ವಂದೇ ಮಾತರಂ ಗೀತೆಯ ಕೇವಲ ಎರಡು ಚರಣ ಹಾಡುವ ಕಾಂಗ್ರೆಸ್ ನಿರ್ಧಾರ ದೇಶವಿರೋಧಿ: ಅಮಿತ್ ಶಾ ತೀವ್ರ ವಾಗ್ದಾಳಿ

ದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯುಸಿ) ‘ವಂದೇ ಮಾತರಂ’ ಗೀತೆಯ ಪೂರ್ಣ ಗಾಯನದ ಬದಲಿಗೆ ಕೇವಲ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ನಿರ್ಧರಿಸಿರುವುದು ದೇಶವಿರೋಧಿ ನಿಲುವಾಗಿದ್ದು, ಸಂಸತ್ತು ರೂಪಿಸಿದ ಕಾನೂನಿನ ನೇರ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿಕಾರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಮಿತ್ ಶಾ, “1937 ರಲ್ಲಿ ತುಷ್ಟೀಕರಣದ ಉದ್ದೇಶದಿಂದ ಕಾಂಗ್ರೆಸ್ ಪಕ್ಷವೇ ‘ವಂದೇ ಮಾತರಂ’ ಅನ್ನು ಎರಡು ತುಂಡುಗಳನ್ನಾಗಿ ಮಾಡಿತ್ತು. ಅದೇ ನಿಲುವು ದ್ವಿರಾಷ್ಟ್ರ ಸಿದ್ಧಾಂತಕ್ಕೆ ಬಲ ತಂದುಕೊಟ್ಟು, ಕೊನೆಗೆ ದೇಶದ ವಿಭಜನೆಗೆ ಕಾರಣವಾಯಿತು. ‘ವಂದೇ ಮಾತರಂ’ನ 150ನೇ ವರ್ಷಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಈ ಐತಿಹಾಸಿಕ ತಪ್ಪನ್ನು ತಿದ್ದಿ, ಪೂರ್ಣ ಗೀತೆಯ ಗಾಯನಕ್ಕೆ ಕಾನೂನಾತ್ಮಕ ರೂಪ ನೀಡಿದೆ. ಆದರೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಮತ್ತೆ ಅದೇ ವೋಟ್ ಬ್ಯಾಂಕ್ ಮತ್ತು ತುಷ್ಟೀಕರಣ ರಾಜಕಾರಣದ ಹಾದಿ ಹಿಡಿದಿದೆ,” ಎಂದು ಆರೋಪಿಸಿದ್ದಾರೆ.

‘ವಂದೇ ಮಾತರಂ’ ಗೀತೆಯನ್ನು ತುಂಡರಿಸುವ ತಪ್ಪನ್ನು ಕಾಂಗ್ರೆಸ್ ಒಮ್ಮೆ ಮಾಡಿ ದೇಶವು ಅದರ ಭೀಕರ ಪರಿಣಾಮವನ್ನು ಅನುಭವಿಸಿದೆ. ಆದ್ದರಿಂದ ಕಾಂಗ್ರೆಸ್‌ನ ಈ ತುಷ್ಟೀಕರಣ ರಾಜಕಾರಣದ ವಿರುದ್ಧ ದೇಶವಾಸಿಗಳು ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದು ಅಮಿತ್ ಶಾ ಕರೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು