಗಳ ಪ್ಯಾಂಟ್ರಿ ವ್ಯವಸ್ಥೆಯಲ್ಲಿ ಉತ್ತಮ ಗುಣಮಟ್ಟ ಕಂಡುಬಂದಿದ್ದರೆ, ಉಳಿದ ಹಲವೆಡೆ ಆಘಾತಕಾರಿ ನಿಯಮ ಉಲ್ಲಂಘನೆಗಳು ಬೆಳಕಿಗೆ ಬಂದಿವೆ.

ಮೈಸೂರು ರೈಲ್ವೆ ನಿಲ್ದಾಣದ ಕ್ಯಾಂಟೀನ್‌ಗಳಲ್ಲಿ ಪ್ಲಾಸ್ಟಿಕ್ ಶೀಟ್‌ಗಳನ್ನು ಬಳಸಿ ಇಡ್ಲಿ ಬೇಯಿಸುತ್ತಿರುವುದು ಹಾಗೂ ಅವಧಿ ಮೀರಿದ ಪದಾರ್ಥಗಳನ್ನು ಅಡುಗೆ ಕೋಣೆಯಲ್ಲಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಅವಧಿ ಮುಗಿದ ನಂದಿನಿ ಮೊಸರು ಹಾಗೂ ದೊಡ್ಲ ಹಾಲು ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲೇಬಿ ಮತ್ತು ಖೋವಾ ಪೇಡಾಗಳಿಗೆ ನಿಷೇಧಿತ ಕೃತಕ ಬಣ್ಣಗಳನ್ನು ಬಳಸುತ್ತಿರುವುದು ಕಂಡುಬಂದಿದೆ.

ಈರುಳ್ಳಿ ಮತ್ತು ತರಕಾರಿಗಳ ಮೇಲೆ ಶಿಲೀಂಧ್ರ (ಫಂಗಸ್) ಬೆಳೆದಿರುವುದು, ಅಸುರಕ್ಷಿತ ಪ್ಲಾಸ್ಟಿಕ್ ಬಕೆಟ್‌ಗಳಲ್ಲಿ ಚಟ್ನಿ ಹಾಕಿಡುವುದು, ರದ್ದಿ ಪತ್ರಿಕೆಗಳ ಮೇಲೆ ವಡೆ ಹಾಗೂ ರಟ್ಟಿನ ಪೆಟ್ಟಿಗೆಗಳಲ್ಲಿ ಸಮೋಸಾಗಳನ್ನು ಇಟ್ಟಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಕೆ.ಆರ್. ಪುರಂ ರೈಲ್ವೆ ನಿಲ್ದಾಣದ ಹೋಟೆಲ್‌ನಲ್ಲಿ ಗಂಭೀರ ಅಸ್ವಚ್ಛತೆ ಕಂಡುಬಂದಿದ್ದು, ಹಲವು ಅಂಗಡಿಗಳಲ್ಲಿ ಆಹಾರ ಸುರಕ್ಷತಾ ಪರವಾನಗಿ (FSSAI) ಪ್ರದರ್ಶಿಸದೆ, ಲೇಬಲ್ ಇಲ್ಲದ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವುದು ದೃಢಪಟ್ಟಿದೆ.

ನಿಯಮ ಉಲ್ಲಂಘಿಸಿರುವ ಮಳಿಗೆಗಳ ವಿವರವಾದ ವರದಿಯನ್ನು ರೈಲ್ವೆ ಪ್ರಾಧಿಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗುತ್ತಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ತಪ್ಪಿತಸ್ಥ ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತಾ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು